ಟಿಬೆಟಿಯನ್ನರಿಂದ ಶಾಂತಿಯುತ ಪ್ರತಿಭಟನಾ ಮೆರವಣಿಗೆ

| Published : Mar 11 2024, 01:16 AM IST

ಸಾರಾಂಶ

ಟಿಬೆಟಿಯನ್ನರ 65ನೇ ರಾಷ್ಟ್ರೀಯ ಬಂಡಾಯ ದಿನದ ಅಂಗವಾಗಿ ಸಿದ್ದಾರ್ಥನಗರದಲ್ಲಿರುವ ಮೈಮುಲ್ ಹಳೆ ಡೇರಿ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಶಾಂತಿಯುತ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದ ಅವರು, ಚೀನಾ ಸರ್ಕಾರದ ಕಠಿಣ ನಿರ್ಧಾರಗಳ ವಿರುದ್ಧ ಘೋಷಣೆ ಕೂಗಿದರು

ಕನ್ನಡಪ್ರಭ ವಾರ್ತೆ ಮೈಸೂರು

ಚೀನಾ ಟಿಬೆಟಿಯನ್ನರಿಗೆ ಕಿರುಕುಳ ನೀಡಿ, ಕೊಲೆ ಮಾಡುವುದನ್ನು ನಿಲ್ಲಿಸಲಿ ಆಗ್ರಹಿಸಿ ಟಿಬೆಟನ್ ಯುವ ಕಾಂಗ್ರೆಸ್ ಹಾಗೂ ಪ್ರಾಂತೀಯ ಟಿಬೆಟನ್ ಮಹಿಳಾ ಸಂಘಟನೆಯವರು ಭಾನುವಾರ ಸಹ ಪ್ರತಿಭಟಿಸಿದರು.

ಟಿಬೆಟಿಯನ್ನರ 65ನೇ ರಾಷ್ಟ್ರೀಯ ಬಂಡಾಯ ದಿನದ ಅಂಗವಾಗಿ ಸಿದ್ದಾರ್ಥನಗರದಲ್ಲಿರುವ ಮೈಮುಲ್ ಹಳೆ ಡೇರಿ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಶಾಂತಿಯುತ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದ ಅವರು, ಚೀನಾ ಸರ್ಕಾರದ ಕಠಿಣ ನಿರ್ಧಾರಗಳ ವಿರುದ್ಧ ಘೋಷಣೆ ಕೂಗಿದರು.

ಚೀನಾದ ಆಡಳಿತದಲ್ಲಿ ತಮ್ಮದೇ ನೆಲದಲ್ಲಿ ಟಿಬೆಟನ್ನರು ಸಹಿಸಲಾರದ ನೋವು ಅನುಭವಿಸುತ್ತಿದ್ದಾರೆ. ಚೀನಿಯರ ದಬ್ಬಾಳಿಕೆ, ಚಿತ್ರಹಿಂಸೆ, ಮಾನಸಿಕ ಕಿರುಕುಳದಿಂದಾಗಿ 12 ಲಕ್ಷ ಟಿಬೆಟಿಯನ್ನರು ಪ್ರಾಣ ತ್ಯಾಗ ಮಾಡಿದ್ದಾರೆ. ಚೀನಾದವರು ಟಿಬೆಟಿಯನ್ ಭಾಷೆ, ಸಂಸ್ಕೃತಿ, ಧರ್ಮ ಹಾಗೂ ಗುರುತನ್ನು ವ್ಯವಸ್ಥಿತವಾಗಿ ನಾಶಪಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಲೈ ಲಾಮಾ ಟಿಬೆಟ್ ಸಮಸ್ಯೆಗೆ ಪರಿಹಾರ ಸೂತ್ರ ಸೂಚಿಸಿದ್ದು, ವಿಶ್ವಸಂಸ್ಥೆ ಮಧ್ಯಪ್ರವೇಶಿಸಿ ಚೀನಾದ ಆಕ್ರಮಣದಿಂದ ಟಿಬೆಟಿಯನ್ನರನ್ನು ರಕ್ಷಿಸಬೇಕು. ಡಿಜೆ ವ್ಯಾಗೋ ಗ್ರಾಮದ ಡ್ರಿಜು ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಲು ಹೊರಟಿರುವ ನಿರ್ಧಾರವನ್ನು ಹಿಂಪಪಡೆಯಬೇಕು. ಅಲ್ಲಿಂದ ಟಿಬೆಟಿಯನ್ನರ ಸ್ಥಳಾಂತರಿಸಬಾರದು. ಟಿಬೆಟ್ ಧರ್ಮಗುರು 11ನೇ ಪಂಚೆನ್ ಲಾಮಾ ಗೆಂಡುನ್ ಚೋಯ್ಕಿ ಹಾಗೂ ತಂಡದವರನ್ನು ಬಿಡುಗಡೆಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.