ಸಾರಾಂಶ
ನಾವು ಕಾಲೇಜಿನಲ್ಲಿ ಓದುತ್ತಿರುವಾಗ ಈಗಿರುವಷ್ಟು ಸೌಕರ್ಯಗಳು ಇರಲಿಲ್ಲ.
ಕೂಡ್ಲಿಗಿ: ಕಾಲೇಜಿನಲ್ಲಿ ಕಳೆದ ೩೫ ವರ್ಷಗಳ ಹಿಂದೆ ಒಟ್ಟಿಗೆ ಓದಿದವರಲ್ಲಿ ಈಗ ಕೆಲವರು ನೌಕರರಾಗಿದ್ದರೆ, ಇನ್ನು ಕೆಲವರು ವ್ಯಾಪಾರಸ್ಥರು, ಗೃಹಿಣಿಯರು, ರೈತರಾಗಿದ್ದಾರೆ. ಅವರೆಲ್ಲ ಸೇರಿ ತಮ್ಮ ಬಾಲ್ಯದ ನೆನಪಿನ ಬುತ್ತಿಯನ್ನು ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಪುನರ್ಮಿಲನ ಕಾರ್ಯಕ್ರಮದಲ್ಲಿ ಹಂಚಿಕೊಂಡು ಸಂಭ್ರಮಿಸಿದರು.
ಪಟ್ಟಣದ ಸರ್ಕಾರಿ ಪಪೂ ಕಾಲೇಜಿನಲ್ಲಿ ೧೯೮೫-೮೮ನೇ ಸಾಲಿನಲ್ಲಿ ಪಿಯುಸಿ ಓದಿದ ಗೆಳೆಯರೆಲ್ಲರೂ ಒಂದೆಡೆ ಸೇರುವ ಮೂಲಕ ನೆನಪಿನಂಗಳದ ಮಾತುಗಳಿಗೆ ಸಾಕ್ಷಿಯಾದರು. ಆ ಸಾಲಿನಲ್ಲಿ ಪಿಯುಸಿ ಓದಿದ್ದ ಡಾ.ಟಿ.ಕೊತ್ಲಮ್ಮ ಅವರೀಗ ಅದೇ ಕಾಲೇಜಿನಲ್ಲಿ ಪ್ರಾಚಾರ್ಯರಾಗಿದ್ದಾರೆ.ಡಾ.ಟಿ.ಕೊತ್ಲಮ್ಮ ಮಾತನಾಡಿ, ಕಳೆದ ೩೫ ವರ್ಷಗಳ ಹಿಂದೆ ನಾವು ಪಿಯುಸಿ ಓದುತ್ತಿದ್ದಾಗ ನಮ್ಮ ಉಪನ್ಯಾಸಕರೆಂದರೆ ಎಲ್ಲರಿಗೂ ಭಯ ಇರುತ್ತಿತ್ತು. ಪ್ರತಿಯೊಬ್ಬ ಶಿಕ್ಷಕರು, ಉಪನ್ಯಾಸಕರಿಂದ ಕಲಿತ ಶಿಕ್ಷಣವೇ ನಮ್ಮ ದಾರಿಗೆ ಬೆಳಕಾಗಿರುವುದು ಎಂದು ಸ್ಮರಿಸಿದರಲ್ಲದೆ, ಗೆಳೆಯರೆಲ್ಲರೂ ಸೇರಿದ್ದು ಸಂತೋಷವಾಗಿದೆ ಎಂದು ತಿಳಿಸಿದರು.
ಹೊಸಪೇಟೆಯಲ್ಲಿ ಕಾಲೇಜಿನ ಪ್ರಾಚಾರ್ಯ ನಾಗರಾಜ ಹವಾಲ್ದಾರ್ ಮಾತನಾಡಿ, ನಾವು ಕಾಲೇಜಿನಲ್ಲಿ ಓದುತ್ತಿರುವಾಗ ಈಗಿರುವಷ್ಟು ಸೌಕರ್ಯಗಳು ಇರಲಿಲ್ಲ. ಆದರೂ, ಉಪನ್ಯಾಸಕರು ಎಲ್ಲ ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕೆಂಬ ಹಂಬಲದೊಂದಿಗೆ ಶಿಕ್ಷಣ ಕಲಿಸಿದ್ದನ್ನು ನಾವ್ಯಾರೂ ಮರೆಯುವಂತಿಲ್ಲ ಎಂದು ನೆನಪು ಮೆಲುಕು ಹಾಕಿದರು.ಸರ್ಕಾರಿ ಪಪೂ ಕಾಲೇಜಿನ ಪ್ರಾಚಾರ್ಯ ಡಾ.ಟಿ.ಕೊತ್ಲಮ್ಮ ಹಳೆಯ ವಿದ್ಯಾರ್ಥಿಗಳಾದ ನಾಗರಾಜ ಹವಾಲ್ದಾರ್, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಉದಯಜನ್ನು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಕರಾದ ಮಲ್ಲಿಕಾರ್ಜುನ, ಸಿ.ವೆಂಕಟೇಶ್, ಪುರುಷೋತ್ತಮ, ಪಂಕಜಾ, ನಿಂಗಮ್ಮ, ಚಂದ್ರಕಲಾ, ಶರಣಪ್ಪ, ಕೊಡದೀರಪ್ಪ, ನಿರ್ಮಲಾ, ಆನಂದ, ಷಣ್ಮುಖನಗೌಡ, ಈಶ್ವರಪ್ಪ, ಪ್ರಹ್ಲಾದ, ತಾಯಕನಹಳ್ಳಿ ನಾಗರಾಜ ಸೇರಿ ಇತರರಿದ್ದರು.