ಸಾರಾಂಶ
ಹುಬ್ಬಳ್ಳಿ/ಧಾರವಾಡ: ಎಲ್ಲಿ ನೋಡಿದರಲ್ಲಿ ಬಣ್ಣಬಣ್ಣದ ವಿದ್ಯುತ್ ದೀಪಗಳ ಚಿತ್ತಾರ!, ಎಲ್ಲೆಡೆಯೂ ಹೊರಸೂಸುತ್ತಿದ್ದ ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದ ಜನತೆ. ಇದು ಮಂಗಳವಾರ ಮಧ್ಯರಾತ್ರಿ ಹೊಸ ವರ್ಷಾಚರಣೆಯಲ್ಲಿ ಕಂಡುಬಂದ ದೃಶ್ಯ. ವಾಣಿಜ್ಯ ನಗರ ಹುಬ್ಬಳ್ಳಿ, ಧಾರವಾಡ ನಗರ ಮತ್ತು ಜಿಲ್ಲಾದ್ಯಂತ ಜನತೆ 2024ಕ್ಕೆ ವಿದಾಯ ಹೇಳಿ 2025ನೇ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಂಡರು.
ನಗರದ ಖಾಸಗಿ ಹೊಟೇಲ್‌ಗಳಲ್ಲಿ, ಸಭಾಭವನ ಹಾಗೂ ಅಪಾರ್ಟ್‌ಮೆಂಟ್ ಸೇರಿದಂತೆ ಎಲ್ಲೆಡೆ ಕುಟುಂಬದವರು, ಯುವಕ, ಯುವತಿಯರು ಕೇಕ್ ಕಟ್ ಮಾಡಿದರು. 12 ಗಂಟೆ ಆಗುತ್ತಿದ್ದಂತೆ ಒಕ್ಕೊರಲಿನಿಂದ ಕೇಳಿ ಬಂದ ಹ್ಯಾಪೀ ನ್ಯೂ ಇಯರ್ ಶುಭಾಶಯ ವಿನಿಮಯ ಮಾಡಿಕೊಳ್ಳುವ ಮೂಲಕ 2025ರ ಹೊಸ ವರ್ಷವನ್ನು ಅದ್ಧೂರಿಯಾಗಿ ಭರಮಾಡಿಕೊಂಡರು.ಪಂಚತಾರಾ ಹೋಟೆಲ್, ಬಾರ್ ಆ್ಯಂಡ್ ರೆಸ್ಟೋರೆಂಟ್, ಪಾರ್ಟಿ ಹಾಲ್‌ಗಳಲ್ಲಿ ಹೊಸ ವರ್ಷಾಚರಣೆಗೆ ಅವಕಾಶ ಕಲ್ಪಿಸಲಾಗಿತ್ತು. ನಗರದ ಪ್ರಮುಖ ಸ್ಥಳಗಳಾದ ಚೆನ್ನಮ್ಮ ವೃತ್ತ, ದೇಸಾಯಿ ವೃತ್ತ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಕೋರ್ಟ್ ಸರ್ಕಲ್, ಶ್ರೀನಗರ ಸರ್ಕಲ್, ಗೋಕುಲ ರಸ್ತೆ, ರೈಲು ನಿಲ್ದಾಣ ಸೇರಿದಂತೆ ಹಲವಡೆ ಯುವಕರು ಕೇಕ್ ಕತ್ತರಿಸಿ ಸಿಹಿಹಂಚುವ ಮೂಲಕ 2024ಕ್ಕೆ ವಿದಾಯಹೇಳಿ 2025ನ್ನು ಸಂಭ್ರಮಿದಿಂದ ಬರಮಾಡಿಕೊಂಡರು.
