ಅಧ್ಯಾತ್ಮ ಅರಿವಿನಿಂದ ಆರೋಗ್ಯ ಸಮಾಜ: ರಂಭಾಪುರಿ ಶ್ರೀ

| Published : Nov 09 2025, 02:15 AM IST

ಸಾರಾಂಶ

ಭಾರತೀಯ ಅಧ್ಯಾತ್ಮ ಸಂಪತ್ತು ಅದ್ಭುತ. ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಅಧ್ಯಾತ್ಮದ ಅರಿವು ಸಾಧನೆ ಮುಖ್ಯ. ವೀರಶೈವ ಧರ್ಮದ ತತ್ವತ್ರಯಗಳ ಪರಿಪಾಲನೆಯಿಂದ ಸುಖ, ಶಾಂತಿ ಪ್ರಾಪ್ತವಾಗುವುದೆಂದು ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಶ್ರೀ ನುಡಿದಿದ್ದಾರೆ.

- ಲಿಂ. ಉಜ್ಜಯಿನಿ ಸಿದ್ಧಲಿಂಗ ಶ್ರೀ ತಪಸ್ಸಿನ ಶತಮಾನೋತ್ಸವ ಸಮಾರಂಭ

- - -

ಕನ್ನಡಪ್ರಭ ವಾರ್ತೆ ಹರಿಹರ ಭಾರತೀಯ ಅಧ್ಯಾತ್ಮ ಸಂಪತ್ತು ಅದ್ಭುತ. ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಅಧ್ಯಾತ್ಮದ ಅರಿವು ಸಾಧನೆ ಮುಖ್ಯ. ವೀರಶೈವ ಧರ್ಮದ ತತ್ವತ್ರಯಗಳ ಪರಿಪಾಲನೆಯಿಂದ ಸುಖ, ಶಾಂತಿ ಪ್ರಾಪ್ತವಾಗುವುದೆಂದು ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಶ್ರೀ ನುಡಿದರು.

ನಗರದ ಸಿದ್ಧೇಶ್ವರ ಪ್ಯಾಲೇಸ್‌ನಲ್ಲಿ ಶ್ರೀ ಮಹಾತಪಸ್ವಿ ಫೌಂಡೇಶನ್ ಶನಿವಾರ ಆಯೋಜಿಸಿದ್ದ ಮಹಾತಪಸ್ವಿ ಲಿಂ. ಉಜ್ಜಯಿನಿ ಸಿದ್ಧಲಿಂಗ ಶ್ರೀ ಅವರು ಲೋಕಕಲ್ಯಾಣಾರ್ಥ ತಪಸ್ಸಸ್ಸು ಆಚರಿಸಿದ ಶತಮಾನೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಪರಿಪಕ್ವ ಸಮಾಜ ನಿರ್ಮಾಣ ಕಾರ್ಯವೇ ನಿಜವಾದ ಧರ್ಮವೆಂದರಿತು, ಬದುಕಿನ ಹಿರಿಮೆ ಮತ್ತು ರಹಸ್ಯ ಬೋಧಿಸಿ, ಸನ್ಮಾರ್ಗಕ್ಕೆ ಕರೆತಂದ ಯುಗಪುರುಷ ಲಿಂ. ಉಜ್ಜಯಿನಿ ಸಿದ್ಧಲಿಂಗ ಶ್ರೀ ಎಂದರು.

ಅಂತರಂಗ, ಬಹಿರಂಗ ಶುದ್ಧಿಯಿಂದ ಬದುಕಿಗೆ ಶ್ರೇಯಸ್ಸು ದೊರಕುವುದೆಂದು ನಂಬಿ, ಶಿವಾಗಮಗಳ ಧರ್ಮ ಸಾಹಿತ್ಯವನ್ನು ಜನರ ಮನೆ ಮನಗಳಿಗೆ ತಲುಪಿಸಲು ಗಟ್ಟಿ ಹೆಜ್ಜೆಯನ್ನಿಟ್ಟರು. ಜೀವನದ ಜಂಜಡಗಳಲ್ಲಿ ಸಿಲುಕಿರುವ ಮನುಷ್ಯನಿಗೆ ಆದರ್ಶ ಸಂಸ್ಕಾರ ಮತ್ತು ಸದ್ವಿಚಾರ ಬೋಧಿಸಿ, ಅವರಲ್ಲಿ ಸ್ಫೂರ್ತಿ ಮತ್ತು ಚೈತನ್ಯ ಶಕ್ತಿ ಹೆಚ್ಚಿಸಿದ ಪರಮ ವಿರಾಗಿ ತಪಸ್ವಿಗಳಾಗಿದ್ದರು ಎಂದರು.

