ಸಾರಾಂಶ
ಕೃಷಿ ಇಲಾಖೆ ಅಧಿಕಾರಿಗಳ ಎಡವಟ್ಟಿನಿಂದ ಸರ್ಕಾರದ ಯೋಜನೆ ಪಡೆಯುತ್ತಿದ್ದ ಫಲಾನುಭವಿ, ಜೀವಂತ ಇದ್ದರೂ ಮೃತರ ಪಟ್ಟಿಗೆ ಸೇರಿಸಿದ ಪರಿಣಾಮ ಫಲಾನುಭವಿಗೆ ಸರ್ಕಾರದ ಯೋಜನೆ ಸ್ಥಗಿತಗೊಂಡು ರೈತ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಕನ್ನಡಪ್ರಭ ವಾರ್ತೆ ಸಂಕೇಶ್ವರ
ಕೃಷಿ ಇಲಾಖೆ ಅಧಿಕಾರಿಗಳ ಎಡವಟ್ಟಿನಿಂದ ಸರ್ಕಾರದ ಯೋಜನೆ ಪಡೆಯುತ್ತಿದ್ದ ಫಲಾನುಭವಿ, ಜೀವಂತ ಇದ್ದರೂ ಮೃತರ ಪಟ್ಟಿಗೆ ಸೇರಿಸಿದ ಪರಿಣಾಮ ಫಲಾನುಭವಿಗೆ ಸರ್ಕಾರದ ಯೋಜನೆ ಸ್ಥಗಿತಗೊಂಡು ರೈತ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ಹುಕ್ಕೇರಿ ತಾಲೂಕಿನ ಗೋಟುರ ಗ್ರಾಮದ ನಿವಾಸಿ ರೈತ ಬಸಗೌಡ ಬಾಳಗೌಡ ಪಾಟೀಲ ಎಂಬ ರೈತನ ಹೆಸರನ್ನು ಅಧಿಕಾರಿಗಳು ಮೃತರ ಪಟ್ಟಿಗೆ ಸೇರಿಸಿದ್ದರಿಂದ ಆ ರೈತನಿಗೆ ಕೇಂದ್ರ ಸರ್ಕಾರದ ಕೃಷಿ ಸಮ್ಮಾನ ನಾಲ್ಕು ತಿಂಗಳಿನಿಂದ ಸ್ಥಗಿತಗೊಂಡಿದೆ. ಹೀಗಾಗಿ ರೈತ ಅಧಿಕಾರಿಗಳ ಎಡವಟ್ಟಿಗೆ ಹಿಡಿಶಾಪ ಹಾಕುತ್ತಿದ್ದಾನೆ.
ಯೊಜನೆಯಡಿ ನೋಂದಣಿ ಸಂಖ್ಯೆ: ಏಂ230458232 ಹೊಂದಿದ್ದು, ಬಸಗೌಡ ಪಾಟೀಲ ಈ ಮೊದಲು ಹಲವು ಕಂತುಗಳ ಹಣವನ್ನು ಪಡೆದಿದ್ದಾನೆ. ಆದರೆ ಅಧಿಕಾರಿಗಳ ಎಡವಟ್ಟಿನಿಂದ ಕಳೆದ ನಾಲ್ಕು ತಿಂಗಳಿನಿಂದ ಹಣ ಸ್ಥಗಿತಗೊಂಡಿದೆ. ಹಣ ಜಮಾ ಆಗದೇ ಇದ್ದಾಗ ಅನುಮಾನಗೊಂಡ ಬಸಗೌಡ ಪಾಟೀಲ ಕಳೆದ ಜನವರಿಯಲ್ಲಿ ಹುಕ್ಕೇರಿ ಕೃಷಿ ಇಲಾಖೆ ಅಧಿಕಾರಿಗಳನ್ನು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ನೀವು ಮರಣ ಹೊಂದಿದ್ದಿರಿ ಎಂದು ನಿಮ್ಮ ಗ್ರಾಮ ಆಡಳಿತ ಅಧಿಕಾರಿ ವರದಿ ನೀಡಿದ್ದಾರೆ. ಅದಕ್ಕೆ ನಿಮ್ಮ ಹಣ ಸ್ಥಗಿತಗೊಂಡಿದೆ ಎಂದು ಹೇಳಿದ್ದಾರೆ. ಇದನ್ನು ಕೇಳಿದ ಬಸಗೌಡ ಪಾಟೀಲ ಶಾಕ್ ಆಗಿದ್ದಾನೆ.ಪ್ರಕರಣ ಕುರಿತು ದೂರು:
