ಸಾರಾಂಶ
ಕನ್ನಡಪ್ರಭ ವಾರ್ತೆ ಸಾಗರ ಸಾಮ್ರಾಜ್ಯಶಾಹಿಯ ಭಾಗವಾಗಿ ಭಾರತಕ್ಕೆ ಬಂದ ರೆ.ಕಿಟೆಲ್ ಮುಂತಾದ ಕ್ರೈಸ್ತ ಪಾದ್ರಿಗಳು ಈ ನೆಲದ ಬಗ್ಗೆ ಮೋಹ ಬೆಳೆಸಿಕೊಂಡು ಇಲ್ಲಿನ ಭಾಷೆ, ಸಂಸ್ಕೃತಿ, ಜನಜೀವನ ಕುರಿತು ಇನ್ನಿಲ್ಲದಂತೆ ಕೆಲಸ ಮಾಡಿದ್ದಾರೆ. ಅವರು ಕನ್ನಡ ಭಾಷೆ ಮತ್ತು ವಿದ್ವತ್ತಿಗೆ ನೀಡಿದ ಕೊಡುಗೆ ಅನನ್ಯವಾದುದು ಎಂದು ಚಿಂತಕ ಪ್ರೊ. ರಾಜೇಂದ್ರ ಚೆನ್ನಿ ಅಭಿಪ್ರಾಯಪಟ್ಟರು.
ಪಟ್ಟಣದ ಪರಸ್ಪರ ಸಾಹಿತ್ಯ ವೇದಿಕೆ ಭಾನುವಾರ ಹಮ್ಮಿಕೊಂಡಿದ್ದ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ವೇದಿಕೆ ಕೊಡಮಾಡಿದ ರೆ. ಎಫ್.ಕಿಟೆಲ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಕ್ರೈಸ್ತ ಪಾದ್ರಿಗಳು ಕನ್ನಡದ ಕೊಡುಗೆ, ಕನ್ನಡದ ಆಧುನಿಕ ಪ್ರಜ್ಞೆಯನ್ನು ನಮ್ಮೆದುರಿಗೆ ಇಟ್ಟಿದ್ದಾರೆ ಎಂದರು.ಕಿಟೆಲ್ ಅವರು ನಿಘಂಟನ್ನು ಕೊಟ್ಟಿದ್ದಷ್ಟೆ ಅಲ್ಲ, ಕನ್ನಡದ ಅನೇಕ ಕೃತಿಗಳನ್ನು ಸಂಪಾದಿಸಿದ್ದಾರೆ. ಜಾನಪದ ಸಂಸ್ಕೃತಿ ಕುರಿತೂ ಕೆಲಸ ಮಾಡಿದ್ದಾರೆ. ನಿಘಂಟಿಗಾಗಿ ಪ್ರತಿ ಊರಿನ ಬೀದಿಬೀದಿಗಳಲ್ಲಿ ಸಂಚರಿಸಿ ಜನರು ಪ್ರತಿನಿತ್ಯ ಬಳಸುವ ಭಾಷೆಯನ್ನು ಸಂಗ್ರಹಿಸಿದ್ದಾರೆ. ಹಾಗಾಗಿ, ಇದು ಕೇವಲ ನಿಘಂಟಾಗಿರದೇ, ಒಂದು ಸಾಂಸ್ಕೃತಿಕ ಪಠ್ಯವಾಗಿದೆ ಎಂದ ಚೆನ್ನಿ ಅವರು, ಕನ್ನಡದ ಪ್ರಾದೇಶಿಕತೆ ಅರ್ಥ ಮಾಡಿಕೊಂಡು ದಾಖಲಿಸಿರುವುದು ಕಿಟೆಲ್ ಅವರ ಹೆಚ್ಚುಗಾರಿಕೆ ಎಂದು ಹೇಳಿದರು.