ಮನುಷ್ಯನನ್ನು ಸಂಸಾರ ಸಾಗರದಿಂದ ಪಾರು ಮಾಡಿ, ಸುಖ ಸಾಗರದತ್ತ ಕರೆದುಕೊಂಡು ಹೋಗುವ ಗುಣಗಳು ದೈವೀಗುಣಗಳು. ದುಃಖದ ಕಡಲಿನಲ್ಲಿ ಮುಳುಗಿಸುವುದು ಅಸುರೀ ಗುಣಗಳಾಗಿವೆ. ದೈವೀ ಗುಣಗಳ ಸಂವರ್ಧನೆಗಾಗಿ ನಿತ್ಯ ಶ್ರಮಿಸಿ ಜಗದ ಜನರಿಗೆ ಶಾಂತಿ ಸಾಮರಸ್ಯ ಕ್ರಿಯಾಶೀಲ ವ್ಯಕ್ತಿತ್ವ ರೂಪಿಸಿದ ಉಜ್ಜಯಿನಿ ಶ್ರೀ ಅವರ ತಪಸ್ಸು ಸಾಧನೆಯ ಶತಮಾನೋತ್ಸವ ಸಮಾರಂಭ ಸಂಯೋಜಿಸಿದ ಶ್ರೇಯಸ್ಸು ಅವಧೂತ ಕವಿ ಗುರುರಾಜ ಗುರೂಜಿಗೆ ಸಲ್ಲುತ್ತದೆಂದು ಸಂತೋಷ ವ್ಯಕ್ತಪಡಿಸಿದರು.

ಆಶಯ ನುಡಿಗಳನ್ನಾಡಿದ ಅವಧೂತ ಕವಿ ಗುರುರಾಜ ಗುರೂಜಿ ಮಾತನಾಡಿ, ಭಾರತೀಯ ಅಧ್ಯಾತ್ಮ ಸಂಪತ್ತನ್ನು ಹೆಚ್ಚಿಸಿದ ಕೀರ್ತಿ ಲಿಂ. ಶ್ರೀ ಉಜ್ಜಯಿನಿ ಶ್ರೀ ಅವರಿಗೆ ಸಲ್ಲುತ್ತದೆ. ಅಂಗ ಅವಗುಣಗಳನ್ನು ದೂರ ಮಾಡಿ ಲಿಂಗ ಗುಣ ಕರುಣಿಸಿದ ಕಾರುಣ್ಯ ಜ್ಯೋತಿ ಅವರು. ಉದಾತ್ತವಾದ ಜೀವನ ಮೌಲ್ಯಗಳನ್ನು ಪರಿಪಾಲಿಸಿ ಜನ ಸಮುದಾಯದ ಶ್ರೇಯಸ್ಸಿಗೆ ನಿರಂತರ ಕೃಷಿಗೈದವರು ಎಂದರು.

ಅವರಗೊಳ್ಳ ಹಿರೇಮಠದ ಓಂಕಾರ ಶಿವಾಚಾರ್ಯರು, ಕಣ್ವಕುಪ್ಪಿ ಗವಿಮಠದ ಡಾ.ನಾಲ್ವಡಿ ಶಾಂತಲಿಂಗ ಶಿವಾಚಾರ್ಯರು, ಹಂಪಸಾಗರ ನವಲಿ ಹಿರೇಮಠದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯರು, ಪುಣ್ಯಕೋಟಿ ಮಠದ ಜಗದೀಶ್ವರ ಸ್ವಾಮಿಗಳು ಪಾಲ್ಗೊಂಡು ನುಡಿನಮನ ಸಲ್ಲಿಸಿದರು.

