ಕೇಂದ್ರ ಸಚಿವ ಕುಮಾರಸ್ವಾಮಿಗೆ ಅದ್ಧೂರಿ ಸ್ವಾಗತ

| Published : Jun 15 2024, 01:02 AM IST

ಸಾರಾಂಶ

ದೇವನಹಳ್ಳಿ: ಕೇಂದ್ರ ಸಚಿವ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ರಾಜ್ಯಕ್ಕೆ ಆಗಮಿಸಿದ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ದೇವನಹಳ್ಳಿ, ನೆಲಮಂಗಲ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ ಅಲ್ಲದೆ ಕೋಲಾರ ಜಿಲ್ಲೆಗಳಿಂದ ಸಹಸ್ರಾರು ಅಭಿಮಾನಿಗಳು, ಕಾರ್ಯಕರ್ತರು, ಮುಖಂಡರು ಆಗಮಿಸಿ ದೇವನಹಳ್ಳಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ ಕೋರಿ ಅಭಿನಂದಿಸಿದರು.

ದೇವನಹಳ್ಳಿ: ಕೇಂದ್ರ ಸಚಿವ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ರಾಜ್ಯಕ್ಕೆ ಆಗಮಿಸಿದ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ದೇವನಹಳ್ಳಿ, ನೆಲಮಂಗಲ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ ಅಲ್ಲದೆ ಕೋಲಾರ ಜಿಲ್ಲೆಗಳಿಂದ ಸಹಸ್ರಾರು ಅಭಿಮಾನಿಗಳು, ಕಾರ್ಯಕರ್ತರು, ಮುಖಂಡರು ಆಗಮಿಸಿ ದೇವನಹಳ್ಳಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ ಕೋರಿ ಅಭಿನಂದಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕುಮಾರಸ್ವಾಮಿ, ತಮ್ಮೆಲ್ಲರಿಗೂ ಮೊದಲು ಅಭಿನಂದನೆ ತಿಳಿಸುತ್ತೇನೆ. ಜೆಡಿಎಸ್‌ ಅಭ್ಯರ್ಥಿಗಳು ಆಯ್ಕೆಯಾಗಲು ನಿಮ್ಮೆಲ್ಲರ ಆರ್ಶೀವಾದವೇ ಮುಖ್ಯ. ಹಳೇ ಕರ್ನಾಟಕದಲ್ಲಿ 14ರಲ್ಲಿ 12 ಮಂದಿಯನ್ನು ಆಯ್ಕೆ ಮಾಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು. ಕೇಂದ್ರ ಸರ್ಕಾರದಲ್ಲಿ ನಿಮ್ಮೆಲ್ಲರ ಆರ್ಶೀವಾದದಿಂದ ನರೇಂದ್ರಮೋದಿಯವರ ನಾಯಕತ್ವದಲ್ಲಿ ಪ್ರಥಮ ಬಾರಿಗೆ ಸಚಿವರಾಗಿ ಆಡಳಿತ ನಿರ್ವಹಿಸಲು ಅವಕಾಶ ದೊರೆತಿರುವುದು ರಾಜ್ಯದ ಜೆಡಿಎಸ್‌ ಮತ್ತು ಬಿಜೆಪಿ ಕಾರ್ಯಕರ್ತರೇ ಕಾರಣ ಎಂದು ಹೇಳಿದರು.

ನನಗೆ ರಾಜಕೀಯ ಜನ್ಮ ನೀಡಿದ ರಾಮನಗರ ಜಿಲ್ಲೆ ಅಲ್ಲದೆ ಮಂಡ್ಯ ಜಿಲ್ಲೆಯ ಜನತೆಗೆ ಅಭಿನಂದನೆ ಸಲ್ಲಿಸಿದರಲ್ಲದೆ ನಮ್ಮ ಕುಮಾರಣ್ಣ ಕೃಷಿ ಸಚಿವರಾಗಬೇಕೆಂಬ ಆಸೆ ಬಹುಜನರ ಹೃದಯದಲ್ಲಿತ್ತು. ಆದರೆ ದೊರೆತಿರುವ ಅವಕಾಶ ಭಗವಂತನ ಆರ್ಶೀವಾದವೇ ಆಗಿದೆ. ನನಗೆ ಬೇಕಾಗಿರುವುದು ರಾಜಕೀಯ ಅಲ್ಲ, ನನ್ನ ರೈತರ ಹಲವಾರು ಸಮಸ್ಯೆಗಳಿಗೆ ಪರಿಹಾರ ಬೇಕಾಗಿದೆ. ಅಲ್ಲದೆ ನಾಡಿನ ಯುವಕರಿಗೆ ಉದ್ಯೋಗ ಕೊಡಿಸುವ ಯೋಚನೆ ಇದೆ. ಆದರೆ ಅವರು ದೇಶದ ಯಾವುದೇ ಮೂಲೆಯಲ್ಲಿ ಕೆಲಸ ಮಾಡಲು ಸಿದ್ದರಿರಬೇಕು. ರೈತರ ಬದುಕಿಗೆ ಎಲ್ಲಿ ನಾವು ಎಡವಿದ್ದೇವೆ ಯಾವ ರೀತಿ ಕಾರ್ಯಕ್ರಮ ನೀಡಬೇಕು ಎಂಬುದರ ಬಗ್ಗೆ ಪ್ರಾಮಾಣಿಕ ಪ್ರಯತ್ನ ಪಡುತ್ತೇನೆ ಎಂದು ತಿಳಿಸಿದರು.

