ಸಾರಾಂಶ
ಕುಷ್ಟಗಿ: ಭಾವೈಕ್ಯತೆಯ ಜಾತ್ರೆ ಎಂದೇ ಖ್ಯಾತಿಯಾದ ತಾಲೂಕಿನ ದೋಟಿಹಾಳ ಗ್ರಾಮದ ಅವಧೂತ ಶುಖಮುನಿ ಸ್ವಾಮಿಗಳ ಜಾತ್ರೆಗೆ ಸಾವಿರಾರು ಭಕ್ತರು ಸಾಲುಗಟ್ಟಿ ಪ್ರಸಾದ ಸ್ವೀಕರಿಸಿದರು.ಅವಧೂತ ಶುಖಮುನಿ ಸ್ವಾಮಿಗಳ ಜಾತ್ರೆಯ ಅಂಗವಾಗಿ ಸುಮಾರು ಎಂಟು ದಿನಗಳ ಕಾಲ ಅನ್ನದಾಸೋಹ ಕಾರ್ಯಕ್ರಮವು ನಡೆಯುತ್ತಿದೆ. ಭಾನುವಾರ ಮಹಾರಥೋತ್ಸವ ನಿಮಿತ್ತವಾಗಿ ಸಹಸ್ರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.ಶುಖಮುನಿಸ್ವಾಮಿ ಮಠದ ಪಕ್ಕದಲ್ಲಿ ಇರುವ ಖಾಲಿ ಜಾಗದಲ್ಲಿ ಮಹಾದಾಸೋಹ ನಡೆಯಿತು. ಪ್ರಸಾದ ಸೇವಿಸುವ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು. ಉದುರು ಸಜ್ಜಕ, ರೊಟ್ಟಿ, ಬುಂದಿ, ತುಪ್ಪ, ಪಲ್ಲೆ, ಅನ್ನ, ಮೊಸರು, ಸಾಂಬಾರು, ಗೋಧಿ ಹುಗ್ಗಿ, ಉಪ್ಪಿನಕಾಯಿ, ಬದನೆಕಾಯಿ ಪಲ್ಲೆ ಸೇರಿದಂತೆ ವಿವಿಧ ಆಹಾರವನ್ನು ಜಾತ್ರೆಗೆ ಆಗಮಿಸಿದ ಸಹಸ್ರಾರು ಭಕ್ತರು ಊಟ ಸವಿದು ಪುನೀತರಾದರು.ಊಟಕ್ಕೆ ಬಂದ ಭಕ್ತರಿಗೆ ದಾಸೋಹದ ಜೊತೆಗೆ ನೆರಳಿನ ವ್ಯವಸ್ಥೆ ಮಾಡಲಾಗಿತ್ತು. ಕೆಲವರು ನಿಂತುಕೊಂಡು ಊಟ ಮಾಡಿದರೆ ಕೆಲವರು ಕುಳಿತುಕೊಂಡು ಆರಾಮವಾಗಿ ಊಟ ಮಾಡಿದರು.ಮಲಖಾಜಪ್ಪ ಕುಷ್ಟಗಿ ಮಠದ ಭಕ್ತ: ದೋಟಿಹಾಳದ ಶುಖಮುನಿ ಸ್ವಾಮಿಗಳ ಜಾತ್ರೆಯಲ್ಲಿ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಜಾತ್ರೆಗೆ ಬಂದು ಶುಖಮುನಿ ಸ್ವಾಮಿಗಳ ಆಶೀರ್ವಾದ ಪಡೆದುಕೊಂಡು ಊಟ ಮಾಡಿಕೊಂಡು ಹೋಗುವದು ದೊಡ್ಡ ಪುಣ್ಯವಾಗಿದೆ.ಶನಿವಾರದ ದಾಸೋಹ: 2010ನೇ ಸಾಲಿನ 10ನೇ ತರಗತಿಯ ಹಳೆಯ ವಿದ್ಯಾರ್ಥಿಗಳು ಸೇರಿಕೊಂಡು ಶನಿವಾರ ಅನ್ನದಾಸೋಹ ಮಾಡಿಸಿದ್ದರು. ಈ ಸಂದರ್ಭದಲ್ಲಿ 6 ಕ್ವಿಂಟಲ್ ಗೋಧಿ ಹುಗ್ಗಿ, 6 ಕ್ವಿಂಟಲ್ ಪಲಾವ್, 250 ಲೀ. ಮೊಸರು, 60 ಕೆಜಿ ಸಂಡಿಗೆ, 400 ಪ್ಯಾಕೇಟ್ ಹಪ್ಪಳ, 20 ಬಾಕ್ಸ್ ಸ್ವೀಟ್, 11 ಕೆಜಿ ತುಪ್ಪ ಖರ್ಚಾಗಿದೆ ಎಂದು ಆಯೋಜಕರು ತಿಳಿಸಿದರು.