ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ನಗರ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಸಮಸ್ಯೆ ದಿನೇದಿನೇ ತೀವ್ರವಾಗುತ್ತಿದ್ದು, ಸೋಮವಾರ ಬೆಳಿಗ್ಗೆ ನಗರಸಭೆ ಆವರಣವನ್ನೇ ನಾಯಿಗಳ ಗುಂಪೊಂದು ಆವರಿಸಿದ ಪರಿಣಾಮ ಕಚೇರಿಗೆ ಆಗಮಿಸಿದ್ದ ನಾಗರಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.ನಗರದ ಬಡಾವಣೆಗಳಿಂದ ಹಿಡಿದು ಪ್ರಮುಖ ಬೀದಿಗಳವರೆಗೂ ಬೀದಿನಾಯಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು ಜನರು ಜೀವಭಯದಲ್ಲಿ ಬದುಕುವಂತಾಗಿದೆ. ವಿಶೇಷವಾಗಿ ಮಾಲೇಕಲ್ಲು ಹಾಗೂ ತಿರುಪತಿ ರಸ್ತೆ ಮಾರ್ಗಗಳಲ್ಲಿ ನಾಯಿಗಳ ಹಾವಳಿ ಮುಂದುವರಿಯುತ್ತಿದ್ದು, ಯಾವುದೇ ಸಮಯದಲ್ಲಾದರೂ ದಾಳಿಗೆ ಒಳಗಾಗಬಹುದೆಂಬ ಭಯ ಜನರಲ್ಲಿ ಮನೆಮಾಡಿದೆ. ನಗರದ ವಿವಿಧ ಪ್ರದೇಶಗಳಲ್ಲಿ ಮಾಂಸಾಹಾರ ಹಾಗೂ ಸಸ್ಯಹಾರ ಅಂಗಡಿಗಳ ಮಾಲೀಕರು ತಯಾರಿಸಿದ ಅಥವಾ ಮಾರಾಟವಾಗದ ಆಹಾರವನ್ನು ರಸ್ತೆ ಬದಿಗಳು, ಚರಂಡಿಗಳು ಮತ್ತು ತೆರೆಯಾದ ಸ್ಥಳಗಳಲ್ಲಿ ಬಿಸಾಡುತ್ತಿರುವುದು ಈ ನಾಯಿಗಳ ಸಂಖ್ಯೆಯನ್ನು ಹೆಚ್ಚಿಸಲು ಪ್ರಮುಖ ಕಾರಣವಾಗಿದೆ. ಹಸಿವಿನಿಂದ ಬಳಲುತ್ತಿರುವ ನಾಯಿಗಳು ದಿನದ ಯಾವ ಸಮಯದಲ್ಲಾದರೂ ಬೀದಿಗಳಲ್ಲಿ ಸಂಚರಿಸುವ ನಾಗರೀಕರ ಮೇಲೆ ದಾಳಿ ನಡೆಸುತ್ತಿರುವ ಘಟನೆಗಳು ಹೆಚ್ಚುತ್ತಿವೆ.
ಇತ್ತೀಚೆಗೆ ಬಿ. ಎಚ್. ರಸ್ತೆಯಲ್ಲಿಯೂ ನಾಯಿಗಳ ಗುಂಪು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಮಕ್ಕಳು ಹಾಗೂ ಹಿರಿಯರು ರಸ್ತೆಗಳಲ್ಲಿ ಸಂಚರಿಸಲು ಹೆದರುತ್ತಿರುವ ಸ್ಥಿತಿ ಉಂಟಾಗಿದೆ. ಸೋಮವಾರ ಬೆಳಿಗ್ಗೆ ನಗರಸಭೆ ಆವರಣದಲ್ಲಿಯೇ ಹತ್ತಾರು ನಾಯಿಗಳು ಪ್ರವೇಶಿಸಿದ ಪರಿಣಾಮ ಕಚೇರಿಗೆ ಬಂದ ನಾಗರಿಕರು ಮತ್ತು ಸಿಬ್ಬಂದಿ ಕೆಲಕಾಲ ಅಸಹಜ ಪರಿಸ್ಥಿತಿಯನ್ನು ಎದುರಿಸಿದರು. ಹೀಗಾಗಿ ಬೀದಿನಾಯಿಗಳ ಸಂಖ್ಯೆಯನ್ನು ನಿಯಂತ್ರಿಸುವುದು ಹಾಗೂ ಸಾರ್ವಜನಿಕ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುವುದು ಅತ್ಯವಶ್ಯಕವಾಗಿದೆ.ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ನಗರಸಭೆ ಅಧ್ಯಕ್ಷ ಎಂ. ಸಮೀವುಲ್ಲ, “ಹಿಂದಿನ ಸಲ ನಗರಸಭೆಯು ಟೆಂಡರ್ ಮೂಲಕ 577 ಬೀದಿ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆಯನ್ನು ನೀಡಿತ್ತು. ಪ್ರಸ್ತುತ ಮತ್ತೊಮ್ಮೆ ಇದೇ ಕಾರ್ಯಕ್ಕಾಗಿ ಪೂರ್ವಸಿದ್ಧತೆ ಕೈಗೊಳ್ಳಲಾಗಿದೆ. ನಾಯಿಗಳನ್ನು ಸೆರೆ ಹಿಡಿದು ಚಿಕಿತ್ಸೆಗೆ ಒಳಪಡಿಸಲು ಕಬ್ಬಿಣದ ಬೋನುಗಳನ್ನು ನಿರ್ಮಿಸಲಾಗಿದೆ. ಕಾನೂನಾತ್ಮಕ ರೀತಿಯಲ್ಲಿ ಬೀದಿನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದ್ದು, ನಾಗರೀಕರು ರಸ್ತೆಗಳಲ್ಲಿ ಸಂಚರಿಸುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿದರು.
ನಗರಸಭೆ ಅಧಿಕಾರಿಗಳು ಮುಂದಿನ ಕೆಲವು ದಿನಗಳಲ್ಲಿ ಹೊಸ ಅಭಿಯಾನ ಆರಂಭಿಸುವುದಾಗಿ ತಿಳಿಸಿದ್ದು, ನಾಗರಿಕರು ಸಹಕರಿಸಿದರೆ ಈ ಸಮಸ್ಯೆಯನ್ನು ನಿಯಂತ್ರಣಕ್ಕೆ ತರುವ ಸಾಧ್ಯತೆ ಇದೆ ಎಂದು ಹೇಳಿದರು.