ಸಾಹಿತ್ಯದ ಜೊತೆಗೆ ನಾವು ಪರಿಸರದ ಬಗ್ಗೆಯೂ ಗಮನಹರಿಸಬೇಕಾಗಿದೆ. ಪಶ್ಚಿಮಘಟ್ಟದ ಬಗೆಗಿನ ನಮ್ಮ ನಿರ್ಲಕ್ಷ್ಯವನ್ನು ಸಹಿಸಲು ಸಾಧ್ಯವಿಲ್ಲ. ಅನೇಕ ಹೋರಾಟದ ನಡುವೆಯೂ ಶರಾವತಿ ನದಿ ನೀರನ್ನು ಬೆಂಗಳೂರಿಗೆ ಕಳಿಸುತ್ತೇವೆ ಎನ್ನುವ ಚರ್ಚೆ ಪ್ರಾರಂಭ ಆಗಿರುವುದು ದುರದೃಷ್ಟಕರ. ರಾಜಕೀಯ ನಾಯಕರ ಅಭಿವೃದ್ಧಿ ಎನ್ನುವ ಕೆಟ್ಟ ಕನಸು, ಹುಚ್ಚಿಗೆ ನಾವು ಬಲಿಪಶುವಾಗಿದ್ದೇವೆ. ಕನ್ನಡದ ವಿದ್ವತ್ ಸಂಪಾದನೆ ಜೊತೆಗೆ ಆಯಾ ಕಾಲದ ಸಾಂಸ್ಕೃತಿಕ, ಪರಿಸರ ಪ್ರಶ್ನೆಗೆ ಉತ್ತರ ಕಂಡುಕೊಳ್ಳುತ್ತ ನಾವು ಮುನ್ನಡೆಯಬೇಕಾಗಿದೆ ಎಂದು ಹೇಳಿದರು.ಅಕ್ಕ ಮಹಾದೇವಿ ಪ್ರಶಸ್ತಿ ಸ್ವೀಕರಿಸಿದ ಡಾ.ಸಬಿತಾ ಬನ್ನಾಡಿ, ಅಕ್ಕಮಹಾದೇವಿ ಪ್ರಜ್ಞಾವಂತ ಹೆಣ್ಣುಮಕ್ಕಳ ಪ್ರಜ್ಞೆಯೊಳಗೆ ಸೇರಿದವಳು. ಆಕೆ ವೈಯಕ್ತಿಕ ಬದುಕು ಹಾಗೂ ಜ್ಞಾನವನ್ನು ಬೇರೆ ಬೇರೆಯಾಗಿ ನೋಡದೆ ಇಡಿಯಾಗಿ ಕಟ್ಟಿಕೊಟ್ಟಿದ್ದಾಳೆ. ಆದರೆ ನಾವು ಆಕೆಯ ವೈಯಕ್ತಿಕ ಜೀವನಕ್ಕೆ ಕೊಟ್ಟಷ್ಟು ಪ್ರಾಧಾನ್ಯತೆಯನ್ನು ಅವಳ ಜ್ಞಾನ ಪರಂಪರೆಗೆ ಕೊಡದಿರುವುದು ವಿಷಾದದ ಸಂಗತಿ. ಅಕ್ಕಮಹಾದೇವಿಯ ವಚನಗಳ ಸಾಲುಗಳನ್ನು ಇಂದಿಗೂ ಅನ್ವಯಿಸಿಕೊಳ್ಳಬಹುದು. ಆಕೆ ದಾಖಲಿಸಿದ ಸವಾಲು, ತೊಡಕು, ಬೇಗುದಿ ಎಲ್ಲ ತಲೆಮಾರಿಗೂ ತಟ್ಟುತ್ತಿದೆ ಎಂದು ಹೇಳಿದರು.
ವೇದಿಕೆ ಗೌರವಾಧ್ಯಕ್ಷ ಡಾ. ಜಿ.ಎಸ್. ಭಟ್ಟ ಮಾತನಾಡಿ, ಕನ್ನಡ ಸಾಹಿತ್ಯ ಕ್ಷೇತ್ರದ ಅಭಿವೃದ್ಧಿಗೆ ಹಲವರು ನೀಡಿದ ಕೊಡುಗೆ ಸ್ಮರಣೀಯವಾಗಿದೆ ಎಂದು ಹೇಳಿದರು.ಹಿರಿಯ ಸಾಹಿತಿ ಡಾ. ನಾ.ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕನ್ನಡ ಭಾಷೆ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಎಸ್.ಎಂ. ಗಣಪತಿ ಸ್ವಾಗತಿಸಿದರು. ವೇದಿಕೆ ಅಧ್ಯಕ್ಷ ಡಾ.ಸರ್ಫ್ರಾಜ್ ಚಂದ್ರಗುತ್ತಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ದತ್ತಾತ್ರೆಯ ಬೊಂಗಾಳೆ ನಿರೂಪಿಸಿದರು.
- - - -14ಕೆ.ಎಸ್.ಎ.ಜಿ.1:ಸಾಗರದ ಪರಸ್ಪರ ಸಾಹಿತ್ಯ ವೇದಿಕೆ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರೊ.ರಾಜೇಂದ್ರ ಚೆನ್ನಿ ಹಾಗೂ ಡಾ.ಸಬಿತಾ ಬನ್ನಾಡಿ ಅವರಿಗೆ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.