ಸಾರಾಂಶ
ಬಾಳೆಹೊನ್ನೂರು: ಜಿಲ್ಲೆಯಲ್ಲಿಯೇ ಅತೀ ದೊಡ್ಡ ಗಣೇಶೋತ್ಸವದಲ್ಲಿ ಒಂದಾದ ಇಲ್ಲಿನ ವಿದ್ಯಾಗಣಪತಿ ಸೇವಾ ಸಮಿತಿ ಕಳೆದ ಹದಿನೈದು ದಿನಗಳಿಂದ ಆಯೋಜಿಸಿದ್ದ 67ನೇ ಸಾರ್ವಜನಿಕ ಗಣೇಶೋತ್ಸವಕ್ಕೆ ಬುಧವಾರ ವೈಭವದ ತೆರೆ ಬಿದ್ದಿತು.
ಗಣೇಶೋತ್ಸವದ ಅಂಗವಾಗಿ ಹದಿನೈದು ದಿನಗಳ ಪರ್ಯಂತ ಗಣೇಶನ ಪ್ರತಿಷ್ಠಾಪನೆ, ಗಣಹೋಮ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದವು. ಸ್ಥಳೀಯರು ನಡೆಸಿಕೊಟ್ಟ ಭಜನೆ, ವಿವಿಧ ತಂಡಗಳು ನಡೆಸಿದ ಸುಗಮ ಸಂಗೀತ, ಭರತನಾಟ್ಯ, ನೃತ್ಯರೂಪಕ, ಕನ್ನಡ, ತುಳು ನಾಟಕ, ಯಕ್ಷಗಾನ, ಆರ್ಕೆಸ್ಟ್ರಾ ವಿನೂತನ ಮಾದರಿಯ ನೃತ್ಯ ಕಾರ್ಯಕ್ರಮ, ಶಾಲಾ ಮಕ್ಕಳ ಜಾನಪದ ಹಾಗೂ ಸಿನಿಮಾ ನೃತ್ಯ ಸ್ಪರ್ಧೆ, ಸಾರ್ವಜನಿಕರ ನೃತ್ಯ, ಗಾಯನ ಸ್ಪರ್ಧೆಗಳು ಸೇರಿದಂತೆ ವಿವಿಧ ಟಿವಿ ವಾಹಿನಿಗಳ ನಟ, ಕಲಾವಿದರ ಕಾರ್ಯಕ್ರಮಗಳು ಭಕ್ತರ ಮನಸೂರೆಗೊಂಡವು.ಸಮಾರೋಪ ಸಮಾರಂಭದಂದು ನಡೆದ ನೆಲಮಂಗಲ ಶಿವಗಂಗಾ ಕ್ಷೇತ್ರದ ಮೇಲಣಗವಿ ವೀರಸಿಂಹಾಸನ ಸಂಸ್ಥಾನ ಮಠದ ಡಾ.ಮಲಯಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅವರ ಆಶೀವರ್ಚನ ಭಕ್ತರಿಗೆ ಜೀವನದ ಮೌಲ್ಯ, ಧಾರ್ಮಿಕ ಪ್ರಜ್ಞೆಯನ್ನು ಎಚ್ಚರಿಸಿತು. ಹದಿನೈದು ದಿನಗಳ ಪರ್ಯಂತ ಅರ್ಚಕರಾದ ಕೆ.ಎಸ್.ಪ್ರಕಾಶ್‌ಭಟ್ ಧಾರ್ಮಿಕ ವಿಧಿ ವಿಧಾನಗಳ ನೇತೃತ್ವ ವಹಿಸಿದ್ದರು.ಹದಿನೈದು ಸಾವಿರಕ್ಕೂ ಅಧಿಕ ಭಕ್ತರು ಭಾಗಿ:ವಿಸರ್ಜನಾ ಮಹೋತ್ಸವದ ದಿನವಾದ ಬುಧವಾರ ಆಯೋಜಿಸಿದ್ದ ಅನ್ನ ಸಂತರ್ಪಣೆಯಲ್ಲಿ ಹದಿನೈದು ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡು ಅನ್ನ ಪ್ರಸಾದ ಸ್ವೀಕರಿಸಿದರು. ಅನ್ನದಾನ ಸಮಿತಿಯ ಪ್ರಮುಖರಾದ ಎಂ.ಎಸ್.ಅರುಣೇಶ್, ಸಮಿತಿ ಅಧ್ಯಕ್ಷ ಕೆ.ಎಸ್.