ಇನ್ನು ಪ್ರಕರಣ ಕುರಿತು ಬಸಗೌಡ ಪಾಟೀಲ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಗ್ರಾಮ ಲೆಕ್ಕಾಧಿಕಾರಿ ಹಾಗೂ ಸಹಾಯಕರ ಮೇಲೆ ದೂರು ನೀಡಿದ್ದಾರೆ.ಅಧಿಕಾರಿಗಳ ಎಡವಟ್ಟು:
ಇನ್ನು ಕುರಿತು ಸಂಕೇಶ್ವರ ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದು, ಕೃಷಿ ಇಲಾಖೆಯ ಸಿಬ್ಬಂದಿಯ ತಪ್ಪಿನಿಂದಾಗಿಯೇ ಬಸಗೌಡ ಪಾಟೀಲ ಅವರ ಯೋಜನೆ ಸ್ಥಗಿತಗೊಂಡಿದೆ. ಹುಕ್ಕೇರಿ ತಾಲೂಕಿನಲ್ಲಿ ಒಂದೇ ಹೆಸರಿನ ಇಬ್ಬರು ಫಲಾನುಭವಿಗಳಿದ್ದು, ಗಣಕಯಂತ್ರದಲ್ಲಿ ತಪ್ಪಾಗಿ ಮಾಹಿತಿ ನಮೂದಿಸಿರುವ ಪರಿಣಾಮ ಗೋಟುರ ಗ್ರಾಮದ ರೈತ ಬಸಗೌಡ ಪಾಟೀಲ ಎಂಬ ರೈತನ ಯೋಜನೆ ಸ್ಥಗಿತಗೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.---
ಕೋಟ್ನನ್ನ ಕೃಷಿ ಸಮ್ಮಾನ್ ಯೋಜನೆ ಹಣ ಸ್ಥಗಿತಗೊಂಡಿದ್ದು, ಇದರ ಬಗ್ಗೆ ವಿಚಾರಿಸಿದಾಗ ನಾನು ಮರಣ ಹೊಂದಿದ್ದೇನೆ ಎಂದು ಹೇಳಲಾಗಿದೆ. ಈ ಕುರಿತು ನಾನು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದ್ದೇನೆ. ತಪ್ಪಿತಸ್ಥರ ಮೇಲೆ ಮೇಲಧಿಕಾರಿಗಳು ಕ್ರಮ ಕೈಗೊಳ್ಳಲಿ ಹಾಗೂ ನನ್ನ ಹಣ ಆದಷ್ಟು ಬೇಗ ಮತ್ತೆ ಆರಂಭವಾಗಬೇಕು.
-ಬಸಗೌಡ ಪಾಟೀಲ, ರೈತ ಗೋಟುರ.---
ಇಕೆವೈಸಿ ಸರ್ವೆ ವೇಳೆಯಲ್ಲಿ ನಮ್ಮ ಇಲಾಖೆ ಸಿಬ್ಬಂದಿಗಳ ಎಡವಟ್ಟಿನಿಂದ ಗೋಟುರು ಗ್ರಾಮದ ರೈತನ ಹೆಸರು ಮರಣ ಹೊಂದಿದವರ ಪಟ್ಟಿಯಲ್ಲಿ ಬಂದಿದೆ. ಈ ಕುರಿತು ನಮ್ಮ ಗಮನಕ್ಕೆ ಬಂದಿದೆ. ಶೀಘ್ರದಲ್ಲೇ ಸಮಸ್ಯೆ ಸರಿಪಡಿಸಲಾಗುವುದು.-ರಾಘವೇಂದ್ರ ತಳವಾರ, ಕೃಷಿ ಅಧಿಕಾರಿ, ಸಂಕೇಶ್ವರ