ಸಾರಾಂಶ
ಕನ್ನಡ ಪ್ರಭ ವಾರ್ತೆ ಹನೂರು ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಪ್ರಯುಕ್ತ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಅಮಾವಾಸ್ಯೆ ಪೂಜೆಗೆ ರಾಜ್ಯದ ನಾನಾ ಭಾಗಗಳಿಂದ ಭಕ್ತರ ದಂಡು ಹರಿದು ಬಂತು. ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜಾ ಕಾರ್ಯಕ್ರಮಗಳು ಜರುಗಿತು. ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ನಡೆಯುತ್ತಿರುವ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಅಂಗವಾಗಿ ಸಾಲೂರು ಬೃಹನ್ ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿ ಸಾನ್ನಿಧ್ಯದಲ್ಲಿ ನಡೆಯುತ್ತಿರುವ ಪೂಜಾ ಕಾರ್ಯಕ್ರಮಗಳು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಅಮಾವಾಸ್ಯೆ ಪೂಜೆ ಮಾದೇಶ್ವರನಿಗೆ ಬುಡಕಟ್ಟು ಸಮುದಾಯ ಬೇಡಗಂಪಣದ ಪದ್ಧತಿಯಂತೆ ಹಿರಿಯ ಅರ್ಚಕ ಕೆ ವಿ ಮಾದೇಶ್ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ರಾತ್ರಿ 12:30 ರಿಂದ 1:30ರ ವರೆಗೆ ಮಲೆ ಮಾದೇಶ್ವರನಿಗೆ ಬುಡಕಟ್ಟು ಸಂಪ್ರದಾಯ ಪದ್ಧತಿಯಂತೆ ಕಾಡಲ್ಲಿ ಸಿಗುವ ಹೂಗಳನ್ನು ಶೇಖರಿಸಿ ಮಲೆ ಮಾದೇಶ್ವರನಿಗೆ ಅರ್ಪಿಸಿ ಪೂಜೆ ಸಲ್ಲಿಸಿದರು.ಕಾಡುಮರದ ದೂಫ ಅಭಿಷೇಕ ಭಸ್ಮಾಭಿಷೇಕ ಮತ್ತು ತುಂಬೆ ಹೂವಿನ ಅರ್ಚನೆ ಉತ್ಸವಾದಿಗಳು ಹಾಗೂ ಮಲೆ ಮಾದೇಶ್ವರನಿಗೆ ಪ್ರಿಯವಾದ ಪೊಂಗಲ್ ಮೆಣಸಿನ ಸಾಂಬಾರ್ ಬೆಲ್ಲದ ಅನ್ನ ಹಾಗೂ ಎಳ್ಳು ಉಂಡೆ ಪಂಚಾಮೃತ ಅಭಿಷೇಕ ಮತ್ತು ಎಳ್ಳಿನಲ್ಲಿ ತೆಗೆದ ಎಣ್ಣೆಯಿಂದ ಮಾಡಿದ್ದ ಒಬ್ಬಟ್ಟು ನೈವೇದ್ಯವನ್ನುಮಾದಪ್ಪನಿಗೆ ಅರ್ಪಿಸಿದರು. ನಂತರ ಬೆಳಗಿನ ಜಾವ ವೈಭವ ವಾಹನ ರುದ್ರಾಕ್ಷಿ, ವಾಹನ ಉತ್ಸವ ಬ್ರಹ್ಮರಥೋತ್ಸವ ಜೊತೆಗೆ ಶಿವನ ಕೊಳಗ ಮೂರ್ತಿ ಮೆರವಣಿಗೆ ಪೂಜಾ ಕಾರ್ಯಕ್ರಮಗಳು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅಮಾವಾಸ್ಯೆ ಪೂಜೆ, ಮಂಗಳಾರತಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಭ್ರಮ ಸಡಗರದಿಂದ ಜರುಗಿತು.ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ನಡೆಯುತ್ತಿರುವ ಅಮಾವಾಸ್ಯೆ ಪೂಜೆಗೆ ರಾಜ್ಯದ ನಾನಾ ಭಾಗಗಳಿಂದ, ತಮಿಳುನಾಡಿನಿಂದಲೂ ಅಪಾರ ಸಂಖ್ಯೆಯಲ್ಲಿ ಮಾದಪ್ಪನ ದರ್ಶನ ಪಡೆಯಲು ಸಾರಥಿ ಸಾಲಿನಲ್ಲಿ ನಿಂತು ಅಮಾವಾಸ್ಯೆ ಪೂಜೆ ಸಲ್ಲಿಸಿ ರಾಜಗೋಪುರ ಬಳಿ ಹರಕೆ ಹೊತ್ತು ಭಕ್ತರಿಂದ ಧೂಪ ಹಾಕಿ ಕರ್ಪೂರ ಹಚ್ಚಿ ಉಘೇ ಉಘೇ ಎಂದು ಮಾದಪ್ಪನ ಜೈಕಾರಗಳನ್ನು ಕೂಗುತ್ತಾ ಮಾದಪ್ಪನ ದರುಶನ ಪಡೆದು ಪುನೀತರಾದರು. ಆಲಂಬಡಿ ಬಸವನಿಗೆ ಪೂಜೆ:ಮಾದೇಶ್ವರ ಬೆಟ್ಟಕ್ಕೆ ಬರುವ ಭಕ್ತಾದಿಗಳು ಮಾದೇಶ್ವರನ ದರ್ಶನ ಪಡೆಯುವ ಮುನ್ನ ದೇವಾಲಯದ ಮೇಲಂತಸ್ತಿನಲ್ಲಿ ಇರುವ ಆಲಂಬಾಡಿ ಬಸವನಿಗೆ ತಾವು ತಂದಿರುವ ದವಸ ಧಾನ್ಯಗಳನ್ನು ಹಾಗೂ ಎಣ್ಣೆ ಹಾಗೂ ಹಾಲಾಭಿಷೇಕ ಮಾಡುವ ಮೂಲಕ ಪೂಜೆ ಸಲ್ಲಿಸಿ ಆಲಂಬಾಡಿ ಬಸವನಿಗೆ ಭಕ್ತಾದಿಗಳು ಹರಕೆ ತೀರಿಸಿದರು. ಮಹಾಶಿವರಾತ್ರಿ ಅಮಾವಾಸ್ಯೆ ಪೂಜೆಗೆ ಭಕ್ತಾದಿಗಳು ಸಾಗರೋಪಾದಿಯಲ್ಲಿ ಆಗಮಿಸಿ ಮಾದಪ್ಪನ ದರ್ಶನ ಪಡೆದು ಇಷ್ಟಾರ್ಥ ಸಿದ್ದಿಸುವಂತೆ ಮಾದಪ್ಪನಲ್ಲಿ ನಿವೇದನೆ ಮಾಡಿಕೊಂಡು ದೇವಾಲಯದ ಸುತ್ತಲೂ ಹಾಗೂ ರಾಜಗೋಪುರ ದಾಸೋಹ ಇನ್ನಿತರ ಕಡೆ ಭಕ್ತ ಸಾಗರವೇ ಹರಿದು ಬಂದಿತು.
ಮಹಾ ರಥೋತ್ಸವ ಸಿದ್ಧತೆ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಪ್ರಯುಕ್ತ ಐದನೇ ದಿನ ಸೋಮವಾರ ಬೆಳಿಗ್ಗೆ 9.40 ರಿಂದ 10.10 ರವರೆಗೆ ನಡೆಯುವ ಮಹಾರಥೋತ್ಸವಕ್ಕೆ ರಾತ್ರಿ ಅಭಿಷೇಕ ಪೂಜೆ ನಂತರ ಕೊಂಡೋತ್ಸವಕೆ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸಕಲ ಸಿದ್ಧತೆಯನ್ನು ಕ್ರಮ ಕೈಗೊಂಡಿದೆ.ಮಹದೇಶ್ವರ ಬೆಟ್ಟದಲ್ಲಿ ನಡೆದ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಅಮಾವಾಸ್ಯೆ ಪೂಜೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು. ನೆರದಿದ್ದ ಭಕ್ತರಿಗೆ ಸಕಲ ಸೌಕರ್ಯಗಳೊಂದಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಕಳೆದ ನಾಲ್ಕು ದಿನಗಳಿಂದ ಲಕ್ಷಾಂತರ ಭಕ್ತರು ಶ್ರೀ ಕ್ಷೇತ್ರಕ್ಕೆ ಬಂದು ಮಾದಪ್ಪನ ದರ್ಶನ ಪಡೆದು ಪುನೀತರಾಗಿದ್ದಾರೆ.- ಎ ಈ ರಘು, ಕಾರ್ಯದರ್ಶಿಗಳು, ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮಲೆ ಮಹದೇಶ್ವರ ಬೆಟ್ಟ