ಯುವ ಪೀಳಿಗೆಯಿಂದ ಮಾತ್ರ ಸ್ವಾಸ್ಥ್ಯ ಸಮಾಜ ಸಾಧ್ಯ: ಯೋಜನಾಧಿಕಾರಿ ಸುರೇಶ್ ಅಭಿಮತ

| Published : Mar 11 2024, 01:16 AM IST

ಯುವ ಪೀಳಿಗೆಯಿಂದ ಮಾತ್ರ ಸ್ವಾಸ್ಥ್ಯ ಸಮಾಜ ಸಾಧ್ಯ: ಯೋಜನಾಧಿಕಾರಿ ಸುರೇಶ್ ಅಭಿಮತ
Share this Article
  • FB
  • TW
  • Linkdin
  • Email

ಸಾರಾಂಶ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಉತ್ತಮ ಕಾರ್ಯಕ್ರಮವನ್ನು ಆಯೋಜಿಸಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ. ದೇಶದ ಶಕ್ತಿಯಾಗಿರುವ ಯುವ ಪೀಳಿಗೆಯು ಸಮಾಜವನ್ನು ತಿದ್ದುವ ಕೆಲಸ ಮಾಡಬೇಕೇ ಹೊರತು ಸಮಾಜ ಘಾತಕ ಕೆಲಸ ಮಾಡಬಾರದು.

ಕನ್ನಡಪ್ರಭ ವಾರ್ತೆ ತಿಪಟೂರು

ವಿದ್ಯಾರ್ಥಿಗಳು ತಮ್ಮ ಜೀವನದ ಪ್ರಮುಖ ಘಟ್ಟವಾದ ವಿದ್ಯಾರ್ಥಿ ಜೀವನದಲ್ಲಿ ಮಾದಕ ವಸ್ತುಗಳ ವ್ಯಸನಕ್ಕೆ ತುತ್ತಾಗದಂತೆ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕೆಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗ್ರಾಮಾಂತರ ಯೋಜನಾಧಿಕಾರಿ ಕೆ. ಸುರೇಶ್ ತಿಳಿಸಿದರು.

ತಾಲೂಕಿನ ಕರಡಿ ವಯಲಯದ ಕರಡಾಳು ಸಂತೆ ಮೈದಾನದಲ್ಲಿರುವ ಶ್ರೀ ಮಂಜುನಾಥ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಭವಿಷ್ಯವಾಗಿರುವ ಯುವ ಪೀಳಿಗೆಯಿಂದ ಮಾತ್ರ ಸ್ವಾಸ್ಥ್ಯ ಸಮಾಜವನ್ನು ಕಟ್ಟಲು ಸಾಧ್ಯವಿದ್ದು, ಸ್ವಾಸ್ಥ್ಯ ಸಮಾಜ ನಿರ್ಮಿಸಬೇಕಾದರೆ ದುಶ್ಚಟ, ದುರಾಭ್ಯಾಸಗಳಿಂದ ದೂರವಿರಬೇಕು. ವಿದ್ಯಾರ್ಥಿಗಳು ಕೆಲ ಕೆಟ್ಟವರ ಸಹವಾಸ ದೋಷಗಳಿಂದ, ಸಾಮಾಜಿಕ ಒತ್ತಡಗಳಿಂದ, ಕೌಟುಂಬಿಕ ಸಮಸ್ಯೆಗಳಿಂದ ಹೊರಬರಬಹುದೆಂಬ ತಪ್ಪು ತಿಳುವಳಿಕೆಯಿಂದ ಕುಡಿತ, ಗಾಂಜಗಳಂತಹ ಮಾದಕ ವಸ್ತುಗಳೆಡೆಗೆ ಆಕರ್ಷಿತರಾಗುತ್ತಾರೆ. ಆದರೆ ಒಂದು ಬಾರಿ ಅವುಗಳ ಸೆಳೆತಕ್ಕೆ ಒಳಗಾದ ಮೇಲೆ ಮಾನಸಿಕ ಖಿನ್ನತೆಯಿಂದ ನರಳಬೇಕಾಗುತ್ತದೆ. ಹಾಗಾಗಿ ಅವರನ್ನು ಸಮಾಜದ ಉತ್ತಮ ವ್ಯಕ್ತಿಗಳನ್ನಾಗಿಸಲು ಮಾದಕ ವ್ಯಸನಗಳ ಬಗ್ಗೆ ಅರಿವು ಮೂಡಿಸುವುದರಿಂದ ಸರಿದಾರಿಗೆ ತರಬಹುದು ಎಂದು ತಿಳಿಸಿದರು.

