ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ದಸರಾ ಮಹೋತ್ಸವ ಅಂಗವಾಗಿ ಗುರುವಾರ ನಡೆದ ಮೂರನೇ ದಿನದ ಯುವ ದಸರಾ ಕಾರ್ಯಕ್ರಮದಲ್ಲಿ ಬಾಲಿವುಡ್ ನ ಖ್ಯಾತ ಗಾಯಕ ಜುಬಿನ್ ನೌಟಿಯಾಲ್ ಅವರ ಹಾಡಿನ ಮೋಡಿಗೆ ನೆರೆದಿದ್ದವರೆಲ್ಲರೂ ತಲೆದೂಗಿದರು.ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಅಂಗವಾಗಿ ನಗರದ ಉತ್ತನಹಳ್ಳಿ ರಿಂಗ್ ರಸ್ತೆಯ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಸ್ಥಾನದ ಬಳಿ ಯುವ ದಸರಾ ಉಪ ಸಮಿತಿಯಿಂದ ಆಯೋಜಿಸಿದ್ದ ಮೂರನೇ ದಿನದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಬಾಲಿವುಡ್ ನ ಖ್ಯಾತ ಗಾಯಕ ಜುಬಿನ್ ನೌಟಿಯಾಲ್ ಅವರ ಹೇ ತೋ ದಿಲ್ ಯಹ್ ರುಕ್ ಜಾ ಜರಾ ಎಂಬ ಹಾಡಿಗೆ ಮೈಸೂರಿನ ಯುವ ಸಮೂಹ ಹುಚ್ಚೆದ್ದು ಕುಣಿಯಿತು.
ಗಿಟಾರ್ ಹಿಡಿದು ಹಿಂದಿ ಭಾಷೆಯ ವಿಶೇಷವಾದ ಹಾಡುಗಳಾದ ಮೊಹಬ್ಬತ್ ಕೆ ಮೇರಿ.. ಫಹಲಾ ಸಫರ್ ಮೇ.., ಏಕ್ ಮುಲಾಕಾತ್ ಹು.. ತ ಮೇರೆ ಪಾಸ್ ಹೋ.., ನಾ ಚಯನೆ ಸೇ ಜೀನಾ ದೇದಿ, ನಾ ಚಯನೇ ಸೇ ಮರನಾ ದೇದಿ.., ಜಬ್ ಜಬ್ ತೇರೆ.. ಜಿಸ್ ಮೇ ಕಾ.. ಸೇರಿದಂತೆ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದ ಸಯಾರಾ ಚಿತ್ರದ ಗೀತೆಗೆ ಮೊದಲ ಬಾರಿಗೆ ಯುವ ದಸರಾ ವೇದಿಕೆಯಲ್ಲಿ ತುಜಸೇ ದೂರ್ ಮೇ ಕಿ ವಜಾ ಕೆ ಲಿಯೇ ಹೂ.... ಎಂದು ಹಾಡುವ ಮೂಲಕ ಮನರಂಜಿಸಿದರು.ತೆಲುಗು ಭಾಷಾ ಗಾಯಕ ಶ್ರೀರಾಮ್ ಚಂದ್ರ ಅವರ ಅಲ್ಲಾ ತೂ ಆಯಿರೆ.. ಎಂಬ ಹಾಡಿನ ಮೂಲಕ ಗ್ರ್ಯಾಂಡ್ ಪ್ರವೇಶ ತೆಗೆದುಕೊಳ್ಳುವ ಮೂಲಕ ಸಾಕಷ್ಟು ಹಿಂದಿ ಹಾಡುಗಳಾದ ಯೇ ಜವಾನಿ ಹೇ ದಿವಾನಿ ಚಿತ್ರದ ಸುಬಾನಲ್ಲಾ ಜೋ ಹೋ ರಹಾ ಹೇ... ಜವಾನ್ ಚಿತ್ರದ ಚಲಿಯಾ ತೇರಿ ಓರ್ ಕೇ, ಚಲೆಯಾ ಹೇ ಜೋರ್ ಕೇ.., ಕೇಸರಿಯಾ ತೇರಾ.., ರಬನೆ ಬನಾಯಾ.., ಎಂಬ ಗಾಯನದೊಂದಿಗೆ ನೃತ್ಯದ ಝಳಕ್ ಅನ್ನು ಸಹ ಪ್ರದರ್ಶಿಸಿದರು. ಜೊತೆಗೆ ಕನ್ನಡದ ಮುಂಗಾರು ಮಳೆ ಚಿತ್ರದ ಅನಿಸುತಿದೆ ಯಾಕೋ ಇಂದು.. ನೀನೇನೆ ನನ್ನವಳೆಂದು ಹಾಡುವ ಮೂಲಕ ಕನ್ನಡಿಗರ ಮನಸ್ಸನ್ನು ಕದ್ದರೇ, ಬ್ರಹ್ಮಾಸ್ತ್ರದ ದೇವಾ ದೇವಾ ಹೋ. ದಿ ಬೀಸ್ಟ್ ಚಿತ್ರ ಸೇರಿದಂತೆ ಸಾಕಷ್ಟು ಪ್ರಸಿದ್ಧ ತೆಲುಗು, ಹಿಂದಿ ಚಿತ್ರಗಳ ಹಾಡನ್ನು ಹಾಡುವ ಮೂಲಕ ನೆರೆದಿದ್ದ ಯುವ ಸಮೂಹದ ನಿಂತಲ್ಲೇ ಕುಣಿದು ಕುಪ್ಪಳಿಸುವಂತೆ ಮಾಡಿದರು.
ಇದಕ್ಕೂ ಮುನ್ನ ಗಾಯಕ ಚಿನ್ಮಯ್ ಆತ್ರೇಯ ಅವರಿಂದ ಕರಾಟೆ ಕಿಂಗ್ ಶಂಕರ್ ಅವರ ಒಂದೇ ಒಂದು ಆಸೆಯು ತೋಳಲಿ ಬಳಸಲು.., ತೂ ಹೀ ಮೇರಿ ಶಬಿ ಹೇ ಸುಬಾ ಹೇ.. ತೂ ಹೀ ಮೇರಿ ದುನಿಯಾ.. ಎಂಬ ಬಾಲಿವುಡ್ ಗಾಯನಕ್ಕೆ, ರೂಪು ತೇರಾ ಮಸ್ತಾನ, ಪ್ಯಾರ್ ಮೇರಾ ದಿವಾನ ಎಂದು ರೆಟ್ರೋ ಗೀತೆಗಳನ್ನು ಹಾಡುವ ಮೂಲಕ ಎಲ್ಲರನ್ನು ರಂಜಿಸಿದರು. ಅಲ್ಲದೇ ಡಾ. ರಾಜ್ ಕುಮಾರ್ ಅವರ ಹೊಸ ಬೆಳಕು ಮೂಡುತ್ತಿದೆ... ರವಿಚಂದ್ರನ್ ಅವರ ಯಾರೇ ನೀನು ರೋಜಾ ಹೂವೆ, ಯಾರೇ ನೀನು ಮಲ್ಲಿಗೆ ಹೂವೇ... ಎಂಬಿನ್ನಿತರೆ ಕನ್ನಡದ ಹಾಡಿಗೆ ಧ್ವನಿಗೂಡಿಸಿದರು.ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ಮ ವಿವಿಧ ಡ್ಯಾನ್ಸ್ ಶಾಲೆಗಳಿಂದ ಆಗಮಿಸಿದ್ದ ನೃತ್ಯಗಾರರು ಕನ್ನಡದ ಚಿತ್ರಗೀತೆಗೆ ನೃತ್ಯವನ್ನು ಪ್ರದರ್ಶಿಸಿದರೆ, ಮೈಸೂರಿನ ಅಪ್ಪಟ ರೇಷ್ಮೆ ಸೀರೆಯನ್ನುಟ್ಟ ನಾರಿಯರು ವೇದಿಕೆಯಲ್ಲಿ ಚೆಂದದ ರ್ಯಾಂಪ್ ವಾಕ್ ಮಾಡುವುದರೊಂದಿಗೆ ಹುಡುಗರು ಸಹ ಕುರ್ತಾ ಶಲ್ಯ ಹಾಗೂ ಪಂಚೆ ಧರಿಸಿ, ಮಧು ಮಕ್ಕಳಂತೆ ಜೊತೆಗೂಡಿ ಚೆಂದದ ಹೆಜ್ಜೆಯನ್ನಾಕಿದರು.
ಇದಕ್ಕೂ ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್‌ಅವರಿಂದ ಕರ್ನಾಟಕ ರೇಷ್ಮೆ ಉದ್ಯಮ ನಿಗಮ ಮತ್ತು ರೇಷ್ಮೇ ಸೀರೆ ಕುರಿತು ರಚಿಸಿ, ಪ್ರಕಟಿಸಿರುವ ಸ್ಟ್ಯಾನ್ಲಿ ಸತೀಶ್ ಅವರ ಪುಸ್ತಕವನ್ನು ಬಿಡುಗಡೆಗೊಳಿಸಿದರು.ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಕರ್ನಾಟಕ ರೇಷ್ಮೆ ಉದ್ಯಮದ ನಿಗಮ ನಿಯಮಿತದ ಎಂಡಿ ಝಹೀರಾ ನಾಸೀಂ, ವಿಧಾನ ಪರಿಷತ್ ಸದಸ್ಯರಾದ ಮಂಜೇಗೌಡ, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಹಾಗೂ ಉಪಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಇದ್ದರು.