ಪೂರ್ಣ ಕುಂಭದೊಂದಿಗೆ ಶಾಲಾ ಮಕ್ಕಳಿಗೆ ಅದ್ಧೂರಿ ಸ್ವಾಗತ

| Published : May 30 2024, 12:56 AM IST

ಸಾರಾಂಶ

ಕೆಂಪಯ್ಯನ ದೊಡ್ಡಿ ಗ್ರಾಮಸ್ಥರು ಮಾದರಿ ಶಾಲಾ ಪ್ರಾರಂಭೋತ್ಸವವನ್ನು ಅದ್ಧೂರಿಯಾಗಿ ನಡೆಸಿದ್ದಾರೆ. ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಪೋಷಕರು ಮಕ್ಕಳನ್ನು ಸೇರಿಸಬೇಕು ಎಂದರು.ಪ್ರಥಮ ಬಾರಿಗೆ ಬರುವ ವಿದ್ಯಾರ್ಥಿಗಳಿಗೆ ಸಿಹಿ ಹಂಚುವುದರ ಮುಖಾಂತರ ಬರಮಾಡಿಕೊಳ್ಳುವಂತೆ ಈಗಾಗಲೇ ಮುಖ್ಯ ಶಿಕ್ಷಕರಿಗೆ ಆದೇಶ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಹಲಗೂರು

ಕೆಂಪಯ್ಯನ ದೊಡ್ಡಿ ಗ್ರಾಮದ ವಿದ್ಯಾರ್ಥಿಗಳನ್ನು ಪೂರ್ಣಕುಂಭ, ಪೂಜಾ ಕುಣಿತದೊಂದಿಗೆ ಎತ್ತಿನಗಾಡಿಯಲ್ಲಿ ಸರಸ್ವತಿ ದೇವರ ಭಾವಚಿತ್ರ ಇರಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಸರ್ಕಾರಿ ಶಾಲೆಗೆ ಭವ್ಯ ಸ್ವಾಗತ ನೀಡಲಾಯಿತು.

ಶಿಕ್ಷಕರು ಮತ್ತು ಪೋಷಕರು ಹಾಗೂ ಎಸ್‌ಡಿಎಂಸಿ ಸದಸ್ಯರ ಸಹಕಾರದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಿದ್ಯಾರ್ಥಿಗಳನ್ನು ವಿಶೇಷವಾಗಿ ವಿನೂತವಾಗಿ ಬರಮಾಡಿಕೊಳ್ಳಲಾಯಿತು.

ಬಿಇಒ ಎಸ್.ಚಂದ್ರಪಾಟೀಲ್ ಮಕ್ಕಳಿಗೆ ಸಿಹಿ ತಿಂಡಿ ನೀಡುವ ಮೂಲಕ ಬರಮಾಡಿಕೊಂಡು ಮಾತನಾಡಿ, ಗ್ರಾಮಸ್ಥರು ಮಾದರಿ ಶಾಲಾ ಪ್ರಾರಂಭೋತ್ಸವವನ್ನು ಅದ್ಧೂರಿಯಾಗಿ ನಡೆಸಿದ್ದಾರೆ. ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಪೋಷಕರು ಮಕ್ಕಳನ್ನು ಸೇರಿಸಬೇಕು ಎಂದರು.ಪ್ರಥಮ ಬಾರಿಗೆ ಬರುವ ವಿದ್ಯಾರ್ಥಿಗಳಿಗೆ ಸಿಹಿ ಹಂಚುವುದರ ಮುಖಾಂತರ ಬರಮಾಡಿಕೊಳ್ಳುವಂತೆ ಈಗಾಗಲೇ ಮುಖ್ಯ ಶಿಕ್ಷಕರಿಗೆ ಆದೇಶ ನೀಡಲಾಗಿದೆ. ಮೇ 30ರಂದು ಶಾಲೆಗೆ ಬರುವ ಎಲ್ಲಾ ವಿದ್ಯಾರ್ಥಿಗಳಿಗೂ ಸಮವಸ್ತ್ರ ಹಾಗೂ ಪಠ್ಯ ಪುಸ್ತಕಗಳನ್ನು ನೀಡಲಾಗುತ್ತದೆ ಎಂದು ಹೇಳಿದರು.

ಮುಖ್ಯ ಶಿಕ್ಷಕ ಸುಂದ್ರಪ್ರ ಮಾತನಾಡಿ, ಗ್ರಾಮದ ಸಾರ್ವಜನಿಕರ ಪ್ರೀತಿ ವಿಶ್ವಾಸವನ್ನು ಪಡೆದುಕೊಂಡು ಅವರ ಸಹಕಾರದೊಡನೆ ಉತ್ತಮವಾಗಿ ಸರ್ಕಾರಿ ಶಾಲೆಯನ್ನು ಉನ್ನತ ಮಟ್ಟದಲ್ಲಿ ನಡೆಸಿಕೊಂಡು ಹೋಗುತ್ತಿರುವುದಕ್ಕೆ ಶ್ಲಾಘಿಸಿದರು.

ಗ್ರಾಮದ ಮುಖಂಡ ಮೋಹನ್ ಮಾತನಾಡಿ, ಶಾಲೆ ಶಿಕ್ಷಕರು ರಜಾ ದಿನಗಳಲ್ಲಿ ಸರ್ಕಾರದ ಆದೇಶದಂತೆ ಬೇಸಿಗೆ ಶಿಬಿರವನ್ನು ನಡೆಸಿ ದಿನನಿತ್ಯ ಮಕ್ಕಳಲ್ಲಿ ಜ್ಞಾನಾರ್ಜನೆಯಾಗುವುದಕ್ಕಾಗಿ ಚಿತ್ರಕಲೆ, ಜನಪದ ಗೀತೆ, ನೃತ್ಯ, ಯೋಗ ಶಿಬಿರ ನಡೆಸುತ್ತಾ, ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಗೆ ದಂತ ಚಿಕಿತ್ಸೆ ಶಿಬಿರ, ಮಾಜಿ ಸೈನಿಕರಿಂದ ದೇಶದ ಬಗ್ಗೆ ತಿಳಿವಳಿಕೆ ಮತ್ತು ಇತರೆ ಕಾರ್ಯಕ್ರಮ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ಇಸಿಒ ದಯಾನಂದ, ಎಸ್ ಡಿಎಂಸಿ ಅಧ್ಯಕ್ಷ ಜಯಶಂಕರ್ ಮತ್ತು ಸದಸ್ಯರು ಹಾಗೂ ಕೆಂಚೇಗೌಡ, ಆಶಾ, ಸೇರಿದಂತೆ ಹಿರಿಯ ವಿದ್ಯಾರ್ಥಿಗಳು, ಮಕ್ಕಳು ಮತ್ತು ಅತಿಥಿ ಶಿಕ್ಷಕರು ಹಾಜರಿದ್ದರು.