ಎಲ್ಲೆಡೆ ಡಿಜೆ ಸದ್ದು:ರಾತ್ರಿ 7 ಗಂಟೆಯಿಂದಲೇ ಬಹುತೇಕ ಹೊಟೇಲ್‌ಗಳಲ್ಲಿ ಜಗಮಗಿಸುವ ವಿದ್ಯುತ್ ದೀಪಗಳ ಜತೆಯಲ್ಲಿ ಡಿಜೆ ಹಾಡಿನ ಸದ್ದಿಗೆ ಯುವಕ, ಯುವತಿಯರು ಹೆಜ್ಜೆ ಹಾಕಿದರಲ್ಲದೇ ಕೆಲವಡೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಾಗೂ ಗಾಯನ ಸ್ಪರ್ಧೆಯನ್ನು ಆಯೋಜಿಸುವ ಹೊಸ ವರ್ಷಾಚರಣೆ ಸಂಭ್ರಮವನ್ನು ಇಮ್ಮಡಿಗೊಳ್ಳುವಂತೆ ಮಾಡಿದರು.
ಸಮಯ ರಾತ್ರಿ 12 ಗಂಟೆ ಆಗುತ್ತಿದ್ದಂತೆ ಯುವಕರು- ಯುವತಿಯರು ಕಿತ್ತೂರ ಚೆನ್ನಮ್ಮ ವೃತ್ತದಲ್ಲಿ ಕೇಕೆ, ಸಿಳ್ಳೆ ಹಾಕುತ್ತ ಬೈಕ್ ರ‍್ಯಾಲಿ ನಡೆಸಿದರು. ಕೆಲವರು ಹೊಟೇಲ್ ಹಾಗೂ ರೇಸಾರ್ಟ್‌ಗಳಲ್ಲಿ ಹೊಸ ವರ್ಷದ ಸಂಭ್ರಮಾಚಣೆ ಮಾಡಿದರೆ, ಮತ್ತೇ ಕೆಲವರು ತಮ್ಮ ಕುಟುಂಬ ಸದಸ್ಯರೊಂದಿಗೆ ಹಾಗೂ ಸ್ನೇಹಿತರೊಂದಿಗೆ ಸಂಭ್ರಮಾಚರಣೆಯಲ್ಲಿ ತೊಡಗಿದ್ದು ಕಂಡುಬಂದಿತು.ಕೆಲವರು ಮನೆಯಲ್ಲಿಯೇ ವಿವಿಧ ಭಕ್ಷ್ಯ ಭೋಜನ ತಯಾರಿಸಿ, ಕುಟುಂಬ ಸದಸ್ಯರೊಂದಿಗೆ ಊಟಮಾಡಿ ಹೊಸ ವರ್ಷವನ್ನು ಸ್ವಾಗತಿಸಿದರು. ಮತ್ತೇ ಕೆಲವರು ತಮ್ಮ ಕುಟುಂಬದೊಂದಿಗೆ ಹೊಟೇಲ್ ರೇಸಾರ್ಟ್‌ಗಳಿಗೆ ಹೋಗಿ ಸಂಭ್ರಮದಿಂದ ಹೊಸ ವರ್ಷವನ್ನು ಬರಮಾಡಿಕೊಂಡರು. ತಡರಾತ್ರಿಯ ವರೆಗೂ ಡಿಜೆ ಮ್ಯೂಸಿಕ್, ನೃತ್ಯದೊಂದಿಗೆ ಸಂಭ್ರಮಾಚರಣೆ ಮುಂದುವರಿದಿತ್ತು. ನಗರದ ಪ್ರಮುಖ ಹೊಟೇಲ್, ಸರ್ಕಲ್‌ಗಳಲ್ಲಿ ಭದ್ರತೆಗಾಗಿ ಅಗತ್ಯ ಪೊಲೀಸರನ್ನು ನಿಯೋಜಿಸಲಾಗಿತ್ತು.
