ಸಾರಾಂಶ
ಮದ್ದೂರು: ಪಾನಮತ್ತ ಐವರು ಯುವಕರ ಗುಂಪು ಕ್ಷುಲ್ಲಕ ಕಾರಣಕ್ಕೆ ಸಾರಿಗೆ ಸಂಸ್ಥೆ ಬಸ್ ಗೆ ಕಲ್ಲುತೂರಿ ಗಾಜುಗಳನ್ನು ಜಖಂಗೊಳಿಸಿದ ಘಟನೆ ಪಟ್ಟಣದ ಶಿವಪುರದ ಕೊಪ್ಪ ಸರ್ಕಲ್ ನಲ್ಲಿ ಗುರುವಾರ ಸಂಜೆ ಜರುಗಿದೆ. ಘಟನೆಯಲ್ಲಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಓರ್ವ ಮಹಿಳೆಗೆ ಸಣ್ಣಪುಟ್ಟ ಗಾಯವಾಗಿದೆ. ಪ್ರಕರಣ ಸಂಬಂಧ ಪೊಲೀಸರು ಚಾಮನಹಳ್ಳಿಯ ಮಹೇಶ, ಸೂರಿ, ಮಧುಕುಮಾರ, ಯಶ್ ಹಾಗೂ ದೀಪು ವಿರುದ್ಧ ಮೊಕದ್ದಮೆ ದಾಖಲು ಮಾಡಿಕೊಂಡಿದ್ದಾರೆ. ಈ ಪೈಕಿ ಮಹೇಶನನ್ನು ವಶಕ್ಕೆ ತೆಗೆದುಕೊಂಡಿದ್ದು. ಉಳಿದವರು ತಲೆ ಮರೆಸಿಕೊಂಡಿದ್ದಾರೆ. ಆರೋಪಿಗಳೆಲ್ಲರೂ ಗುರುವಾರ ಸಂಜೆ ಕೊಪ್ಪ ಸರ್ಕಲ್ ನಲ್ಲಿ ಕಂಠಪೂರ್ತಿ ಕುಡಿದು ದಾಂಧಲೆ ನಡೆಸುತ್ತಿದ್ದರು. ಈ ವೇಳೆ ಬೆಂಗಳೂರಿಗೆ ತೆರಳುತ್ತಿದ್ದ ರಾಮನಗರ ಡಿಪೋಗೆ ಸೇರಿದ ಸಾರಿಗೆ ಸಂಸ್ಥೆ ಬಸ್ಸು ಸರ್ಕಲ್ ನ ನಿಲ್ದಾಣಕ್ಕೆ ಬಂದಾಗ ಪಾನಮತ್ತ ಯುವಕರ ಗುಂಪು ಬಸ್ ಹತ್ತಲು ಮುಂದಾಗಿದ್ದಾರೆ. ಹತ್ತಲು ತಡವಾದ ಕಾರಣ ನಿರ್ವಾಹಕ ಶ್ರೀಹರಿ ಬಸ್ಸನ್ನು ಚಾಲನೆ ಮಾಡುವಂತೆ ಚಾಲಕನಿಗೆ ಸೂಚನೆ ನೀಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಯುವಕರ ಗುಂಪು ನಿರ್ವಾಹಕನೊಂದಿಗೆ ಮಾತಿನ ಚಕಮಕಿಗೆ ಇಳಿದು ಏಕಾಏಕಿ ಬಸ್ಸಿನ ಹಿಂಭಾಗದ ಗಾಜಿಗೆ ಕಲ್ಲು ತೂರಿ ಹಾನಿಗೊಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಎಎಸ್ಐ ವೆಂಕಟೇಶ್ ಹಾಗೂ ಸಿಬ್ಬಂದಿ ಯುವಕರ ಪೈಕಿ ಮಹೇಶನನ್ನು ವಶಕ್ಕೆ ತೆಗೆದುಕೊಂಡು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದ ಪ್ರಕರಣದ ಅನ್ವಯ ಮೊಕದ್ದೊಮೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.