2025ಕ್ಕೆ ಅದ್ಧೂರಿ ಸ್ವಾಗತ: ಸಂಭ್ರಮದಿಂದ ಹೊಸ ವರ್ಷಾಚರಣೆ

| Published : Jan 02 2025, 12:32 AM IST

ಸಾರಾಂಶ

A grand welcome to 2025: Celebrate the New Year with enthusiasm

-ಶಿವಮೊಗ್ಗ ಪೂರ್ವ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ । ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೇಕ್‌ ಕತ್ತರಿಸಿ ಸಂಭ್ರಮಾಚರಣೆ

-------

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಹೊಸ ವರ್ಷವನ್ನು ಜನತೆ ಸಂಭ್ರಮದಿಂದ ಆಚರಿಸಿದರು.

ಜನರು ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಿದರು. ಎಲ್ಲೆಡೆ ಹೊಸ ವರ್ಷ ಆಚರಣೆಯ ಮೆರುಗು ಹೆಚ್ಚಿಸಿತ್ತು.

ನಗರದ ಹೋಟೆಲ್, ಕ್ಲಬ್ಬು, ರೆಸ್ಟೋರೆಂಟ್ ಗಳಲ್ಲಿ ಸಂಜೆಯಾಗುತ್ತಲೇ ಜನರು ಸೇರತೊಡಗಿದರು. ಎಲ್ಲೆಲ್ಲೂ ಹ್ಯಾಪಿ ನ್ಯೂಇಯರ್ ಘೋಷ, ಪರಸ್ಪರ ಶುಭಾಶಯ ವಿನಿಮಯಗೊಂಡವು.

ಹೊಸವರ್ಷದ ಹಿನ್ನೆಲೆಯಲ್ಲಿ ನಗರದ ಬೇಕರಿಗಳು ಹಾಗೂ ಮದ್ಯ ಅಂಗಡಿಗಳಲ್ಲಿ ಎಂದಿಗಿಂತ ವ್ಯಾಪಾರ ಹೆಚ್ಚಾಗಿ ನಡೆದಿತ್ತು. ಬೇಕರಿಗಳಲ್ಲಿ ಕೇಕ್ ಹಾಗೂ ವಿವಿಧ ಬಗೆಯ ಸಿಹಿ ತಿನಿಸುಗಳ ವ್ಯಾಪಾರ ವಹಿವಾಟು ಜೋರಾಗಿ ನಡೆಯಿತು.

ಗಡಿಯಾರದ ಮುಳ್ಳು ರಾತ್ರಿ 12 ತಬ್ಬುತ್ತಿದ್ದಂತೆಯೇ ಹೊಸವರ್ಷದ ಸಂಭ್ರಮಾಚರಣೆಗಾಗಿ ಸಿಡಿಸಿದ ಪಟಾಕಿಯ ಸದ್ದು ಮುಗಿಲು ಮುಟ್ಟಿತ್ತು.

ಬಿ.ಎಚ್. ರಸ್ತೆ, ನೆಹರೂ ರಸ್ತೆ, ಅಮೀರ್ ಅಹಮದ್ ವೃತ್ತ, ಅಶೋಕ ಪಿಲ್ಲರ್, ದುರ್ಗಿಗುಡಿ, ಶಿವಪ್ಪ ನಾಯಕ ವೃತ್ತ, ಗಾಂಧಿ ಬಜಾರ್, ಎನ್‍ಇಎಸ್ ಸರ್ಕಲ್, ಸಾಗರ ರಸ್ತೆ, ಗೋಪಾಳ ಮುಖ್ಯರಸ್ತೆ, ದ್ವಿಚಕ್ರ ವಾಹನ ಸವಾರರಿಂದ ತುಂಬಿ ತುಳುಕಿದವು.

ರಾತ್ರಿ 1 ಗಂಟೆಗೆ ಸಂಭ್ರಮಾಚರಣೆ ಸೀಮಿತಗೊಳಿಸಲು ಪೋಲೀಸರು ಹರಸಾಹಸ ಪಡಬೇಕಾಯಿತು.

ಹೊಸ ಆಲೋಚನೆಗಳೊಂದಿಗೆ ಉತ್ತಮ ಬದುಕು

ಶಿವಮೊಗ್ಗ: ಹೊಸ ವರ್ಷದಲ್ಲಿ ಹೊಸ ಆಲೋಚನೆಗಳನ್ನು ಕೈಗೊಳ್ಳುವ ಮೂಲಕ ಉತ್ತಮ ಬದುಕು ರೂಪಿಸಿಕೊಳ್ಳಲು ಎಲ್ಲರೂ ಮುಂದಾಗಬೇಕು ಎಂದು ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಅರುಣ್ ದೀಕ್ಷಿತ್ ಹೇಳಿದರು.

ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಆಯೋಜಿಸಿದ್ದ ಹೊಸ ವರ್ಷ ಆಚರಣೆ, ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 2024ರಲ್ಲಿ ಕಲಿತ ಜೀವನ ಪಾಠಗಳನ್ನು ಅಳವಡಿಸಿಕೊಂಡು ಈ ವರ್ಷ ಮತ್ತಷ್ಟು ಉತ್ತಮ ಸಾಧನೆ ಮಾಡಬೇಕು ಎಂದು ತಿಳಿಸಿದರು.

ಕಲಾವಿದ ಜಿ.ವಿಜಯಕುಮಾರ್, ಡಾ. ರವಿಕಿರಣ್ ಮತ್ತು ಕಲಾವಿದರು ಹಳೇಯ ಚಿತ್ರಗೀತೆಗಳು ಹಾಗೂ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ಸಿಹಿ ಹಂಚಿ ಹೊಸವರ್ಷ ಆಚರಿಸಲಾಯಿತು.

ಸದಸ್ಯ ಸದಸ್ಯೆಯರು ಫ್ಯಾಷನ್ ಶೋ ಹಾಗೂ ನೃತ್ಯ ಸ್ಪರ್ಧೆ ನಡೆಸುವುದರ ಜತೆಗೆ ಸಿಡಿಮದ್ದು ಸಿಡಿಸಿ ಸಂಭ್ರಮ ಆಚರಿಸಲಾಯಿತು. ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಶಶಿಕಾಂತ್ ನಾಡಿಗ್ ವಿವಿಧ ಮನರಂಜನೆ ಆಟಗಳ ಜತೆಗೆ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ನೀಡಿದರು.

ಡಾ. ಕಡಿದಾಳ್ ಗೋಪಾಲ್, ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ವಸಂತ ಹೋಬಳಿದಾರ್, ಡಾ. ಗುಡದಪ್ಪ ಕಸಬಿ, ಮಾಜಿ ಅಧ್ಯಕ್ಷ ಶ್ರೀಕಾಂತ್, ಮಹೇಶ್, ಎಂ.ಪಿ.ನಾಗರಾಜ್, ಚಂದ್ರಹಾಸ್ ರಾಯ್ಕರ್, ಡಾ. ಅರುಣ್, ಕೌಸ್ತುಭಾ, ಡಾ. ಅವಿನಾಶ್, ಬೆನಕಪ್ಪ, ಇಂಚರಾ ನಾಡಿಗ್, ಡಾ. ಲಲಿತಾ ಭರತ್, ಇನ್ನರ್‌ವ್ಹೀಲ್ ಮಾಜಿ ಅಧ್ಯಕ್ಷೆ ಬಿಂದು ವಿಜಯಕುಮಾರ್, ವೇದಾ ನಾಗರಾಜ್, ವಿಜಯಾ ರಾಯ್ಕರ್, ಕಿಶೋರ್, ಡಾ. ಧನಂಜಯ, ಸದಸ್ಯರು, ಮಕ್ಕಳು ಭಾಗವಹಿಸಿದ್ದರು.

------------------------------

.....ಬಾಕ್ಸ್...ಕೇಕ್ ಕತ್ತರಿಸಿ ಶುಭ ಹಾರೈಕೆ

ಶಿವಮೊಗ್ಗ: ನಗರದ ಅಮೀರ್ ಅಹಮ್ಮದ್ ವೃತ್ತದಲ್ಲಿ ಹೊಸ ವರ್ಷಾಚರಣೆ ಹಿನ್ನಲೆಯಲ್ಲಿ ಬಂದೋಬಸ್ತ್ ಕರ್ತವ್ಯದಲ್ಲಿ ನಿರತರಾಗಿದ್ದ ಪೊಲೀಸ್ ಸಿಬ್ಬಂದಿಯೊಂದಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‍ಕುಮಾರ್ ಹೊಸವರ್ಷದ ಅಂಗವಾಗಿ ಕೇಕ್ ಕತ್ತರಿಸಿ ಪೊಲೀಸ್ ಅಧಿಕಾರಿಗಳಿಗೆ ತಿನ್ನಿಸಿ ಶುಭ ಹಾರೈಸಿದರು.

ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್‍ಕುಮಾರ್ ಭೂಮ್‍ರೆಡ್ಡಿ, ಕಾರ್ಯಪ್ಪ, ಡಿವೈಎಸ್‍ಪಿ ಸುರೇಶ್, ಇನ್ಸ್‌ಪೆಕ್ಟರ್‌ ಗುರುರಾಜ್, ಪಾಟೀಲ್, ಹರೀಶ್ ಪಾಟೀಲ್, ಟ್ರಾಫಿಕ್ ಇನ್ಸ್‌ಪೆಕ್ಟರ್‌ ಸಂತೋಷ್, ವಿನೋಬನಗರ ಠಾಣಾ ಇನ್ಸ್‌ಪೆಕ್ಟರ್‌ ಚಂದ್ರಕಲಾ ಸೇರಿದಂತೆ ಶಿವಮೊಗ್ಗ ಪೊಲೀಸ್ ಉಪವಿಭಾಗದ ಸಿಬ್ಬಂದಿ ಮತ್ತು ಅಧಿಕಾರಿಗಳು ಹೊಸವರ್ಷದ ಸಂಭ್ರಮದಲ್ಲಿ ಭಾಗವಹಿಸಿದ್ದರು.

--------------------

....ಬಾಕ್ಸ್‌...

ಹೊಸ ವರ್ಷಾಚಾರಣೆಯಂದೇ ಅಪಘಾತ

ಶಿವಮೊಗ್ಗ: ನಗರದಲ್ಲಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ, ಯುವಕ ಹಾಗೂ ಮಹಿಳೆ ಮೃತಪಟ್ಟ ಘಟನೆ ನಡೆದಿದೆ.

ಸಿದ್ದಯ್ಯ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಗೋಪಾಳದ ನಿವಾಸಿ ಧನುಷ್ (20) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಪ್ರಜ್ವಲ್ (21) ಗಾಯಗೊಂಡ ಯುವಕನಾಗಿದ್ದು, ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಅಪಘಾತದ ರಭಸಕ್ಕೆ ಕಾರು ಪಲ್ಟಿಯಾಗಿದೆ. ಆದರೆ, ಕಾರಿನಲ್ಲಿದ್ದವರು ಅನಾಹುತದಿಂದ ಪಾರಾಗಿದ್ಧಾರೆ. ಇವರು ಸಾಗರ ರಸ್ತೆಯ ಪೋಲೀಸ್ ಲೇಔಟ್ ಸಮೀಪದ ನಿವಾಸಿಗಳೆಂದು ಹೇಳಲಾಗಿದೆ.

ತಡರಾತ್ರಿಯೇ ಘಟನಾ ಸ್ಥಳಕ್ಕೆ ದೊಡ್ಡಪೇಟೆ ಠಾಣೆ ಪೋಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಪಶ್ಚಿಮ ಸಂಚಾರಿ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನೆಯ ಕುರಿತಂತೆ ಇನ್ನಷ್ಟೆ ಟ್ರಾಫಿಕ್ ಠಾಣೆಯಲ್ಲಿ ದೂರು ದಾಖಲಾಗಬೇಕಾಗಿದೆ.

ಇನ್ನೊಂದು ಘಟನೆಯಲ್ಲಿ:

ನಗರದ ರಾಯಲ್ ಆರ್ಕಿಡ್ ಹೋಟೆಲ್ ಸಮೀಪ ಬುಧವಾರ ಬೆಳಗ್ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಡೆದು ಹೋಗುತ್ತಿದ್ದ ಪಾದಚಾರಿ ಮಹಿಳೆ ಮೃತಪಟ್ಟಿದ್ದಾರೆ.

ರೇಣುಕಮ್ಮ (70) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ರಾಫಿಕ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಬೇಕಾಗಿದೆ.

---------------------------

ಪೋಟೋ: 1ಎಸ್‌ಎಂಜಿಕೆಪಿ07

ಶಿವಮೊಗ್ಗ ನಗರದಲ್ಲಿ ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಹೊಸವರ್ಷ ಆಚರಣೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

------------------------

ಪೋಟೋ: 1ಎಸ್‌ಎಂಜಿಕೆಪಿ08

ಶಿವಮೊಗ್ಗ : ನಗರದ ಅಮೀರ್ ಅಹಮ್ಮದ್ ವೃತ್ತದಲ್ಲಿ ಹೊಸ ವರ್ಷಾಚರಣೆ ಹಿನ್ನಲೆ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯೊಂದಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್‍ಕುಮಾರ್ ಹೊಸವರ್ಷದ ಅಂಗವಾಗಿ ಕೇಕ್ ಕತ್ತರಿಸಿದರು.

---------------------------------

ಪೋಟೋ: 1ಎಸ್‌ಎಂಜಿಕೆಪಿ09

ಶಿವಮೊಗ್ಗ ನಗರದ ಸಿದ್ದಯ್ಯ ರಸ್ತೆಯಲ್ಲಿ ನಡೆದ ಕಾರು ಅಪಘಾತದ ದೃಶ್ಯ.