ಭಟ್ಕಳದಲ್ಲಿ ಮಾರಿಜಾತ್ರೆಗೆ ಅದ್ಧೂರಿ ತೆರೆ

| Published : Aug 02 2024, 12:49 AM IST

ಸಾರಾಂಶ

ಮಾರಿಜಾತ್ರೆಯ ಎರಡನೇ ದಿನವಾದ ಗುರುವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಸಾವಿರಾರು ಭಕ್ತರು ಆಗಮಿಸಿ ಮಾರಿಯಮ್ಮನ ದರ್ಶನ ಪಡೆದರು.

ಭಟ್ಕಳ: ಇಲ್ಲಿನ ಸುಪ್ರಸಿದ್ಧ ಮಾರಿಜಾತ್ರೆಯು ಗುರುವಾರ ಸಂಜೆ ಮಾರಿಯಮ್ಮನ ಉತ್ಸವ ಮೂರ್ತಿಯನ್ನು ಭಾರೀ ಮಳೆಯ ಮಧ್ಯೆಯೂ ಮೆರವಣಿಗೆಯಲ್ಲಿ ಹೊತ್ತೊಯ್ದು ಜಾಲಿಕೋಡಿ ಸಮುದ್ರದಲ್ಲಿ ವಿಸರ್ಜನೆ ಮಾಡುವುದರ ಮೂಲಕ ಸಂಪನ್ನಗೊಂಡಿತು.

ಮಾರಿ ಉತ್ಸವ ಮೂರ್ತಿಯನ್ನು ಬುಧವಾರ ಬೆಳಗಿನ ಜಾವ ಮೆರವಣಿಗೆಯ ಮೂಲಕ ತಂದು ಪಟ್ಟಣದ ಮಾರಿಗುಡಿಯಲ್ಲಿ ಪ್ರತಿಷ್ಠಾಪಿಸಿ ಪ್ರಥಮ ಪೂಜೆಯನ್ನು ನೆರವೇರಿಸುವ ಮೂಲಕ ವರ್ಷಂಪ್ರತಿ ನಡೆಯುವ ಎರಡು ದಿನಗಳ ಮಾರಿ ಜಾತ್ರೆಗೆ ಚಾಲನೆ ನೀಡಲಾಗಿತ್ತು. ಭಾರೀ ಮಳೆಯ ಮಧ್ಯೆಯೂ ಎರಡು ದಿನಗಳ ಕಾಲ ಊರ- ಪರವೂರ ಭಕ್ತರು ಮಾರಿಗುಡಿಗೆ ಆಗಮಿಸಿ ಮಾರಿಯಮ್ಮನಿಗೆ ಹೂವು, ಹಣ್ಣು- ಕಾಯಿ, ತೊಟ್ಟಿಲು, ಹೂವಿನ ಪೇಟಾ, ಕಣ್ಣು ಇತ್ಯಾದಿಗಳನ್ನು ಹರಕೆ ರೂಪದಲ್ಲಿ ಸಲ್ಲಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಬುಧವಾರ ರಾತ್ರಿ ಮಾರಿಯಮ್ಮನ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ಮಾರಿಜಾತ್ರೆಯ ಎರಡನೇ ದಿನವಾದ ಗುರುವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಸಾವಿರಾರು ಭಕ್ತರು ಆಗಮಿಸಿ ಮಾರಿಯಮ್ಮನ ದರ್ಶನ ಪಡೆದರು.

ಗುರುವಾರ ಸಂಜೆ 4.20ಕ್ಕೆ ಮಾರಿಯಮ್ಮನಿಗೆ ಅಂತಿಮ ಪೂಜೆ ಸಲ್ಲಿಸಿ ಮಾರಿ ಉತ್ಸವಮೂರ್ತಿಯನ್ನು ಬೃಹತ್ ಮೆರವಣಿಗೆಯಲ್ಲಿ ಎಂಟು ಕಿಮೀ ದೂರದ ಜಾಲಿಕೋಡಿ ಸಮುದ್ರದಲ್ಲಿ ಹಿಂದಿನ ಸಂಪ್ರದಾಯದಂತೆ ವಿಸರ್ಜಿಸಲಾಯಿತು.

ಮೆರವಣಿಗೆ ಸಂದರ್ಭದಲ್ಲಿ ಭಾರೀ ಮಳೆ ಸುರಿದರೂ ಸಹ ಭಕ್ತರ ಉತ್ಸಾಹಕ್ಕೇನೂ ಕಡಿಮೆ ಇರಲಿಲ್ಲ. ಮಾರಿ ವಿಸರ್ಜನಾ ಮೆರವಣಿಗೆಯಲ್ಲಿ ಮಾರಿಗುಡಿ ಆಡಳಿತ ಸಮಿತಿಯ ಅಧ್ಯಕ್ಷ ಪರಮೇಶ್ವರ ನಾಯ್ಕ, ಸದಸ್ಯರಾದ ಶಂಕರ ಶೆಟ್ಟಿ, ಶ್ರೀಧರ ನಾಯ್ಕ, ಶ್ರೀಪಾದ ಕಂಚುಗಾರ, ಸುರೇಂದ್ರ ಭಟ್ಕಳ, ಸುರೇಶ ಆಚಾರ್ಯ, ಪಶ್ಚಿಮಘಟ್ಟಗಳ ಸಂರಕ್ಷಣಾ ಪಡೆಯ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ, ಶ್ರೀಕಾಂತ ನಾಯ್ಕ, ದಿನೇಶ ನಾಯ್ಕ, ಶಾಂತರಾಮ ಭಟ್ಕಳ ದೀಪಕ ನಾಯ್ಕ, ಶ್ರೀನಿವಾಸ ನಾಯ್ಕ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಮಾರಿಮೂರ್ತಿಯ ವಿಸರ್ಜನೆ ಹಿನ್ನೆಲೆ ಮಾರಿಗುಡಿಯಿಂದ ಜಾಲಿಕೋಡಿ ಸಮುದ್ರದ ವರೆಗೂ ಬಿಗು ಪೊಲೀಸ್ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.