ಹರಪನಹಳ್ಳಿ: ಬೇಸಿಗೆ ರಜೆ ಮುಗಿಸಿ ಶಾಲೆಗೆ ಮರಳಿದ ಚಿಣ್ಣರಿಗೆ ತಾಲೂಕಿನಾದ್ಯಂತಹ ಜೂ.1ರಂದು ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿಯವರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ವಿವಿಧ ರೀತಿಯಿಂದ ಅತ್ಯಂತ ವೈಭವದಿಂದ ಸ್ವಾಗತಿಸಿ ಕೊಂಡರು.ಹುಲ್ಲಿಕಟ್ಟಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಲೇಪಾಕ್ಷಪ್ಪನವರು ಹೂವು, ಚಾಕೋಲೇಟ್‌ ನೀಡುವ ಮೂಲಕ ಮಕ್ಕಳಿಗೆ ಸ್ವಾಗತ ಕೋರಿದರು.

ಹರಪನಹಳ್ಳಿ ಕುರುಬರಗೇರಿ ಶಾಲೆ:

ನಗರದ ಕುರುಬರಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರು, ಶಿಕ್ಷಕರು, ಮಕ್ಕಳಿಗೆ ಗುಲಾಬಿ ಹೂವು ನೀಡಿ, ಚಾಕೊಲೆಟ್‌ ವಿತರಿಸುವುದರ ಜೊತೆಗೆ ಒಂದನೇ ತರಗತಿಗೆ ದಾಖಲಾದ ಮಕ್ಕಳಿಗೆ ದಾನಿಗಳಿಂದ ಪಡೆದ ಉಚಿತ ಬ್ಯಾಗ್, ಪೆನ್ಸಿಲ್‌, ರಬ್ಬರ್‌ ನೀಡಿ ಬರಮಾಡಿಕೊಂಡರು.

ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆ, ಮೇನ್‌ ಶಾಲೆ, ಪೊಲೀಸ್‌ ಲೈನ್, ಉಪ್ಪಾರಗೇರಿ, 9ನೇ ವಾರ್ಡ್‌ ಶಾಲೆ, ಹರಿಹರ ಆಶ್ರಯ ಬಡಾವಣೆ ಶಾಲೆಗಳಲ್ಲೂ ಮಕ್ಕಳನ್ನು ವಿಶೇಷವಾಗಿ ಬರಮಾಡಿಕೊಳ್ಳಲಾಯಿತು.

ಯಲ್ಲಾಪುರ, ಹಂಪಾಪುರ, ಅರಸನಾಳು, ಇಟ್ಟಿಗುಡಿ, ನೀಲಗುಂದ ಮುಂತಾದ ಶಾಲೆಗಳಿಗೆ ಬಿಇಒ ಲೇಪಾಕ್ಷಪ್ಪ ಭೇಟಿ ನೀಡಿ ಶಿಕ್ಷಕರಿಗೆ ಬೋಧನೆ ಕುರಿತು ಮಾರ್ಗದರ್ಶನ ಮಾಡಿದರು.


ಶಿಕ್ಷಣ ಇಲಾಖೆಯಿಂದ ಸರಬರಾಜು ಮಾಡಿದ ಉಚಿತ ಪಠ್ಯ ಪುಸ್ತಕ, ಸಮವಸ್ತ್ರಗಳನ್ನು ವಿತರಿಸಲಾಯಿತು. ಕಾಮ್ಸ್ ನಲ್ಲಿ ಶಿಕ್ಷಕರು ಹಾಜರಾತಿ ಹಾಕುವುದು ಕಡ್ಡಾಯವಾಗಿದ್ದು, ಮನೆ ಮನೆ ಭೇಟಿ ಮಾಡಿ ದಾಖಲಾತಿ ಮಾಡುವ ಕಾರ್ಯ ಸಹ ನಡೆದಿದೆ, ಮಕ್ಕಳ ಗುಣ ಮಟ್ಟದ ಶಿಕ್ಷಣಕ್ಕಾಗಿ ಎಫ್‌ಎಲ್‌ಎನ್‌ ಅನುಷ್ಟಾನ ಮಾಡಲಾಗುತ್ತದೆ.

ಮಗ್ಗಿ ಸುಗ್ಗಿ ವಿನೂತನ ಕಾರ್ಯಕ್ರಮ:

ತಾಲೂಕಿನಲ್ಲಿ ಜೂ.20ರವರೆಗೆ ಎಲ್ಲ ಮಕ್ಕಳು ಮಗ್ಗಿ ಕಲಿಯಲು ಮಗ್ಗಿ-ಸುಗ್ಗಿ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಬಿಇ ಒ ಲೇಪಾಕ್ಷಪ್ಪ ತಿಳಿಸಿದ್ದಾರೆ.

ಮಿಂಚಿನ ಸಂಚಾರ:

ಒಂದು ದಿನಕ್ಕೆ ಮೂರು ಕ್ಲಸ್ಟರ್‌ ಶಾಲೆಗಳಿಗೆ ಭೇಟಿ ನೀಡಿ ಸಿದ್ಧತೆ, ಶೈಕ್ಷಣಿಕ ಚಟುವಟಿಕಗಳೆ ಅನುಷ್ಟಾನ ಗುಣಮಟ್ಟದ ಕಲಿಕೆಗೆ ಪರಿಶೀಲನೆ ಮಾಡಿ ಮಾರ್ಗದರ್ಶನ ನೀಡಲು ಬಿಇಒ ಯೋಜನೆ ಹಾಕಿಕೊಂಡಿದ್ದಾರೆ. ಹುಲ್ಲಿಕಟ್ಟಿಯಲ್ಲಿ ನೂತನ ಪ್ರೌಢ ಶಾಲೆಗೆ ಆರು ಕೊಠಡಿಗಳು ಮಂಜೂರಾಗಿವೆ. 1ನೇ ದಿನದಿಂದ ಸೇತುಬಂಧ ಕಾರ್ಯಕ್ರಮ ಸಹ ಆರಂಭಗೊಂಡಿದೆ ಎಂದು ಅವರು ತಿಳಿಸಿದ್ದಾರೆ. ಒಟ್ಟಿನಲ್ಲಿ ತಾಲೂಕಿನ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಚಿಣ್ಣರ ಕಲರವ ಆರಂಭಗೊಂಡಿದೆ.

ಜೂ.1ರಂದು ಹರಪನಹಳ್ಳಿ ತಾಲೂಕಿನಲ್ಲಿ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸಿಹಿ ನೀಡಿ, ಹೂವು ಮಳೆಗೈದು, ಆಕರ್ಷಣೀಯವಾಗಿ ಬರಮಾಡಿಕೊಳ್ಳಲಾಗಿದೆ. ಸರ್ಕಾರದ ಸೌಲಭ್ಯ ಕೊಟ್ಟು ಗುಣ ಮಟ್ಟದ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಲಾಗಿದೆ ಎನ್ನುತ್ತಾರೆ ಹರಪನಹಳ್ಳಿ ಬಿಇಒ ಎಚ್.ಲೇಪಾಕ್ಷಪ್ಪ.