ಪ್ರೊ. ಎಸ್.ಎಂ. ಗಂಗಾಧರಯ್ಯ ಮಹಾತಪಸ್ವಿ ಫೌಂಡೇಶನ್ ಸಾಧನೆಯ ಹತ್ತು ವರ್ಷದ ಅಭಿಯಾನದ ಸಮಗ್ರ ನೋಟ ಗ್ರಂಥವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ದಾವಣಗೆರೆ ಅಶ್ವಿನಿ ಆಯುರ್ವೇದ ವಿಜ್ಞಾನ ನಿರ್ದೇಶಕ ಡಾ. ಯು.ಎಂ. ಜ್ಞಾನೇಶ್ವರ ಅವರಿಗೆ “ಆಯುರ್ ತಪೋ ಜ್ಞಾನರತ್ನ” ಪ್ರಶಸ್ತಿ ಪ್ರದಾನ ಮಾಡಲಾಯಿತು.

ಅಧ್ಯಕ್ಷತೆಯನ್ನು ಮಹಾತಪಸ್ವಿ ಫೌಂಡೇಶನ್ ಉಪಾಧ್ಯಕ್ಷ ಪ್ರೊ. ಸಿ.ವಿ.ಪಾಟೀಲ್ ವಹಿಸಿದ್ದರು. ಡಾ. ಹಾ.ಮಾ. ನಾಗಾರ್ಜುನ ಪ್ರಾಸ್ತಾವಿಕ ನುಡಿ ಸಲ್ಲಿಸಿದರು. ಐಶ್ವರ್ಯ ಸ್ವಾಗತಿಸಿ, ಪ್ರೊ. ಎ.ಎಂ. ರಾಜಶೇಖರಯ್ಯ, ಪಿ.ಬಿ.ಕೊಟ್ರೇಶಪ್ಪ ನಿರೂಪಿಸಿದರು.

- - -

(ಕೋಟ್‌) ಮಾನವತೆಯಿಂದ ದೈವತ್ವಕ್ಕೆ ಏರುವುದು ಅಷ್ಟು ಸುಲಭವಲ್ಲ. ಇದಕ್ಕೆಲ್ಲ ಶ್ರಮ ಪ್ರಯತ್ನ ಇರಬೇಕಾಗುತ್ತದೆ. ಅಧ್ಯಾತ್ಮ ಲೋಕದಲ್ಲಿ ಅನೇಕ ವಿಭೂತಿ ಪುರುಷರನ್ನು ಇತಿಹಾಸದಲ್ಲಿ ಕಾಣುತ್ತೇವೆ. ಅಂಥ ಸಿದ್ಧಿ ಪುರುಷರಲ್ಲಿ ಅಗ್ರಸ್ಥಾನದಲ್ಲಿ ಲಿಂ. ಉಜ್ಜಯಿನಿ ಶ್ರೀ ಅವರಲ್ಲಿ ಕಾಣಬಹುದು. ಶಾಪಾನುಗ್ರಹ ಶಕ್ತಿ ಸಂಪಾದಿಸಿದರೂ ಯಾರಿಗೂ ಶಾಪ ಕೊಡಲಿಲ್ಲ. ಜನರ ತಾಪ ಪರಿಹರಿಸಿ ಸತ್ಪ್ರಜೆಗಳನ್ನಾಗಿ ಪರಿವರ್ತಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

- ಬಿ.ಪಿ. ಹರೀಶ, ಶಾಸಕ, ಹರಿಹರ ಕ್ಷೇತ್ರ.

- - -

-08ಎಚ್‌ಆರ್‌ಆರ್‌೦1 ಹಾಗೂ ೦1ಎ:

ಸಮಾರಂಭದಲ್ಲಿ ಬಾಳೆಹೊನ್ನೂರಿನ ರಂಭಾಪುರಿ ಶ್ರೀ ಆಶೀರ್ವಚನ ನೀಡಿದರು.