ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಈ ಬಾರಿ ಏಪ್ರಿಲ್ 6 ರಂದು ಜರುಗಲಿರುವ ರಾಮನವಮಿ ಪ್ರಯುಕ್ತ ಮಡಿಕೇರಿಯ ಕೋದಂಡರಾಮ ದೇವಾಲಯದ ರಾಮೋತ್ಸವ ಸಮಿತಿ ವತಿಯಿಂದ ಏಪ್ರಿಲ್ 5 ರಂದು ನಗರದಲ್ಲಿ ಬೃಹತ್ ಮೆರವಣಿಗೆ ಜರುಗಲಿದೆ. ಏಪ್ರಿಲ್ 5 ಹಾಗೂ 6 ರಂದು 2 ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 2 ದಿನಗಳ ಕಾಲ ಸುಮಾರು 10, 000 ಮಂದಿಗೆ ಅನ್ನದಾನ ಕೂಡ ನಡೆಯಲಿದೆ.ರಾಮೋತ್ಸವ ಸಂಬಂಧ ಕೋದಂಡರಾಮ ದೇವಾಲಯದ ಸಭಾಂಗಣದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ರಾಮೋತ್ಸವ ಸಮಿತಿ ಅಧ್ಯಕ್ಷ ಕೆ.ಎಂ ಗಣೇಶ್ ಅವರು, ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಜಾತಿ-ಸಂಘರ್ಷ ಹೆಚ್ಚಾಗುತ್ತಿದೆ. ಹಿಂದೂ ಧರ್ಮದಡಿಯಲ್ಲಿ ಎಲ್ಲರೂ ಒಂದೇ ಎಂಬ ಮನೋಭಾವನೆಯನ್ನು ಮೂಡಿಸಲು, ಒಗ್ಗಟ್ಟನ್ನು ಪ್ರದರ್ಶಿಸಲು ಈ ಬಾರಿ ಜಿಲ್ಲೆಯಲ್ಲಿನ ಸರ್ವಜನಾಂಗದವರನ್ನು ಸೇರಿಸಿ ರಾಮೋತ್ಸವ ಆಚರಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಈಗಾಗಲೇ ಮುಖ್ಯ ಸಮಿತಿ ಹಾಗೂ ಉಪಮಿತಿಗಳನ್ನೂ ರಚಿಸಲಾಗಿದೆ. ಮಹಾನ್ ಪುರುಷ ರಾಮನ ರಾಜ್ಯದಲ್ಲಿ ದ್ವೇಷ ಇರಲಿಲ್ಲ, ಅಸೂಯೆ ಇರಲಿಲ್ಲ, ಜಾತಿ ವ್ಯವಸ್ಥೆ ಇರಲಿಲ್ಲ. ಈ ಕನಸನ್ನು ಗಾಂಧೀಜಿ ನನಸು ಮಾಡುವಂತೆ ಹೇಳಿದ್ದರು. ಈ ನಿಟ್ಟಿನಲ್ಲಿ ನಾವು ಸರ್ವಜನಾಂಗದವರನ್ನು ಒಳಗೊಂಡ ಸಮಿತಿ ಮಾಡಿದ್ದೇವೆ. ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಎಲ್ಲ ಸಮಾಜದವರನ್ನು ಆಹ್ವಾನಿಸಿದ್ದೇವೆ. ಮೆರವಣಿಗೆ ಸಂದರ್ಭ ತಮ್ಮ-ತಮ್ಮ ಸಾಂಪ್ರದಾಯಿಕ ಉಡುಪಿನಲ್ಲಿಯೇ ಆಗಮಿಸಿ ವಿವಿಧತೆಯಲ್ಲಿ ಏಕತೆ ಸಾರುವ ಹಿಂದೂ ಧರ್ಮದ ಒಗ್ಗಟ್ಟನ್ನು ಪ್ರದರ್ಶಿಸಲೂ ಮನವಿ ಮಾಡಿದ್ದೇವೆ ಎಂದರು. 2 ದಿನಗಳ ಕಾಲ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕೂಡ ವಿವಿಧ ಸಮಾಜದವರು ತಮ್ಮ-ತಮ್ಮ ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮಗಳನ್ನು ನಡೆಸಿಕೊಡಲೂ ಮನವಿ ಮಾಡಿದ್ದೇವೆ ಎಂದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ.ಮೇಚೀರ ಸುಭಾಶ್ ನಾಣಯ್ಯ ಅವರು ಮಾತನಾಡಿ, ಇಂತಹ ಕಾರ್ಯಕ್ರಮಗಳು ಕೊಡಗಿನಾದ್ಯಂತ ನಡೆಯಲಿ. ಎಲ್ಲರೂ ಒಂದಾಗಿ ಸಾಮರಸ್ಯದಿಂದ ಬಾಳುವಂತಾಗಲಿ ಎಂದು ಆಶಿಸಿದರು.ಮತ್ತೋರ್ವ ಮುಖ್ಯ ಅತಿಥಿ ಎಫ್.ಎಂ.