ಶ್ರೀರಾಮ ದಿಗ್ವಿಜಯ ರಥಯಾತ್ರೆಗೆ ಅದ್ಧೂರಿ ಸ್ವಾಗತ

| Published : Oct 31 2025, 02:45 AM IST

ಶ್ರೀರಾಮ ದಿಗ್ವಿಜಯ ರಥಯಾತ್ರೆಗೆ ಅದ್ಧೂರಿ ಸ್ವಾಗತ
Share this Article
  • FB
  • TW
  • Linkdin
  • Email

ಸಾರಾಂಶ

ಪರ್ತಗಾಳಿ ಜೀವೋತ್ತಮ ಮಠದ ೫೫೦ನೇ ವರ್ಷದ ಪ್ರಯುಕ್ತ ಶ್ರೀ ಕ್ಷೇತ್ರ ಬದರಿಯಿಂದ ಆರಂಭವಾದ ಶ್ರೀ ರಾಮ ದಿಗ್ವಿಜಯ ರಥಯಾತ್ರೆಗೆ ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ಅದ್ಧೂರಿ ಸ್ವಾಗತ ದೊರಕಿತು.

ಕನ್ನಡಪ್ರಭ ವಾರ್ತೆ ಭಟ್ಕಳ

ಪರ್ತಗಾಳಿ ಜೀವೋತ್ತಮ ಮಠದ ೫೫೦ನೇ ವರ್ಷದ ಪ್ರಯುಕ್ತ ಶ್ರೀ ಕ್ಷೇತ್ರ ಬದರಿಯಿಂದ ಆರಂಭವಾದ ಶ್ರೀ ರಾಮ ದಿಗ್ವಿಜಯ ರಥಯಾತ್ರೆಗೆ ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ಅದ್ಧೂರಿ ಸ್ವಾಗತ ದೊರಕಿತು.

ಅ. ೧೯ರಂದು ಬದರಿಯಲ್ಲಿ ಗೋಕರ್ಣ ಪರ್ತಗಾಳಿ ಮಠಾಧೀಶ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರು ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದ್ದರು. ಅಲ್ಲಿಂದ ದೆಹಲಿ, ಬಳಿಕ ಅಯೋಧ್ಯಾಧಾಮ ತಲುಪಿದೆ. ಅಯೋಧ್ಯೆಗೆ ಆಗಮಿಸಿದ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರಿಗೆ ಸ್ಥಳೀಯ ಶಾಸಕ ವೇದ ಪ್ರಕಾಶ ಗುಪ್ತಾ, ವಿಶ್ವ ಹಿಂದು ಪರಿಷತ್‌ನ ಕಾರ್ಯದರ್ಶಿ ಗೋಪಾಲ ಜಿ. ಸೇರಿ ಸ್ಥಳೀಯ ಜನಪ್ರತಿನಿಧಿಗಳು ಅದ್ಧೂರಿ ಸ್ವಾಗತ ನೀಡಿದರು.

ಗೋಕರ್ಣ ಪರ್ತಗಾಳಿ ಮಠದ ಇತಿಹಾಸದಲ್ಲೆ ಮೊದಲ ಬಾರಿಗೆ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರು ಅಯೋಧ್ಯ ಶ್ರೀರಾಮ ಮಂದಿರದ ರಾಮ ದರ್ಬಾರ ಹಾಲಿನಲ್ಲಿ ತಮ್ಮ ಆರಾಧ್ಯ ದೇವ ರಾಮದೇವ ವೀರವಿಠಲ್ ದೇವರನ್ನು ಪೂಜಿಸಿದರು. ಬಳಿಕ ಶ್ರೀರಾಮ ನಾಮ ತಾರಕ ಮಹಾ ಮಂತ್ರದ ಜಪ ಅಭಿಯಾನ ನಡೆಯಿತು. ಅಯೋಧ್ಯಾಪತಿ ಶ್ರೀರಾಮಲಲ್ಲಾನಿಗೆ ರಾಮದರ್ಬಾರದ ಚಿತ್ರವಿರುವ ಬಂಗಾರದ ಆಭರಣವನ್ನು ಶ್ರೀಗಳು ಅರ್ಪಿಸಿದರು. ಈ ಸಂದರ್ಭ ನೂರಾರು ಸಂಖ್ಯೆಯ ಜಿಎಸ್‌ಬಿ ಸಮಾಜದ ಗಣ್ಯರು ಈ ಸಂತೋಷದ ಕ್ಷಣಕ್ಕೆ ಸಾಕ್ಷಿಯಾದರು. ಅಲ್ಲಿಂದ ತೆರಳಿದ ದಿಗ್ವಿಜಯ ರಥಯಾತ್ರೆ ಮಧ್ಯಪ್ರದೇಶದ ಜಬಲಾಪುರದ ಜಗದ್ಗುರು ಶಂಕರಾಚಾರ್ಯರ ಆಶ್ರಮಕ್ಕೆ ತೆರಳಿ ಸೋಮವಾರ ಸಂಜೆ ಮಹಾರಾಷ್ಟ್ರದ ಅಂಬಾದೇವಿ ಸಂಸ್ಥಾನದಲ್ಲಿ ಬಂದು ತಲುಪಿದೆ. ಅಯೋಧ್ಯೆಯ ಶ್ರೀಗಳ ಮೊಕ್ಕಾಂನಲ್ಲಿ ಹಾಂಗ್ಯೋ ಐಸ್‌ಕ್ರೀಮ್‌ನ ದಿನೇಶ ಪೈ, ಪ್ರಮುಖರಾದ ಯೊಗೇಶ ಕಾಮತ, ಜಗದೀಶ ಪೈ, ಪವನ ಪ್ರಭು, ಸಂತೋಷ ಆಚಾರ್ಯ, ಸಂಜಯ ಭಟ್, ಪ್ರಸನ್ನಾ ಬಿಚ್ಚು ಪುನೆ ಇದ್ದರೆ ರಥಯಾತ್ರೆಯಲ್ಲಿ ರಥದೊಂದಿಗೆ ಭಟ್ಕಳದ ಗಿರಿಧರ ನಾಯಕ, ಶ್ರೀನಿವಾಸ ಕಾಮತ, ಶರಣ ಆಚಾರ್ಯ, ಆನಂದ ಭಟ್ ಮುಂತಾದವರಿದ್ದರು.