ಮೌಢ್ಯಗಳ ವಿರುದ್ಧ ಸಾಹಿತ್ಯ ರಚನೆಗೆ ಯುವ ವೈದ್ಯರು ಮುಂದಾಗಲಿ

| Published : Mar 11 2024, 01:16 AM IST

ಮೌಢ್ಯಗಳ ವಿರುದ್ಧ ಸಾಹಿತ್ಯ ರಚನೆಗೆ ಯುವ ವೈದ್ಯರು ಮುಂದಾಗಲಿ
Share this Article
  • FB
  • TW
  • Linkdin
  • Email

ಸಾರಾಂಶ

ಇಂದಿನ ಆಧುನಿಕ ಯುಗದಲ್ಲೂ ಜನರು ವೈದ್ಯರನ್ನು ನಂಬುವುದಕ್ಕಿಂದ ಮಂತ್ರವಾದಿಗಳನ್ನು ಹೆಚ್ಚು ನಂಬುತ್ತಿದ್ದಾರೆ. ಹೀಗಾಗಿ ವೈದ್ಯಕೀಯ ಸಾಹಿತ್ಯದ ಉದ್ದೇಶ ಜನರಲ್ಲಿ ಅರಿವು ಮೂಡಿಸಲು ಯುವ ವೈದ್ಯರು ಮುಂದೆ ಬರಬೇಕು. ಜನರಲ್ಲಿರುವ ಮೌಢ್ಯಗಳ ನಿವಾರಣೆ ಕಾರಣಕ್ಕೆ ಚಂದ್ರಪ್ಪಗೌಡ ವೈದ್ಯಕೀಯ ಸಾಹಿತ್ಯ ಬರೆಯಲು ಮುಂದಾದರು ಎಂದು ಮನೋವೈದ್ಯ ಸಿ.ಆರ್.ಚಂದ್ರಶೇಖರ್ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಇಂದಿನ ಆಧುನಿಕ ಯುಗದಲ್ಲೂ ಜನರು ವೈದ್ಯರನ್ನು ನಂಬುವುದಕ್ಕಿಂದ ಮಂತ್ರವಾದಿಗಳನ್ನು ಹೆಚ್ಚು ನಂಬುತ್ತಿದ್ದಾರೆ. ಹೀಗಾಗಿ ವೈದ್ಯಕೀಯ ಸಾಹಿತ್ಯದ ಉದ್ದೇಶ ಜನರಲ್ಲಿ ಅರಿವು ಮೂಡಿಸಲು ಯುವ ವೈದ್ಯರು ಮುಂದೆ ಬರಬೇಕು ಎಂದು ಮನೋವೈದ್ಯ ಸಿ.ಆರ್.ಚಂದ್ರಶೇಖರ್ ಹೇಳಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿದ ಡಾ. ಎಚ್.ಡಿ. ಚಂದ್ರಪ್ಪ‌ಗೌಡ ಅವರ ಆರೋಗ್ಯಲೋಕ, ವಿಜ್ಞಾನಲೋಕ ಸಂಪುಟಗಳ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜನರಲ್ಲಿರುವ ಮೌಢ್ಯಗಳ ನಿವಾಋಣೆ ಕಾರಣಕ್ಕೆ ಚಂದ್ರಪ್ಪಗೌಡ ವೈದ್ಯಕೀಯ ಸಾಹಿತ್ಯ ಬರೆಯಲು ಮುಂದಾದರು. ವೈದ್ಯಕೀಯ ಸಾಹಿತ್ಯದ ಉದ್ದೇಶ ಜನರಲ್ಲಿ ಅರಿವು ಮೂಡಿಸಬೇಕು. ಈ ಕುರಿತು ಇಂದಿನ ಯುವ ವೈದ್ಯರು ಗಮನಹರಿಸಿ ಸಾಹಿತ್ಯ ರಚಿಸಲು ಮುಂದಾಗಬೇಕು.‌ ಪ್ರಸ್ತುತ ಖಾಸಗಿ ವೈದ್ಯಲೋಕ ಜನರ ಮುಗ್ದತೆಯನ್ನು ಬಂಡವಾಳ ಮಾಡಿಕೊಂಡು ಲಾಭಕ್ಕೆ ಇಳಿದಿವೆ. ಇದು ಈ ನಾಡಿನ ದುರಂತ ಎಂದರು.

ಸ್ವಸ್ಥ ಸಮಾಜಕ್ಕೆ ವೈದ್ಯಕೀಯ ಸಾಹಿತ್ಯ ಅತ್ಯಗತ್ಯ. ಇದನ್ನು ಸಾಂಪ್ರದಾಯಿಕ ಸಾಹಿತ್ಯ ಎಂದು ಯಾರೂ ಒಪ್ಪುವುದಿಲ್ಲ. ವೈದ್ಯಕೀಯ ಸಾಹಿತ್ಯದ ಹೊತ್ತಿಗೆಗಳು ಮನೆಯಲ್ಲಿದ್ದರೆ, ಆರೋಗ್ಯನಿಧಿ ಇದ್ದಂತೆ ಎಂದರು.

