ದತ್ತನ ತೊಟ್ಟಿಲೋತ್ಸವದಲ್ಲಿ ಮಿಂದೆದ್ದ ಭಕ್ತ ಸಮೂಹ

| Published : Dec 26 2023, 01:31 AM IST

ದತ್ತನ ತೊಟ್ಟಿಲೋತ್ಸವದಲ್ಲಿ ಮಿಂದೆದ್ದ ಭಕ್ತ ಸಮೂಹ
Share this Article
  • FB
  • TW
  • Linkdin
  • Email

ಸಾರಾಂಶ

ದಕ್ಷಿಣ ಭಾರತದ ಸುಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಅಫಜಲ್ಪುರ ತಾಲೂಕಿನ ಸುಕ್ಷೇತ್ರ ದೇವಲ ಗಾಣಗಾಪೂರದಲ್ಲಿ ಹೊಸ್ತಲ ಹುಣ್ಣಿಮೆ ಪ್ರಯುಕ್ತ ದತ್ತಾತ್ರೇಯ ಮಹಾರಾಜರ ತೊಟ್ಟಿಲೋತ್ಸವ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು.

ಕನ್ನಡಪ್ರಭ ವಾರ್ತೆ ಚವಡಾಪುರ

ದಕ್ಷಿಣ ಭಾರತದ ಸುಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಅಫಜಲ್ಪುರ ತಾಲೂಕಿನ ಸುಕ್ಷೇತ್ರ ದೇವಲ ಗಾಣಗಾಪೂರದಲ್ಲಿ ಹೊಸ್ತಲ ಹುಣ್ಣಿಮೆ ಪ್ರಯುಕ್ತ ದತ್ತಾತ್ರೇಯ ಮಹಾರಾಜರ ತೊಟ್ಟಿಲೋತ್ಸವ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು. ದತ್ತನ ತೊಟ್ಟಿಲೋತ್ಸವದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡು ಭಕ್ತಿಭಾವದಲ್ಲಿ ಮಿಂದೆದ್ದರು.

ಡಿ.25ರಂದು ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ದತ್ತಾತ್ರೇಯ ಮಹಾರಾಜರ ತೊಟ್ಟಿಲೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು. ತೊಟ್ಟಿಲೋತ್ಸವ ಕಾರ್ಯಕ್ರಮಕ್ಕಾಗಿ ಮಹಾರಾಷ್ಟ್ರ, ಸೀಮಾಂಧ್ರ, ತೆಲಂಗಾಣ, ಕೆರಳ, ಗೋವಾ ಸೇರಿ ರಾಜ್ಯದ ನಾನಾ ಜಿಲ್ಲೆ, ತಾಲೂಕುಗಳಿಂದ ಭಕ್ತರು ಆಗಮಿಸಿ ದತ್ತ ಮಹಾರಾಜರ ದರ್ಶನ ಪಡೆದು ಪುನೀತರಾದರು.

ದತ್ತ ಜಯಂತಿ ಹಿನ್ನೆಲೆ ಗಾಣಗಾಪೂರ ಗ್ರಾಮದ ಬೀದಿ ಬೀದಿಗಳಲ್ಲಿ ಭಕ್ತರಿಂದ ಅನ್ನ ಸಂತರ್ಪಣೆ ನಡೆಯಿತು. ದತ್ತ ಮಹಾರಾಜರ ಜಯಘೋಷ ಕೂಗುತ್ತ ಭಕ್ತರು ದತ್ತನ ಸ್ಮರಣೆ ಮಾಡಿದರು. ಡಿ.26ರಂದು ಸಾಯಂಕಾಲ 5 ಗಂಟೆಗೆ ದತ್ತಾತ್ರೇಯ ಮಹಾರಾಜರ ಭವ್ಯ ರಥೋತ್ಸವ ದತ್ತ ದೇವಸ್ಥಾನದಿಂದ ಹನುಮಾನ್ ದೇವಸ್ಥಾನದ ವರೆಗೆ ಜರುಗಲಿದೆ ಎಂದು ದೇವಸ್ಥಾನದ ಕಾರ್ಯದರ್ಶಿ ಶ್ರೀಕಾಂತ್ ಭಟ್ ಪೂಜಾರಿ ತಿಳಿಸಿದ್ದಾರೆ. ದತ್ತ ಜಯಂತಿಗಾಗಿ ಆಗಮಿಸಿದ್ದ ಭಕ್ತರಿಂದಾಗಿ ಗ್ರಾಮದಲ್ಲಿ ಎಲ್ಲಿನೋಡಿದರೂ ಜನಜಂಗುಳಿ, ವಾಹನ ದಟ್ಟಣೆ ಕಂಡು ಬಂತು. ಜನಜಂಗುಳಿ ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆ ಹರಸಾಹಸ ಪಟ್ಟರು.

ದೇವಸ್ಥಾನದ ಪ್ರಾಂಗಣ ಬಹಳ ಚಿಕ್ಕದಾಗಿದ್ದು, ಸಾಕಷ್ಟು ಭಕ್ತರು ಸೇರಿಕೊಂಡು ಉತ್ಸವ ನೋಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ದೇವಸ್ಥಾನದ ಹೊರಭಾಗದಲ್ಲಿ ನಿಲ್ಲುವ ಸಹಸ್ರಾರು ಭಕ್ತರಿಗಾಗಿ ಡಿಜಿಟಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಿಸಬೇಕು. ಇಂತ ಡಿಜಿಟಲ್ ಯುಗದಲ್ಲೂ ನಾವು ದೂರ ದೂರದಿಂದ ಇಲ್ಲಿಗೆ ಬಂದು ದತ್ತನ ತೊಟ್ಟಿಲೋತ್ಸವ ಕಣ್ತುಂಬಿಕೊಳ್ಳಲಾಗಲಿಲ್ಲ ಎಂದು ಮಹಾರಾಷ್ಟ್ರ, ಸೀಮಾಂದ್ರ, ತೆಲಂಗಾಣದಿಂದ ಆಗಮಿಸಿದ್ದ ಭಕ್ತರು ಅಳಲು ತೋಡಿಕೊಂಡರು.

ಡಿವೈಎಸ್‌ಪಿ ಗೋಪಿ ಆರ್, ಪಿಎಸ್‌ಐ ರಾಹುಲ ಪವಾಡೆ ಸೇರಿ ನೂರಾರು ಪೊಲೀಸ್ ಸಿಬ್ಬಂದಿ, ಗೃಹ ರಕ್ಷಕ ಸಿಬ್ಬಂದಿ ಬಂದೋಬಸ್ತ್ ವ್ಯವಸ್ಥೆಕೈಗೊಂಡಿದ್ದರು.