ಬಯಲು ಸೀಮೆ ಜಿಲ್ಲೆಗಳ ಶ್ರಮಜೀವಿ ರೈತರಿಗೆ ಶಾಶ್ವತ ನೀರಾವರಿ ಯೋಜನೆಗಾಗಿ ಕೇಂದ್ರದಲ್ಲಿ ಹೆಚ್ಚಿನ ನೆರವು ತರಲು ಅವಕಾಶವಿದೆ. ಇನ್ನು ಮುಂದೆ ಪ್ರತಿ ವಾರದಲ್ಲಿ ನಾಲ್ಕು ದಿನ ದೆಹಲಿಯಲ್ಲಿರುತ್ತೇನೆ. ಉಳಿದ ಮೂರು ದಿನ ಕರ್ನಾಟದಲ್ಲಿ ಇರುತ್ತೇನೆ. ನನಗೆ ಕೊಟ್ಟಿರುವ ಅವಕಾಶ ರೈತರ ಮತ್ತು ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ಕಳೆದ ಒಂದು ವರ್ಷದಿಂದ ರಾಜಕಾರಣ ನೋಡಿದ್ದೀರಿ. ನನ್ನ ಗುರಿ ಇರುವುದು ನನ್ನ ರಾಜ್ಯ, ನನ್ನ ಜನತೆ, ನಾಡಿನ ಕಲ್ಯಾಣವೇ ಆಗಿದೆ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ಧಕ್ಕೆ ತರುವುದಿಲ್ಲ ಎಂದರು.

ಸಮಾರಂಭದಲ್ಲಿ ರಾಜ್ಯ ಯುವ ಅಧ್ಯಕ್ಷ ನಿಖಿಲ್‌ಕುಮಾರಸ್ವಾಮಿ, ಶಾಸಕ ವೆಂಕಟಶಿವಾರೆಡ್ಡಿ, ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಜಿಲ್ಲಾಧ್ಯಕ್ಷ ಬಿ.ಮುನೇಗೌಡ, ಕೃಷ್ಣಾರೆಡ್ಡಿ, ಡಾ, ಶ್ರೀನಿವಾಸಮೂರ್ತಿ, ಕೋಲಾರ ಶಿವಣ್ಣ ಅಲ್ಲದೆ ಹಲವಾರು ಮಂದಿ ಜೆಡಿಎಸ್‌ ಮುಖಂಡರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹಲವಾರು ಜಾನಪದ ತಮಟೆ ವಾದ್ಯಗಳು, ವೀರಗಾಸೆ ಜುಣಿತ, ಅಲ್ಲದೆ ಬಾರಿ ಸೇಬಿನ ಹಾರದ ಜೊತೆಯಲ್ಲಿ ಎರಡು ದೊಡ್ಡ ಹೂವಿನ ಹಾರಗಳನ್ನು ಕ್ರೇನ್‌ ಸಹಾಯದಿಂದ ಮುಖಂಡರಿಗೆ ಹಾಕಲಾಯಿತು. ಹಲವಾರು ತಾಲೂಕುಗಳಿಂದ ಜೆಡಿಎಸ್‌ ಪಕ್ಷದ ಹತ್ತು ಸಾವಿರಕ್ಕೂ ಹೆಚ್ಚುಮಂದಿ ಭಾಗವಹಿಸಿದ್ದರು.ಕೋಟ್‌..............

ನಾಡಿನ ಜನತೆ ಜೆಡಿಎಸ್‌ ಪಕ್ಷದ ಮೇಲೆ ಅಪಾರ ನಂಬಿಕೆ, ಭರವಸೆ ಇಟ್ಟುಕೊಂಡಿದ್ದಾರೆ. ಆದರೆ ರಾಜ್ಯದ ಕೆಲ ಮಹಾನುಭಾವರು ಜೆಡಿಎಸ್‌ ಪಕ್ಷವನ್ನು ಮುಗಿಸಿದ್ದೇವೆ, ಸರ್ವನಾಶ ಮಾಡಿದ್ದೇವೆ, ಅಂತ ದುರಂಹಕಾರದ ಮಾತಾಡಿದ್ದು, ಅದರ ಬಗ್ಗೆ ನಾನು ಚರ್ಚೆ ಮಾಡಲು ಹೋಗಲ್ಲ, ಬದಲಾಗಿ ನನ್ನ ಜನತೆಯೇ ಅವರಿಗೆ ತಕ್ಕ ಉತ್ತರ ನೀಡಿದ್ದಾರೆ.

-ಕುಮಾರಸ್ವಾಮಿ, ಕೇಂದ್ರ ಸಚಿವ(ಫೋಟೋ ಕ್ಯಾಫ್ಷನ್‌)

ದೇವನಹಳ್ಳಿ ವಿಮಾನ ನಿಲ್ದಾಣದ ಬಳಿ ಬೃಹತ್‌ ಹೂಮಾಲೆಯೊಂದಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಜೆಡಿಎಸ್‌, ಹಾಲಿ, ಮಾಜಿ ಶಾಸಕರು, ಮುಖಂಡರು, ಕಾರ್ಯಕರ್ತರು ಸ್ವಾಗತಿಸಿದರು.