ವೈದ್ಯ ಸಾಹಿತಿ ಕೆ.ಆರ್. ಶ್ರೀಧರ್ ಮಾತನಾಡಿ, ವೈದ್ಯಕೀಯ ಸಾಹಿತ್ಯ ಅನಾಥ ಕೂಸಾಗಿದೆ. ಆದ್ದರಿಂದ, ವೈದ್ಯಕೀಯ ಸಾಹಿತ್ಯವನ್ನು ಮತ್ತಷ್ಟು ಗಟ್ಟಿಗೊಳಿಸಬೇಕು. ಕನ್ನಡ ಹೊರತುಪಡಿಸಿ, ಬೇರೆ ಭಾಷೆಗಳಲ್ಲಿ ವೈದ್ಯಕೀಯ ಸಾಹಿತ್ಯ ಹೆಚ್ಚಿದೆ. ಆದರೆ, ಪುರಾತನ ಇತಿಹಾಸವುಳ್ಳ ಕನ್ನಡ ಭಾಷೆಯಲ್ಲಿ ಮಾತ್ರ ವೈದ್ಯಕೀಯ ಸಾಹಿತ್ಯ ಕಣ್ಮರೆ ಆಗಿದೆ. ಇದಕ್ಕೆ ವೈದ್ಯರಲ್ಲಿ ಕನ್ನಡ ಭಾಷೆಯ ಮೇಲಿನ ಹಿಡಿತ ಇಲ್ಲದಿರುವುದೇ ಕಾರಣ ಎಂದು ಬೇಸರ ವ್ಯಕ್ತಪಡಿಸಿದರು.

ಹಿಂದೆಲ್ಲಾ ವೈದ್ಯಕೀಯ ಸಾಹಿತ್ಯ ಬರೆಯುವ ಲೇಖಕರಿಗೆ ಮನ್ನಣೆ ದೊರೆಯುತ್ತಿರಲಿಲ್ಲ. ಪ್ರಸ್ತುತ ಕಾಲ ಬದಲಾಗಿದೆ. ದಿನ ಪತ್ರಿಕೆಗಳು ಕೂಡ ಪ್ರತಿ ವಾರ ಆರೋಗ್ಯ ಮಾಹಿತಿಗೆ ಒಂದು ಪುಟ ಮೀಸಲಿರಿಸಿವೆ. ಇಲ್ಲಿ ಗುಣಮಟ್ಟದ ವೈದ್ಯರು ಲಭ್ಯವಿದ್ದಾರೆ. ಆದರೆ, ಬರವಣಿಗೆ ಎಂದಾಕ್ಷಣ ವೈದ್ಯರು ಹಿಂದೆ ಸರಿಯುತ್ತಿದ್ದಾರೆ. ವೈದ್ಯರಲ್ಲಿ ಈ ಮನಃಸ್ಥಿತಿ ಬದಲಾಗಬೇಕು ಎಂದರು.

ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ್ ಮಾತನಾಡಿ, ವೈದ್ಯಕೀಯ ಸಾಹಿತ್ಯಕ್ಕೆ ಚಂದ್ರಪ್ಪಗೌಡರು ಅನರ್ಘ್ಯ ರತ್ನದಂತಹ ಕೃತಿಗಳನ್ನು ನೀಡಿದ್ದಾರೆ. ಇಲ್ಲಿ ಲಕ್ಷಾಂತರ ಜನ ವೈದ್ಯಕೀಯ ವೃತ್ತಿ ಆರಿಸಿಕೊಂಡಿದ್ದಾರೆ. ಆದರೆ, ವೈದ್ಯಕೀಯ ಸಾಹಿತ್ಯ ರಚನೆಯಲ್ಲಿ ಮಾತ್ರ ಬೆರಳೆಣಿಯಷ್ಟು ಜನರು ತೊಡಗಿಸಿಕೊಂಡಿದ್ದಾರೆ. ವೈದ್ಯಕೀಯ ಸಾಹಿತ್ಯ ಕೃಷಿಗೆ ಹೆಚ್ಚು ಒತ್ತು ನೀಡಬೇಕು ಎಂದರು.

ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಲಪತಿ ಡಿ.ವಿ. ಪರಮಶಿವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಅರಿವಳಿಕೆ ವೈದ್ಯಶಾಸ್ತ್ರ ಪ್ರಾಧ್ಯಾಪಕ ಡಾ.ಗುರುದತ್, ನವಕರ್ನಾಟಕ ಪಬ್ಲಿಕೇಷನ್ ಕಾರ್ಯನಿರ್ವಾಹಕ ನಿರ್ದೇಶಕ ರಮೇಶ್ ಉಡುಪ, ಹಂಪಿ ವಿಶ್ವವಿದ್ಯಾಲಯ ಪ್ರಸಾರಂಗ ನಿರ್ದೇಶಕ ಡಾ.ಮಾಧವ ಪೆರಾಜೆ, ಡಾ.ಚಂದನಾ, ಗೌತಮಿ, ಆಶಾ ಶೇಷಾದ್ರಿ ಸೇರಿ ಡಾ.ಚಂದ್ರಪ್ಪಗೌಡರ ಕುಟುಂಬ ವರ್ಗದವರು ಇದ್ದರು.

- - - -10ಎಸ್‌ಎಂಜಿಕೆಪಿ08:

ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿದ ಡಾ. ಎಚ್.ಡಿ. ಚಂದ್ರಪ್ಪ‌ಗೌಡರ ಆರೋಗ್ಯ ಲೋಕ, ವಿಜ್ಞಾನ ಲೋಕ ಸಂಪುಟಗಳ ಬಿಡುಗಡೆಗೊಳಿಸಲಾಯಿತು.