ನಾಡಗೀತೆ ಅರ್ಥೈಸಿಕೊಂಡರೆ ಮಾತ್ರ ಸ್ವಾಸ್ಥ್ಯ ಸಮಾಜ ನಿರ್ಮಾಣ: ಜೆ.ಪಿ. ಹೆಗ್ಡೆ

| Published : Nov 02 2025, 04:00 AM IST

ಸಾರಾಂಶ

ಉಡುಪಿ ಬೋರ್ಡ್ ಹೈಸ್ಕೂಲಿನ ಕಲಾಮಂದಿರದಲ್ಲಿ ಶನಿವಾರ ಸಂಜೆ ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಆಯೋಜನೆಯಲ್ಲಿ ಎರಡು ದಿನ ನಡೆಯುವ ಇರುಳು ಹಗಲಿನ ರಾಜ್ಯೋತ್ಸವ ಸಂಭ್ರಮ ‘ಕನ್ನಡ ಹಬ್ಬ ನಡೆಯಿತು.

ಕನ್ನಡಪ್ರಭ ವಾರ್ತೆ ಕುಂದಾಪುರರಾಷ್ಟ್ರಕವಿ ಕುವೆಂಪು ರಚಿಸಿದ ನಾಡಗೀತೆಗೆ ನೂರು ವರ್ಷ ಸಂದರೂ ಬಹುತೇಕರು ಅದನ್ನು ಅರ್ಥೈಸಿಕೊಂಡಂತಿಲ್ಲ‌. ಸರ್ವ ಜನಾಂಗದ ಶಾಂತಿಯ ತೋಟ ಎಂದು ಸಾರಿದ ನಾಡಗೀತೆಯನ್ನು ಅರ್ಥೈಯಿಸಿಕೊಂಡು ಅದನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ಶಿಕ್ಷಕರಿಂದ ಆದರೆ ಮಾತ್ರ ಸ್ವಾಸ್ಥ್ಯ ಸಮಾಜ ನಿರ್ಮಾಣ ಆಗುತ್ತದೆ ಎಂದು ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು.ನಗರದ ಬೋರ್ಡ್ ಹೈಸ್ಕೂಲಿನ ಕಲಾಮಂದಿರದಲ್ಲಿ ಶನಿವಾರ ಸಂಜೆ ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಆಯೋಜನೆಯಲ್ಲಿ ಎರಡು ದಿನ ನಡೆಯುವ ಇರುಳು ಹಗಲಿನ ರಾಜ್ಯೋತ್ಸವ ಸಂಭ್ರಮ ‘ಕನ್ನಡ ಹಬ್ಬದ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮಕ್ಕಾಗಿ ಧನ ಸಂಗ್ರಹವಾಗಬೇಕೇ ಹೊರತು, ಹಣ ಸಂಗ್ರಹಕ್ಕಾಗಿ ಕಾರ್ಯಕ್ರಮವಾಗಬಾರದು ಎನ್ನುವುದನ್ನು ಕಲಾಕ್ಷೇತ್ರ ಕುಂದಾಪುರ ನಿರೂಪಿಸಿದೆ. ಸಮಾಜಮುಖಿ ಕಾರ್ಯಕ್ರಮಗಳಿಗೆ ಸಮಾಜದ ಬೆಂಬಲ ಇರುತ್ತದೆ. ಕಾರ್ಯಕ್ರಮಗಳ ಉದ್ದೇಶಗಳು ಸ್ಪಷ್ಟವಾದಾಗ, ಒಳ್ಳೆಯ ಕಾರ್ಯಕ್ರಮಗಳಿಗೆ ಸೃಜನಶೀಲರ ಸಹಾಯವೂ ದೊರಕುತ್ತದೆ ಎಂದರು.

ಜಯರತ್ನ ಚಾರಿಟೇಬಲ್ ಟ್ರಸ್ಟ್ ಪ್ರವರ್ತಕ ದಿನೇಶ್ ಹೆಗ್ಡೆ ಮೊಳಹಳ್ಳಿ ಅಧ್ಯಕ್ಷತೆ ವಹಿಸಿ, ಹಳೆಯ ಹಾಡು, ಪಾರಂಪರಿಕ ಕಲೆ, ಸಂಸ್ಕೃತಿ ಹಾಗೂ ಕ್ರೀಡೆಯನ್ನು ಹತ್ತೂರಿಗೆ ತೋರಿಸಿದವರು ಕಲಾಕ್ಷೇತ್ರದವರು. ಕನ್ನಡ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರವೂ ಅಗತ್ಯವಾಗಿ ಬೇಕು ಎಂದರು.ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಯು.ರಾಜೇಶ್ ಕಾರಂತ್ ಹಾಗೂ ಮುಂಬೈ ಉದ್ಯಮಿ ಆದರ್ಶ ಶೆಟ್ಟಿ ಹಾಲಾಡಿ ಮಾತನಾಡಿದರು.

ಕಲಾಕ್ಷೇತ್ರ ಅಧ್ಯಕ್ಷ ಬಿ.ಕಿಶೋರ ಕುಮಾರ ಬಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾಕ್ಷೇತ್ರ ಟ್ರಸ್ಟಿ ರಾಜೇಶ್ ಕಾವೇರಿ ಸ್ವಾಗತಿಸಿದರು. ಬಿ.ಎನ್.ರಾಮಚಂದ್ರ ನಿರೂಪಿಸಿದರು‌.

ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.