ಚನ್ನಗಿರಿ ನೇತೃತ್ವದಲ್ಲಿ ಸಮಿತಿಯ ಸದಸ್ಯರು ಅನ್ನ ಸಂತರ್ಪಣೆ ಸೇವೆಯನ್ನು ಅಚ್ಚುಕಟ್ಟಾಗಿ ನೆರವೇರಿಸಿದರು. ಅನ್ನ ಸಂತರ್ಪಣೆಯಲ್ಲಿ ಅನ್ನ, ಸಾಂಬಾರ್, ಪಾಯಸ, ಪಲ್ಯ, ಮಜ್ಜಿಗೆ ಮತ್ತಿತರ ಖಾದ್ಯಗಳನ್ನು ನೀಡಲಾಯಿತು.ನಂತರ ನಡೆದ ವಿಸರ್ಜನಾ ಮೆರವಣಿಗೆಯಲ್ಲಿ ಪ್ರಭು ಇವೆಂಟ್ಸ್ ತಂಡದ ಕೀಲುಕುದುರೆ, ಕರಗನೃತ್ಯ, ಕೇರಳ ದೈವಬೊಂಬೆ, ಕೋಳಿಗಳು, ರಮೇಶ್ ಬ್ಯಾಂಡ್‌ಸೆಟ್ ವಾದನ, ಮಾರ್ಪಳ್ಳಿ ಚಂಡೆವಾದನ, ಚಿಲಿಪಿಲಿ ಬೊಂಬೆಗಳ ನೃತ್ಯ, ಸ್ಥಳೀಯ ಹಲಗೆ ಓಲಗದ ವಾದನ, ಚಲಿಸುವ ಆರ್ಕೆಸ್ಟ್ರಾ ಸೇರಿದಂತೆ ವಿವಿಧ ಕಲಾತಂಡಗಳು ಹಾಗೂ ಜೇಸಿ ವೃತ್ತದಲ್ಲಿ ಆಕರ್ಷಕ ಪಟಾಕಿ ಮೆರವಣಿಗೆಗೆ ಪ್ರದರ್ಶನ ಇನ್ನಷ್ಟು ಕಳೆಕಟ್ಟಿದವು. ಮೆರವಣಿಗೆಯಲ್ಲಿಯೂ ಹತ್ತು ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ವಿಶೇಷ ಅಲಂಕೃತಗೊಳಿಸಿದ್ದ ಟ್ರ್ಯಾಕ್ಟರ್‌ನಲ್ಲಿ ಸ್ಥಳೀಯ ಕಲಾವಿದ ಮಾಗುಂಡಿ ತಂಗಳಮನೆಯ ಪ್ರಸಾದ್ ಆಚಾರ್ಯ ತಯಾರಿಸಿದ್ದ ಗಣೇಶ ವಿಗ್ರಹ ಕುಳ್ಳಿರಿಸಿದ್ದು ಭಕ್ತರ ಗಮನ ಸೆಳೆಯಿತು.
ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಸದಸ್ಯರು ಮೆರವಣಿಗೆಯ ಮುಂಚೂಣಿಯಲ್ಲಿ ನಿಂತು ಸಾಥ್ ನೀಡಿದರು. ಮೆರವಣಿಗೆಯು ಕಲಾರಂಗ ಕ್ರೀಡಾಂಗಣದಿಂದ ಹೊರಟು ಕೊಪ್ಪ ರಸ್ತೆಯ ರಂಭಾಪುರಿ ಪೆಟ್ರೋಲ್ ಬಂಕ್ ತಲುಪಿ, ಮುಖ್ಯರಸ್ತೆಯಲ್ಲಿ ಬಸ್ ನಿಲ್ದಾಣ, ಜೇಸಿ ವೃತ್ತ, ರೋಟರಿ ವೃತ್ತಕ್ಕೆ ತಲುಪಿತು.ಮೆರವಣಿಗೆ ಮುಖ್ಯರಸ್ತೆಯಲ್ಲಿ ಬರುತ್ತಿದ್ದಂತೆ ನೂರಾರು ಜನ ವರ್ತಕರು ಸಾವಿರಾರು ತೆಂಗಿನ ಕಾಯಿ ಒಡೆದು, ಪಟಾಕಿ ಸಿಡಿಸಿ ಹಾಗೂ ಬೃಹತ್ ಹಾರಗಳನ್ನು ಹಾಕಿ ಪೂಜೆ ಸಲ್ಲಿಸುವ ಮೂಲಕ ಭಕ್ತಿ ಸಮರ್ಪಿಸಿದರು. ಹಲವು ಕಡೆಗಳಲ್ಲಿ ಭಕ್ತರಿಗೆ ಪ್ರಸಾದ ರೂಪದಲ್ಲಿ ಅವಲಕ್ಕಿ, ಸಿಹಿ, ಪಾನೀಯ ನೀಡಲಾಯಿತು. ಚಲನಚಿತ್ರಗೀತೆ ಹಾಗೂ ವಿವಿಧ ವಾದ್ಯಗಳಿಗೆ ಹತ್ತಾರು ಊರುಗಳಿಂದ ಆಗಮಿಸಿದ್ದ ಯುವಕ, ಯುವತಿಯರು ಹುಚ್ಚೆದ್ದು ಕುಣಿಯುತ್ತಿದ್ದರು. ಮೆರವಣಿಗೆಯ ಬಳಿಕ ಗಣೇಶನನ್ನು ಭದ್ರಾನದಿಯಲ್ಲಿ ವಿಸರ್ಜಿಸುವ ಮೂಲಕ ಗಣೇಶೋತ್ಸವಕ್ಕೆ ವೈಭವದ ತೆರೆ ಕಂಡಿತು. ಪೊಲೀಸರಿಂದ ಬಿಗಿ ಭದ್ರತೆ:ಮುಂಜಾಗರೂಕ ಕ್ರಮವಾಗಿ ಪಟ್ಟಣದಾದ್ಯಂತ 250ಕ್ಕೂ ಅಧಿಕ ಪೊಲೀಸರನ್ನು, 100ಕ್ಕೂ ರ‍್ಯಾಪಿಡ್ ಆ್ಯಕ್ಷನ್ ಪೋರ್ಸ್ ಸಿಬ್ಬಂದಿ ಹಾಗೂ ಅಗ್ನಿಶಾಮಕ ಸಿಬ್ಬಂದಿಗಯನ್ನು ನಿಯೋಜಿಸಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮುಂಜಾಗರೂಕ ಕ್ರಮವಾಗಿ ಆಯಕಟ್ಟಿನ ಸ್ಥಳಗಳಲ್ಲಿ ಬಾಂಬ್ ನಿಷ್ಕ್ರಿಯ ದಳದ ತಜ್ಞರು ಪರಿಶೀಲನೆ ನಡೆಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ ಸ್ಥಳಕ್ಕೆ ಆಗಮಿಸಿ ಬಂದೋಬಸ್ತ್ ಪರಿಶೀಲನೆ ನಡೆಸಿದರು. ಕೊಪ್ಪ ಡಿವೈಎಸ್ಪಿ ಬಾಲಾಜಿ ಸಿಂಗ್, ಎನ್.ಆರ್.ಪುರ ಸಿಪಿಐ ಗುರು ಕಾಮತ್, ಪಿಎಸ್‌ಐ ರವೀಶ್ ಮತ್ತು ಸಿಬ್ಬಂದಿ ಬಂದೋಬಸ್ತ್‌ನ ಉಸ್ತುವಾರಿ ವಹಿಸಿದ್ದರು. ಬಾಳೆಹೊನ್ನೂರು ಠಾಣಾ ವ್ಯಾಪ್ತಿಯಲ್ಲಿ ಮದ್ಯಮಾರಾಟ ನಿಷೇಧ ಹಾಗೂ ಮುಖ್ಯರಸ್ತೆಯಲ್ಲಿ ವಾಹನ ನಿಲುಗಡೆಗೆ ಬ್ರೇಕ್ ಹಾಕಲಾಗಿತ್ತು.ಉತ್ಸವ ವಾಹನಕ್ಕೆ ಸಾರಥಿಯಾದ ಶಾಸಕ ಬಾಳೆಹೊನ್ನೂರು ವಿದ್ಯಾಗಣಪತಿ ಮಹೋತ್ಸವದ ಗಣೇಶ ವಿಗ್ರಹವನ್ನು ಪಟ್ಟಣದಲ್ಲಿ ಮೆರವಣಿಗೆ ನಡೆಸಲು ಸಿದ್ಧಗೊಳಿಸಿದ್ದ ಅಲಂಕೃತ ಉತ್ಸವ ವಾಹನವನ್ನು ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಸ್ವತಃ ತಾವೇ ಚಲಾಯಿಸುವ ಮೂಲಕ ಮೆರವಣಿಗೆಯಲ್ಲಿ ಗಮನ ಸೆಳೆದರು.