ಒಂದು ಸರ್ಕಾರ ಮಾಡುವ ಕೆಲಸವನ್ನು ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ರಾಜ್ಯಾದ್ಯಂತ ನಡೆಯುತ್ತಿರುವುದು ಹಲವು ಕುಟುಂಬಗಳ ಬದುಕಿಗೆ ಜ್ಯೋತಿಯಾಗಿದೆ. ಕುಡಿತ ಬಿಟ್ಟಿರುವುದನ್ನು ಕಂಡು ಇವರ ಕುಟುಂಬದಲ್ಲಿ ಮೂಡಿದ ಆನಂದ ಸದಾ ಹೀಗೆ ಇರಲಿ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಕುಡಿತ ಬಿಟ್ಟು ನವ ಜೀವನಕ್ಕೆ ಕಾಲಿಟ್ಟ ಸಮೂಹವು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ವ್ಯಸನ ಮುಕ್ತ ಸಮಾಜದ ಸಂಕಲ್ಪ ಸಾರ್ಥಕವಾಗಲು ನೆರವಾಗಿದ್ದಾರೆ ಎಂದು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಟ್ರಸ್ಟ್‌ ಜಿಲ್ಲಾಧ್ಯಕ್ಷ ಆರ್‌ಟಿಒ ಮಲ್ಲಿಕಾರ್ಜುನ ಹೇಳಿದರು.

ಪಟ್ಟಣದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್‌, ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಜ್ಞಾನ ವಿಕಾಸ ಕೇಂದ್ರ ಮತ್ತಿತರ ಸಂಸ್ಥೆ ಸಹಕಾರದಲ್ಲಿ ಏರ್ಪಡಿಸಿದ್ದ 2015ನೇ ಮದ್ಯವರ್ಜನ ಶಿಬಿರದಲ್ಲಿ ಮಾತನಾಡಿದರು.

ಒಂದು ಸರ್ಕಾರ ಮಾಡುವ ಕೆಲಸವನ್ನು ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ರಾಜ್ಯಾದ್ಯಂತ ನಡೆಯುತ್ತಿರುವುದು ಹಲವು ಕುಟುಂಬಗಳ ಬದುಕಿಗೆ ಜ್ಯೋತಿಯಾಗಿದೆ. ಕುಡಿತ ಬಿಟ್ಟಿರುವುದನ್ನು ಕಂಡು ಇವರ ಕುಟುಂಬದಲ್ಲಿ ಮೂಡಿದ ಆನಂದ ಸದಾ ಹೀಗೆ ಇರಲಿ ಎಂದರು.

ಕುಡಿತ ದೇಹ ಸುಡದೆ ಇಡೀ ಕುಟುಂಬ, ಸಮಾಜವನ್ನು ಸುಡಲಿದೆ. ದುಡ್ಡು ಕೊಟ್ಟು ಮಾರ್ಯದೆ, ಆರೋಗ್ಯ ಕಳೆದುಕೊಂಡು ಸರ್ವನಾಶವಾಗಿಸುವ ಈ ಚಟದಿಂದ ಮುಕ್ತರಾಗಿಸಲು ಧರ್ಮಸ್ಥಳ ಯೋಜನೆ ಹಮ್ಮಿಕೊಂಡಿರುವ ಯೋಜನೆ ವಿಶ್ವವೇ ಮೆಚ್ಚುವಂತಿದೆ ಎಂದರು.

ಕಾಪನಹಳ್ಳಿ ಗವಿಮಠ ಪೀಠಾಧ್ಯಕ್ಷ ಸ್ವತಂತ್ರ ಚನ್ನವೀರ ಸ್ವಾಮೀಜಿ ಆಶೀರ್ವಚನ ನೀಡಿದರು. ತಾಲೂಕಿನ ವಿವಿಧ ಗ್ರಾಮಗಳಿಂದ ಶಿಬಿರದಲ್ಲಿ 36 ಮಂದಿ ಮದ್ಯವ್ಯಸನಿಗಳು ಭಾಗವಹಿಸಿ ಕುಡಿತ ಬಿಟ್ಟು ನವಜೀವನ ಸಾಗಿಸುವುದಾಗಿ ಪ್ರತಿಜ್ಞೆ ಮಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕ ಡಾ.ಯೋಗೇಶ್, ಜನ ಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ಕೆ.ಎಸ್. ರಾಜೇಶ್, ಉಪಾಧ್ಯಕ್ಷೆ ನಳಿನಿ, ಕುರುಹಿನಶೆಟ್ಟಿ ಸಂಘದ ಅಧ್ಯಕ್ಷ ಸೂರ್ಯನಾರಾಯಣ್, ಸುನೀತಾ, ಸದಸ್ಯರಾದ ಮೊಟ್ಟೆ ಮಂಜು, ನಾರಾಯಣಸ್ವಾಮಿ, ಶಿವರಾಂ, ಕುಮಾರ್, ರಂಗೇಗೌಡ, ವಿಮಲಾ, ಮಧುಸೂದನ್, ಶಿವರಾಮು, ಮಣಿ, ಮೇಲ್ವಿಚಾರಿಕಿ ಯಶೋಧಾ, ನವಜೀವನ ಸದಸ್ಯರು, ಒಕ್ಕೂಟದ ಸದಸ್ಯರು ಮತ್ತಿತರರಿದ್ದರು.