ವಿದ್ಯಾರ್ಥಿಗಳು ಈ ವಿಷಯವಾಗಿ ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಮಾದಕ ವ್ಯಸನಗಳ ಬಗ್ಗೆ ಅರಿವು ಮೂಡಿಸುವುದರಿಂದ ತಂಬಾಕು, ಸಿಗರೇಟ್ ಮುಂತಾದ ವಸ್ತಗಳಿಂದ ದೂರವಿದ್ದು ದೇಶದ ಸತ್ಪ್ರಜೆಯಾಗಿ ಬೆಳೆದು ಮಾದರಿ ವ್ಯಕ್ತಿಯಾಗಿ ಬಾಳಬೇಕು. ಈ ನಿಟ್ಟಿನಲ್ಲಿ ನಮ್ಮ ಗ್ರಾಮಾಭಿವೃದ್ಧಿ ಯೋಜನೆಯು ಪ್ರತಿ ಪ್ರೌಢಶಾಲೆಗಳಲ್ಲಿಯೂ ಕಾರ್ಯಕ್ರಮದ ಮೂಲಕ ಅರಿವು, ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ನಿವೃತ್ತ ಶಿಕ್ಷಕ ದಿಬ್ಬದಹಳ್ಳಿ ಶ್ಯಾಮಸುಂದರ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಉತ್ತಮ ಕಾರ್ಯಕ್ರಮವನ್ನು ಆಯೋಜಿಸಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ. ದೇಶದ ಶಕ್ತಿಯಾಗಿರುವ ಯುವ ಪೀಳಿಗೆಯು ಸಮಾಜವನ್ನು ತಿದ್ದುವ ಕೆಲಸ ಮಾಡಬೇಕೇ ಹೊರತು ಸಮಾಜ ಘಾತಕ ಕೆಲಸ ಮಾಡಬಾರದು. ಆರೋಗ್ಯಕರವಲ್ಲದ ಹವ್ಯಾಸಗಳು ನಮ್ಮ ಭವಿಷ್ಯವನ್ನು ಹಾಳು ಮಾಡುತ್ತವೆ. ತಂಬಾಕು ಸೇವನೆಯಿಂದ ಮಾದಕ ವ್ಯಸನಿಗಳಾಗುವುದಲ್ಲದೆ ಸಮಾಜಕ್ಕೆ, ಕುಟುಂಬಕ್ಕೆ ಕಂಟಕಪ್ರಾಯವಾಗುತ್ತಿದ್ದಾರೆಂದರು.

ಮುಖ್ಯ ಶಿಕ್ಷಕ ಹುಚ್ಚಪ್ಪ ಮಾತನಾಡಿ, ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯ ಹದಗೆಡುವುದಲ್ಲದೆ ತಮ್ಮ ಜೀವಿತಾವಧಿಯ ಆಯಸ್ಸನ್ನು ಕಸಿದುಕೊಳ್ಳುತ್ತದೆ. ಆದ್ದರಿಂದ ದುರಾಭ್ಯಾಸಗಳಿಂದ ದೂರ ಉಳಿದು ಉತ್ತಮ ಜೀವನವನ್ನು ಕಂಡುಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕಿ ಹೇಮಾವತಿ ಸೇರಿ ಸೇವಾ ಪ್ರತಿನಿಧಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.