ಸಾರಾಂಶ
ಆರೋಗ್ಯದಲ್ಲಿ ಏರುಪೇರಾದ ಕಾರಣ ವೈದ್ಯರ ಸಲಹೆಯಂತೆ ಬೆಂಗಳೂರಿನಲ್ಲಿಯೇ ಇದ್ದರೂ ರಾಜ್ಯಸಭಾ ಚುನಾವಣೆಗೆ ಮತದಾನ ಮಾಡಲು ಹೋಗಿಲ್ಲ.
ಯಲ್ಲಾಪುರ:
ಆರೋಗ್ಯದಲ್ಲಿ ಏರುಪೇರಾದ ಕಾರಣ ವೈದ್ಯರ ಸಲಹೆಯಂತೆ ಬೆಂಗಳೂರಿನಲ್ಲಿಯೇ ಇದ್ದರೂ ರಾಜ್ಯಸಭಾ ಚುನಾವಣೆಗೆ ಮತದಾನ ಮಾಡಲು ಹೋಗಿಲ್ಲ ಎಂದು ಶಾಸಕ ಶಿವರಾಮ ಹೆಬ್ಬಾರ್ ರಾಜ್ಯಸಭಾ ಚುನಾವಣೆಯಿಂದ ದೂರ ಉಳಿದಿರುವ ಕುರಿತು ಸ್ಪಷ್ಟನೆ ನೀಡಿದ್ದರು.ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಶಾಸಕನಾಗಿರುವ ನನಗೆ ಕಾಂಗ್ರೆಸ್ ಸೇರುವ ಅಗತ್ಯವೇ ಇಲ್ಲ. ೪೦ ವರ್ಷದ ಸುದೀರ್ಘ ರಾಜಕೀಯ ಅನುಭವವಿರುವ ನನಗೆ, ಕಾನೂನಿನ ತಿಳಿವಳಿಕೆಯೂ ಇದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ನನ್ನನ್ನು ಕೆಲವು ಬಿಜೆಪಿ ಮುಖಂಡರೇ ಸೋಲಿಸಲು ಹರಸಾಹಸ ಪಟ್ಟಿದ್ದರು. ದೇವರ ದಯೆ ಮತ್ತು ಸ್ವ-ಸಾಮರ್ಥ್ಯದಿಂದ ಜಯ ಗಳಿಸಿದ್ದೇನೆ ಎಂದು ಹೇಳುವ ಮೂಲಕ ಸ್ಥಳೀಯ ನಾಯಕರ ಮೇಲಿನ ಅಸಮಾಧಾನ ಹೊರಹಾಕಿದರು.ಬಿಜೆಪಿ ನಾಯಕರ ಬಗ್ಗೆ ನೋವು:ಬಿಜೆಪಿ ನಾಯಕರ ಬಗ್ಗೆ ನೋವಿದೆ. ಚುನಾವಣೆಯಲ್ಲಿ ನನ್ನ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಿದವರ ಕುರಿತು ದೂರು ನೀಡಿದ ಹಿನ್ನೆಲೆಯಲ್ಲಿ ಕೆಲವರಿಗೆ ಶೋಕಾಸ್ ನೋಟಿಸ್ ನೀಡಿ ವಾಪಸ್ ಪಡೆದರು. ನಾನು ಇನ್ನೂ ತಾಳ್ಮೆ ಕಳೆದುಕೊಳ್ಳದೇ ಪಕ್ಷದಲ್ಲಿ ಮುಂದುವರಿದಿದ್ದು, ಪಕ್ಷದ ನಾಯಕರ ನಿರ್ಣಯಗಳ ಬಗ್ಗೆ ಸಮಾಧಾನದಿಂದ ಕಾದು ನೋಡುತ್ತೇನೆ. ನನ್ನ ಬೇಡಿಕೆಗೆ ಪಕ್ಷ ಇನ್ನಾದರೂ ಸ್ಪಂದಿಸುತ್ತದೆ ಎಂಬ ವಿಶ್ವಾಸ ನನ್ನದಾಗಿದೆ ಎಂದರು.ನಮ್ಮ ಮತದ ಅಗತ್ಯವಿಲ್ಲ:ವಾಸ್ತವಿಕವಾಗಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ನನ್ನ ಮತದ ಅಗತ್ಯವಿಲ್ಲವೆಂಬ ಸಂಗತಿ ಎಲ್ಲರಿಗೂ ಗೊತ್ತಿದೆ. ಜೆಡಿಎಸ್‌ನ ೫ನೇ ಅಭ್ಯರ್ಥಿ ಸೋಲುವರೆಂಬ ಲೆಕ್ಕಾಚಾರವೂ ಇತ್ತು. ನನ್ನ ಒಂದು ಮತದಿಂದ ಅವರ ಗೆಲುವು ಅಸಾಧ್ಯವೆಂಬ ಪರಿಜ್ಞಾನ ನನಗಿದೆ. ನಾನು ಪಕ್ಷಕ್ಕೆ ನಿಷ್ಟನಾಗಿದ್ದೇನೆ. ನಮಗೆ ಪಕ್ಷದ ಅಗತ್ಯವಿದೆ; ಪಕ್ಷಕ್ಕೂ ಎಲ್ಲರೂ ಬೇಕು. ಆದರೆ ಪಕ್ಷಕ್ಕೆ ಯಾರೂ ಅನಿವಾರ್ಯರಲ್ಲ. ಹಾಗಂತ ನನಗೆ ಯಾರ ಬಗೆಗೂ ಭಯ, ಆತಂಕಗಳಿಲ್ಲ. ಪ್ರಾಮಾಣಿಕತನ ನನ್ನಲ್ಲಿದೆ. ನನ್ನ ಕುರಿತು ಆಕ್ಷೇಪಿಸುವವರು ಉತ್ತರ ಪ್ರದೇಶ, ಹಿಮಾಚಲ ಪ್ರದೇಶದಲ್ಲಿ ಇದೇ ಚುನಾವಣೆ ಹೇಗೆ ನಡೆದಿದೆ ಎಂಬುದನ್ನು ಅವಲೋಕಿಸಬೇಕು. ಈ ದೃಷ್ಟಿಯಿಂದ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿಗಳಿಂದ ಜನರಿಗೆ ಮತ್ತಷ್ಟು ಗೊಂದಲವಾಗಬಾರದೆಂಬ ಉದ್ದೇಶದಿಂದ ಈ ಸ್ಪಷ್ಟನೆ ನೀಡುತ್ತಿದ್ದೇನೆ ಎಂದು ಹೆಬ್ಬಾರ್ ವಿವರಿಸಿದರು. ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ:ನಾನೆಂದೂ ಫಲಾಯನವಾದ ಮಾಡಿಲ್ಲ. ನಾನು ನನ್ನ ಮತದಾರರಿಗೆ ಮತ್ತು ಕ್ಷೇತ್ರಕ್ಕೆ ಎಂದೂ ಮೋಸ ಮಾಡಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ನನ್ನದು ಮೊದಲ ಆದ್ಯತೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯನ್ನು ಅನೇಕ ಬಾರಿ ಭೇಟಿಯಾಗಿ, ಸಾಕಷ್ಟು ಅನುದಾನ ತಂದ ಸಮಾಧಾನವಿದೆ ಎಂದ ಅವರು, ನೂತನ ಜಿಲ್ಲಾಧ್ಯಕ್ಷರು, ತಾಲೂಕಾಧ್ಯಕ್ಷರು ನಿಯೋಜನೆ ಸಂದರ್ಭದಲ್ಲಿ ಸೌಜನ್ಯಕ್ಕಾಗಿಯೂ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಎಂಬ ನೋವು ನನ್ನದು ಎಂದು ಬೇಸರ ವ್ಯಕ್ತಪಡಿಸಿದರು.ಪಕ್ಷದ ಆಂತರಿಕ ವಿಚಾರವನ್ನು ಬಹಿರಂಗಪಡಿಸಲಾಗದು. ಸಂದರ್ಭ ಬಂದಾಗ ಎಲ್ಲವನ್ನೂ ತಿಳಿಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಮಾರ್ಮಿಕವಾಗಿ ನುಡಿದರು.ಹುಣಶೆಟ್ಟಿಕೊಪ್ಪದ ಸಿದ್ದಿ ಯುವಕನ ಕೊಲೆಗೆ ಸಂಬಂಧಪಟ್ಟ ಪ್ರಶ್ನೆಗೆ, ಯಾರೇ ಕೊಲೆ ಮಾಡಿರಲಿ, ಅದು ಅಕ್ಷಮ್ಯ ಅಪರಾಧ. ಅವರಿಗೆ ಶಿಕ್ಷೆಯಾಗಲೇಬೇಕು. ಪೊಲೀಸ್ ಇಲಾಖೆ ಮತ್ತು ನ್ಯಾಯಾಲಯ ಅಪರಾಧಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಅಪರಾಧಿಗಳನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಹೆಬ್ಬಾರ್ ಸ್ಪಷ್ಟಪಡಿಸಿದರು.ಪಂಪ ಪ್ರಶಸ್ತಿ ಗೊಂದಲ:ಬನವಾಸಿ ಕದಂಬೋತ್ಸವದಲ್ಲಿ ನೀಡಬೇಕಿದ್ದ ಪಂಪ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ನೀಡಿರುವ ಪ್ರಶ್ನೆಗೆ, ಹಿಂದೆಯೂ ೬ ಬಾರಿ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ತೀರಾ ವಯಸ್ಸಾದವರಿಗೆ ನೀಡಿದ್ದಿದೆ. ಆದರೆ ಈ ಕುರಿತಾಗಿ ಉದ್ಭವವಾಗಿರುವ ಜನರ ಭಾವನೆ ನನಗೆ ಅರ್ಥವಾಗಿದೆ. ಮುಂದಿನ ದಿನಗಳಲ್ಲಿ ಬನವಾಸಿಯಲ್ಲಿಯೇ ಪಂಪ ಪ್ರಶಸ್ತಿಯನ್ನು ಯಾವುದೇ ಗೊಂದಲವಾಗದಂತೆ ಪ್ರದಾನ ಮಾಡಲಾಗುವುದು ಎಂದರು.ಮಾ. ೧೦ರಿಂದ ೧೫ರೊಳಗೆ ಚುನಾವಣೆಯ ನೀತಿ ಸಂಹಿತೆ ಜಾರಿಯಾಗುವ ಸಂಭವವಿದ್ದು, ಕೆಲವು ಅಭಿವೃದ್ಧಿ ಕಾರ್ಯಗಳನ್ನು ತ್ವರಿತಗತಿಯಲ್ಲಿ ಉದ್ಘಾಟಿಸಬೇಕಿದೆ ಎಂದರು.ಬಿಜೆಪಿ ಪ್ರಮುಖರಾದ ಮುರಳಿ ಹೆಗಡೆ, ಶಿರೀಷಪ್ರಭು, ಸುನಂದಾ ದಾಸ್, ಎಂ.ಆರ್. ಹೆಗಡೆ, ಆರ್.ಜಿ. ಹೆಗಡೆ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.