ಕೇಕ್ ಮಾರಾಟ ಭರ್ಜರಿಹೊಸ ವರ್ಷಾಚರಣೆಯ ಅಂಗವಾಗಿ ನಗರದಾದ್ಯಂತ ಕೇಕ್‌ಗಳ ಮಾರಾಟ ಭರ್ಜರಿಯಾಗಿ ನಡೆಯಿತು. ಚಿಕ್ಕಪುಟ್ಟ ಬೇಕರಿಗಳಿಂದ ಹಿಡಿದು ದೊಡ್ಡ ದೊಡ್ ಬೇಕರಿಗಳಲ್ಲೂ ನೂರಾರು ಸಂಖ್ಯೆಗಳಲ್ಲಿ ಕೇಕ್‌ಗಳು ಮಾರಾಟವಾದವು. ಅರ್ಧ ಕೇಜಿಯಿಂದ ಹಿಡಿದಿ 25 ಕೆಜಿಯ ವರೆಗೂ ಕೇಕ್‌ಗಳ ಮಾರಾಟ ನಡೆಯಿತು.
ಎಲ್ಲಿ ನೋಡಿದರಲ್ಲಿ ಪೊಲೀಸರು:ಹೊಸವರ್ಷಾಚರಣೆ ಹಿನ್ನೆಲೆಯಲ್ಲಿ ನಗರದಾದ್ಯಂತ 2 ಸಾವಿರ ಭದ್ರತಾ ಸಿಬ್ಬಂದಿ ನಿಯೋಜಿಸಿಲಾಗಿತ್ತು. ನಗರದ ಪ್ರಮುಖ ವೃತ್ತ, ರಸ್ತೆ ಹಾಗೂ ಜನನಿಬಿಡ ಪ್ರದೇಶದಲ್ಲಿ ಪೊಲೀಸರು ಗುಂಪು ಸೇರದಂತೆ ನೋಡಿಕೊಳ್ಳುತ್ತಿದ್ದರು. ನ್ಯಾಯಾಲಯದ ಆದೇಶದ ಅನ್ವಯ ರಾತ್ರಿ 10 ಗಂಟೆಯ ನಂತರ ಡಿಜೆ ಬಳಸಲು ಅವಕಾಶ ನೀಡಲಿಲ್ಲ.ಮತ್ತಿನಲ್ಲಿದ್ದರಿಗೆ ಕಾದಿತ್ತು ಬಿಸಿ:
ಹೊಸ ವರ್ಷ ಸಂಭ್ರಮಾಚರಣೆ ಹೆಸರಿನಲ್ಲಿ ಪಾನಮತ್ತರಾಗಿ ವಾಹನ ಚಲಾಯಿಸುತ್ತಿದ್ದ ಯುವಕರಿಗೆ ಪೊಲೀಸರು ದಂಡ ಹಾಕುವ ಮೂಲಕ ಬಿಸಿ ಮುಟ್ಟಿಸಿದರು. ಕೆಲವು ಕಡೆಗಳಲ್ಲಿ ಅತಿಯಾದ ಮದ್ಯ ಸೇವನೆ ಮಾಡಿದವರನ್ನು ಪೊಲೀಸರೇ ಆಟೋದ ಮೂಲಕ ಮನೆಗೆ ಕಳಿಸಿದ ಪ್ರಸಂಗ ನಡೆಯಿತು. ನಗರದಾದ್ಯಂತ ರಾತ್ರಿ ಇಡೀ ಪೊಲೀಸರ ಪಹರೆ ಮುಂದುವರೆದಿತ್ತು.ಸಿಟಿ ರೌಂಡ್ ಹಾಕಿದ ಕಮೀಷನರ್ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆಯಿಂದ ಬುಧವಾರ ಬೆಳಗಿನ ಜಾವದ ವರೆಗೂ ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಡಿಸಿಪಿಗಳಾದ ಮಹಾನಿಂಗ ನಂದಗಾವಿ ಹಾಗೂ ರವೀಶ್ ಸಿ.ಆರ್. ಮಹಾನಗರದಾದ್ಯಂತ ಸಂಚಾರ ಕೈಗೊಂಡರು. ಪ್ರಮುಖ ಸ್ಥಳಗಳಲ್ಲಿ ನಿಯೋಜಿಸಲಾಗಿದ್ದ ಪೊಲೀಸರನ್ನು ಭೇಟಿ ಮಾಡಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕಾರ್ಯನಿರ್ವಹಿಸುವಂತೆ ಮಾರ್ಗದರ್ಶನ ನೀಡಿದರು.