ಸಿ ಕಾಲೇಜಿನ ಪ್ರಾಧ್ಯಾಪಕ ಪ್ರೊಫೆಸರ್ ಮೇಚೀರ ರವಿಶಂಕರ್ ನಾಣಯ್ಯ ಅವರು ಮಾತನಾಡಿ, ಭಾರತ ದೇಶ ನಿರ್ಮಾಣದಲ್ಲಿ ಶ್ರೀರಾಮ - ಶ್ರೀಕೃಷ್ಣರು ಅಡಿಪಾಯ ಹಾಕಿದ್ದಾರೆ. ಅವರು ಜೀವನ ಕ್ರಮ ಅನುಸರಣೆಯೇ ಹಿಂದೂ ಸಂಸ್ಕೃತಿ. ಕೊಡಗಿನಲ್ಲಿ ಇತ್ತೀಚೆಗೆ ಆದಂತಹ ಘಟನೆಗಳು ವಿಪರ್ಯಾಸ. ಏನೇ ಭಿನ್ನಾಭಿಪ್ರಾಯಗಳಿದ್ದರೂ ಅವುಗಳನ್ನು ಬಗೆಹರಿಸಬೇಕು. ರಾಮೋತ್ಸವವನ್ನು ವಿಜೃಂಭಣೆಯಿಂದ ಮಾಡುವ ಉದ್ದೇಶ ಹೊಂದಲಾಗಿದೆ. ಇಲ್ಲಿ ಎಲ್ಲರ ಭಾಗವಹಿಸುವಿಕೆ ಮುಖ್ಯ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಡಾ. ಚೌರೀರ ಶ್ಯಾಂ ಅಪ್ಪಣ್ಣ ಮಾತನಾಡಿ, ಇಂತಹ ಕಾರ್ಯಕ್ರಮಗಳಲ್ಲಿ ಎಲ್ಲರೂ ಕೂಡ ತಮ್ಮ-ತಮ್ಮ ಕೈಯಲ್ಲಾದಷ್ಟು ಧನಸಹಾಯ ಮಾಡಬೇಕು ಎಂದರು.ಸಭೆಯಲ್ಲಿ ಪ್ರಮುಖರಾದ ಕೂಡಂಡ ರಾಜೇಂದ್ರ, ಕಾಳಚಂಡ ರಾಣಿ ಗಣಪತಿ, ಡಾ.ಯಶೋಧರ ಪೂಜಾರಿ, ರಾಮೋತ್ಸವ ಸಮಿತಿ ಖಜಾಂಚಿ ಡಾ.ಮೋಹನ್ ಅಪ್ಪಾಜಿ, ರಾಮೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಬೊಳ್ಳಜಿರ ಅಯ್ಯಪ್ಪ, ಕೋದಂಡರಾಮ ದಸರಾ ಸಮಿತಿ ಮಾಜಿ ಅಧ್ಯಕ್ಷೆ ಜಯಂತಿ ಶೆಟ್ಟಿ, ಪ್ರಮುಖರಾದ ಬಾಬು ನಾಯ್ಡು, ದೇವಾಲಯ ಟ್ರಸ್ಟ್ ಅಧ್ಯಕ್ಷ ನಂಜುಂಡ, ರಾಮ ಸೇವಾ ಸಮಿತಿ ಅಧ್ಯಕ್ಷ ವಿಶ್ವನಾಥ್, ರಾಮೋತ್ಸವ ಮಹಿಳಾ ಸಮಿತಿ ಅಧ್ಯಕ್ಷೆ ಭಾರತಿ ರಮೇಶ್ ಹಾಜರಿದ್ದರು. ದೇವಾಲಯ ಟ್ರಸ್ಟ್ ಮಾಜಿ ಅಧ್ಯಕ್ಷ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಹಾಜರಿದ್ದ ಗಣ್ಯರು ರಾಮೋತ್ಸವ ಸಂಬಂಧ ದೇಣಿಗೆ ನೀಡುವ ಮೂಲಕ ರಶೀದಿ ಪುಸ್ತಕವನ್ನು ಬಿಡುಗಡೆಗೊಳಿಸಿದರು.
ಮೆರವಣಿಗೆ ವಿಶೇಷ : ಏಪ್ರಿಲ್ 5 ರಂದು ಸಂಜೆ 3 ಗಂಟೆಗೆ ಮಡಿಕೇರಿಯ ಗಾಂಧಿ ಮೈದಾನದಿಂದ, ನಗರದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಸಾಗಿ ಕೋದಂಡರಾಮ ದೇವಾಲಯದಲ್ಲಿ ಸಮಾಪ್ತಿಗೊಳ್ಳಲಿದೆ. ಮೆರವಣಿಗೆಯು ಡೊಳ್ಳು ಮತ್ತು ಗೊಂಬೆ ಕುಣಿತ, ಚಂಡೆ, ದೀಪ ಕುಣಿತ, ಡ್ರಮ್ ಸೆಟ್, ಹೂ ಕುಣಿತ, ಹುಲಿವೇಷದೊಂದಿಗೆ ಆಕರ್ಷಣೀಯವಾಗಿ ನಡೆಯಲಿದೆ. 2 ದಿನಗಳ ಕಾಲ ಸಂಜೆ ದೇವಾಲಯದ ಆವರಣದ ಎದುರು ಜ್ಯೋತಿ ಯುವಕ ಸಂಘದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.ಪ್ರತಿಷ್ಠಾಪನಾ ಉತ್ಸವ - 2 ದಿನ ಅನ್ನದಾನ
ಏಪ್ರಿಲ್ 5 ರಂದು ಬೆಳಗ್ಗೆ 6 ಗಂಟೆಯ ನಂತರ ದೇವಾಲಯದ ಪ್ರತಿಷ್ಠಾಪನಾ ಉತ್ಸವದ ಅಂಗವಾಗಿ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿವೆ. ಏಪ್ರಿಲ್ 5 ರಂದು 4, 000 ಮಂದಿಗೆ ಅನ್ನದಾನ, 6 ರಂದು ಬೆಳಗ್ಗೆ 500 ಮಂದಿಗೆ ಉಪಾಹಾರ, ಮಧ್ಯಾಹ್ನ 5,000 ಮಂದಿಗೆ ಅನ್ನದಾನ ಹಾಗೂ ರಾತ್ರಿ 3000 ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನೆರವೇರಲಿದೆ.