ಕರ್ನಾಟಕ ಜ್ಯೋತಿ ರಥಯಾತ್ರೆಗೆ ಭವ್ಯ ಸ್ವಾಗತ

| Published : Feb 29 2024, 02:02 AM IST

ಸಾರಾಂಶ

ತೇರದಾಳ: ರಾಜ್ಯೋತ್ಸವದ ಸುವರ್ಣ ಸಂಭ್ರಮೋತ್ಸವ ಹಿನ್ನೆಲೆಯಲ್ಲಿ ಐತಿಹಾಸಿಕ ತೇರದಾಳ ಪಟ್ಟಣಕ್ಕೆ ಹನಗಂಡಿ ಮಾರ್ಗವಾಗಿ ಆಗಮಿಸಿದ ಕರ್ನಾಟಕ ಜ್ಯೋತಿ ರಥಯಾತ್ರೆಗೆ ಭವ್ಯ ಸ್ವಾಗತ ಕೋರಲಾಯಿತು.

ಕನ್ನಡಪ್ರಭ ವಾರ್ತೆ ತೇರದಾಳ (ರ-ಬ)

ರಾಜ್ಯೋತ್ಸವದ ಸುವರ್ಣ ಸಂಭ್ರಮೋತ್ಸವ ಹಿನ್ನೆಲೆಯಲ್ಲಿ ಐತಿಹಾಸಿಕ ತೇರದಾಳ ಪಟ್ಟಣಕ್ಕೆ ಹನಗಂಡಿ ಮಾರ್ಗವಾಗಿ ಆಗಮಿಸಿದ ಕರ್ನಾಟಕ ಜ್ಯೋತಿ ರಥಯಾತ್ರೆಗೆ ಭವ್ಯ ಸ್ವಾಗತ ಕೋರಲಾಯಿತು.

ಮಂಗಳವಾರ ಮಧ್ಯಾಹ್ನ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿಗೆ ಕರ್ನಾಟಕ ಜ್ಯೋತಿ ರಥಯಾತ್ರೆ ಬರುತ್ತಿದ್ದಂತೆ ತೇರದಾಳ ತಹಸೀಲ್ದಾರ್, ವಿಜಯಕುಮಾರ ಕಡಕೋಳ, ಉಪತಹಸೀಲ್ದಾರ್ ಶ್ರೀಕಾಂತ ಮಾಯನ್ನವರ, ಪುರಸಭೆ ಮುಖ್ಯಾಧಿಕಾರಿ ಮಾಲಿನಿ, ಮ್ಯಾನೇಜರ್‌ ಮಲ್ಲಿಕಾರ್ಜುನ ಬಿರಾದಾರಪಾಟೀಲ, ಮುಖಂಡರಾದ ಪ್ರವೀಣ ನಾಡಗೌಡ, ಭುಜಬಲಿ ಕೆಂಗಾಲಿ ಸೇರಿದಂತೆ ಅನೇಕರು ಜ್ಯೋತಿ ರಥಯಾತ್ರೆಗೆ, ನಾಡದೇವಿ ಭುವನೇಶ್ವರಿ ಮೂರ್ತಿಗೆ ಮಾಲಾರ್ಪಣೆ ಹಾಗೂ ಪುಷ್ಪವೃಷ್ಟಿಗೆ ಮೂಲಕ, ಜಯಘೋಷಗಳೊಂದಿಗೆ ಸ್ವಾಗತಿಸಲಾಯಿತು.

ರಥಯಾತ್ರೆ ಭವ್ಯ ಮೆರವಣಿಗೆಯೊಂದಿಗೆ ಮಹಾವೀರ ವೃತ್ತ, ಬಸ್‌ನಿಲ್ದಾಣದ ಬಳಿಯ ಬಸವೇಶ್ವರ ವೃತ್ತದ ಬಳಿ ಬರುತ್ತಿದ್ದಂತೆ ಸಿದ್ಧೇಶ್ವರ ಶಾಲೆಯ ಮಕ್ಕಳು ಸೇರಿದಂತೆ ವಿದ್ಯಾರ್ಥಿಗಳು, ಪಟ್ಟಣದ ಕನ್ನಡಪರ ವಿವಿಧ ಸಂಘಟನೆ ಸೇರಿದಂತೆ ಪುಷ್ಪವೃಷ್ಟಿಗೈದು, ಕನ್ನಡಪರ ಘೋಷಣೆ ಮೊಳಗಿಸಿದರು.

ಪುರಸಭೆ ಸದಸ್ಯ ಸಂತೋಷ ಜಮಖಂಡಿ ಸೇರಿದಂತೆ ಅನೇಕರು ಮಕ್ಕಳಿಗೆ ಸಿಹಿ ವಿತರಿಸಿದರು. ಶಾಲಾ ಮಕ್ಕಳ ವೇಷಭೂಷಣ, ಕನ್ನಡಪರ ಜಯಘೋಷಗಳು ಹಾಗೂ ಕುಂಭಮೇಳಗಳು ಮೆರವಣಿಗೆಯ ಮೆರಗನ್ನು ಹೆಚ್ಚಿಸಿದವು. ಕನ್ನಡಪರ ಹಾಡುಗಳಿಗೆ ಯುವಕರು ನೃತ್ಯ ಮಾಡಿ ಸಂಭ್ರಮಿಸಿದರು. ಪ್ರಾಥಮಿಕ ಕೃಷಿಪತ್ತಿನ ಸಂಘ, ಸಮಗಾರ ಗಲ್ಲಿ ಮುಖಾಂತರ ರೇಣುಕಾ ವೃತ್ತ, ತಮದಡ್ಡಿ ನಾಕಾ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಮೂಲಕ ಬೆಳಗಾವಿ ಜಿಲ್ಲೆಯತ್ತ ಕರ್ನಾಟಕ ಜ್ಯೋತಿ ರಥಯಾತ್ರೆಗೆ ಬೀಳ್ಕೊಡಲಾಯಿತು.

ಮುಖಂಡರಾದ ರೇವಣೇಶ ಹಿರೇಮಠ, ಪ್ರಭು ಗಸ್ತಿ, ರಾಮಣ್ಣ ಹಿಡಕಲ್, ಆನಂದ ಜೀರಗಾಳ, ಎಸ್.ಆರ್. ರಾವಳ, ಪದ್ಮಸಾಗರ ನಾಗನೂರ, ಸಿಆರ್‌ಪಿಗಳಾದ ಅನಂರಾಜು ಮುಧೋಳ, ಮಹೇಶ ಸೋರಗಾಂವಿ, ಮಹಾದೇವ ಯಲ್ಲಟ್ಟಿ, ಶ್ರೀಶೈಲ ಮಧರಖಂಡಿ, ಶಾಲಾ ಕಾಲೇಜುಗಳ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು, ಬಹುತೇಕ ಇಲಾಖೆಗಳ ಮುಖ್ಯಸ್ಥರು, ಪುರಸಭೆ ಸದಸ್ಯರು, ಚಾಲಕ ಸಂಘದವರು ಉಪಸ್ಥಿತರಿದ್ದರು.