ಕಲಾರಂಗ ಕ್ರೀಡಾಂಗಣದಲ್ಲಿ ಮೆರವಣಿಗೆಗಾಗಿ ಗಣೇಶ ವಿಗ್ರಹವನ್ನು ಉತ್ಸವ ವಾಹನಕ್ಕೆ ತಂದು ಕುಳ್ಳಿರಿಸಿದ ಬಳಿಕ ಅರ್ಚಕರು ವಾಹನಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಸಕರು ಸ್ಥಳದಲ್ಲಿ ಹಾಜರಿದ್ದು, ಉತ್ಸವ ವಾಹನ ಹಾಗೂ ಗಣೇಶನಿಗೆ ಪೂಜೆ ಸಲ್ಲಿಸಿ ನಮಸ್ಕರಿಸಿ, ಉತ್ಸವ ವಾಹನಕ್ಕೆ ಈಡುಗಾಯಿ ಸುತ್ತು ಭರಿಸಿ ಒಡೆದರು. ಬಳಿಕ ವಾಹನಕ್ಕೆ ನಮಸ್ಕರಿಸಿ ಮೈಸೂರು ಪೇಟ ತೊಟ್ಟು, ಕೇಸರಿ ಶಾಲು ಧರಿಸಿ ಟ್ರ್ಯಾಕ್ಟರ್‌ನಲ್ಲಿ ಚಾಲಕನಾಗಿ ಕುಳಿತು ಗಣೇಶನಿಗೆ ಸಾರಥಿಯಾದರು. ಈ ಅಪರೂಪದ ಸಂದರ್ಭಕ್ಕೆ ಸ್ಥಳದಲ್ಲಿ ಭಕ್ತರು, ಸಾರ್ವಜನಿಕರು ಶಿಳ್ಳೆ, ಕೇಕೆ ಹಾಕಿ ಸಂಭ್ರಮಿಸಿದರು. ಹಲವರು ಶಾಸಕರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸಪಟ್ಟರು. ಬಳಿಕ ಶಾಸಕರು ಮಲೆನಾಡಿನ ಹಲಗೆ ಓಲಗಕ್ಕೆ ಭಕ್ತರೊಂದಿಗೆ ಸೇರಿ ನರ್ತಿಸುವ ಮೂಲಕ ಗಮನಸೆಳೆದರು.
ಸಾಮರಸ್ಯ, ಸದ್ಭಾವನೆಗೆ ಕ್ಷೇತ್ರಸಾಕ್ಷಿ: ರಾಜೇಗೌಡ
ಶಾಂತಿ, ಸಾಮರಸ್ಯ, ಸದ್ಭಾವನೆಗೆ ಶೃಂಗೇರಿ ಕ್ಷೇತ್ರ ಸಾಕ್ಷಿಯಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.ಪಟ್ಟಣದ ಗಣೇಶೋತ್ಸವದ ಉತ್ಸವ ವಾಹನ ಚಲಾಯಿಸುವ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಳೆಹೊನ್ನೂರಿನಲ್ಲಿ ಜಿಲ್ಲೆಯಲ್ಲಿಯೇ ಅತ್ಯಂತ ದೊಡ್ಡಮಟ್ಟದಲ್ಲಿ ಶಿಸ್ತುಬದ್ಧವಾಗಿ ಗಣೇಶೋತ್ಸವ ಆಚರಿಸಿ ಪ್ರತೀ ವರ್ಷವೂ ಮಾದರಿಯಾಗಿದ್ದು, ಅತ್ಯಂತ ವಿಜೃಂಭಣೆಯೊಂದಿಗೆ ರಾಜ್ಯದಲ್ಲಿಯೂ ಗಮನಸೆಳೆದಿದೆ. ವಿವಿಧ ಊರುಗಳಿಂದ ಇದನ್ನು ವೀಕ್ಷಿಸಲು ಜನರೂ ಬರುತ್ತಾರೆ. ಎಲ್ಲಾ ಧರ್ಮೀಯರೂ ಈ ಉತ್ಸವಕ್ಕೆ ಸಹಕರಿಸುವ ಮೂಲಕ ಯಶಸ್ಸಿಗೆ ಶ್ರಮಿಸುತ್ತಾರೆ. ಶೃಂಗೇರಿ ಕ್ಷೇತ್ರವೇ ವಿಶಿಷ್ಟ ಕ್ಷೇತ್ರವಾಗಿದ್ದು, ಇದು ಇಲ್ಲಿನ ಧರ್ಮ ಶ್ರದ್ಧೆಗೆ ಸಾಕ್ಷಿಯಾಗಿದೆ ಎಂದರು.