ಮಹಿಳಾ ಸೂಪರ್‌ ಸ್ಟಾರ್ ಬಿ.ಸರೋಜಾದೇವಿಗೆ ಭಾವಪೂರ್ಣ ಶ್ರದ್ಧಾಂಜಲಿ

| Published : Jul 17 2025, 12:39 AM IST

ಮಹಿಳಾ ಸೂಪರ್‌ ಸ್ಟಾರ್ ಬಿ.ಸರೋಜಾದೇವಿಗೆ ಭಾವಪೂರ್ಣ ಶ್ರದ್ಧಾಂಜಲಿ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ ಏಕೈಕ ಮೊದಲ ನಟಿ ಎಂಬ ಕೀರ್ತಿ ಅಭಿನಯ ಸರಸ್ವತಿ ಬಿ.ಸರೋಜಾದೇವಿ ಅವರಿಗೆ ಸಲ್ಲುತ್ತದೆ. ಏಳು ದಶಕಗಳ ಕಾಲ ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದ ಅವರು ಅಂದಿನ ಕಾಲದ ಎಲ್ಲಾ ಭಾಷೆಗಳ ಸೂಪರ್ ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಂಡಿದ್ದ ಬಹುಮುಖ ಪ್ರತಿಭೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕನ್ನಡ ಸಿನಿಮಾರಂಗದ ಮೊದಲ ‘ಮಹಿಳಾ ಸೂಪರ್ ಸ್ಟಾರ್’ ಬಿ.ಸರೋಜಾದೇವಿ ಅವರ ಅಗಲಿಕೆ ಕನ್ನಡ ಚಿತ್ರರಂಗಕ್ಕೆ ತುಂಬಲಾಗದ ನಷ್ಟವಾಗಿದೆ ಎಂದು ಅಂತಾರಾಷ್ಟ್ರೀಯ ಅಲೆಯನ್ಸ್ ಸಂಸ್ಥೆ ಸೌತ್ ಮಲ್ಟಿಪಲ್‌ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಹೇಳಿದರು.

ನಗರದ ಗಾಂಧಿ ಭವನದಲ್ಲಿ ಕೃಷಿಕ ಅಲಯನ್ಸ್ ಸಂಸ್ಥೆ ಮತ್ತು ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಆಯೋಜಿಸಿದ್ದ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ, ಹಿರಿಯ ನಟಿ ಬಿ.ಸರೋಜಾದೇವಿ ಅವರ ಭಾವಪೂರ್ಣ ಶ್ರದ್ಧಾಂಜಲಿ-ಸಂತಾಪ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಮರ್ಪಿಸಿ ಅವರು ಮಾತನಾಡಿದರು.

ದೇಶದ ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ ಏಕೈಕ ಮೊದಲ ನಟಿ ಎಂಬ ಕೀರ್ತಿ ಅಭಿನಯ ಸರಸ್ವತಿ ಬಿ.ಸರೋಜಾದೇವಿ ಅವರಿಗೆ ಸಲ್ಲುತ್ತದೆ. ಏಳು ದಶಕಗಳ ಕಾಲ ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದ ಅವರು ಅಂದಿನ ಕಾಲದ ಎಲ್ಲಾ ಭಾಷೆಗಳ ಸೂಪರ್ ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಂಡಿದ್ದ ಬಹುಮುಖ ಪ್ರತಿಭೆ ಎಂದು ಸ್ಮರಿಸಿದರು.

ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ಅಭಿನಯಿಸಿ ಯಶಸ್ಸು ಕಂಡ ನಟಿ ಬಿ.ಸರೋಜಾ ದೇವಿ ಅವರು ೨೦೦ಕ್ಕೂ ಅಧಿಕ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಅವರ ನಟನೆ ಎಷ್ಟು ನೈಜವಾಗಿರುತ್ತಿತ್ತು ಎಂದರೆ ಅಭಿಮಾನಿಗಳ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿದ್ದರು ಎಂದರು.

ಕನ್ನಡದ ಡಾ.ರಾಜ್‌ಕುಮಾರ್‌, ಕಲ್ಯಾಣ್ ಕುಮಾರ್, ತಮಿಳಿನ ಎಂ.ಜಿ. ರಾಮಚಂದ್ರನ್, ಜೆಮಿನಿ ಗಣೇಶನ್, ಶಿವಾಜಿ ಗಣೇಶನ್, ತೆಲುಗಿನ ಎನ್‌.ಟಿ.ರಾಮರಾವ್, ಅಕ್ಕಿನೇನಿ ನಾಗೇಶ್ವರ್ ರಾವ್, ಹಿಂದಿಯ ದಿಲೀಪ್ ಕುಮಾರ್, ರಾಜೇಂದ್ರ ಕುಮಾರ್, ಸುನೀಲ್ ದತ್, ಶಮ್ಮಿಕಪೂರ್ ಸೇರಿದಂತೆ ಅಂದಿನ ಎಲ್ಲಾ ಟಾಪ್ ಸ್ಟಾರ್‌ಗಳ ತೆರೆ ಹಂಚಿಕೊಂಡ ಖ್ಯಾತಿ ಬಿ.ಸರೋಜಾದೇವಿ ಅವರದ್ದಾಗಿದೆ ಎಂದು ನುಡಿದರು.

ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ಪ್ರೊ.ಡೇವಿಡ್, ೧೯೯೨ರಲ್ಲಿ ಪದ್ಮಭೂಷಣ, ೧೯೬೯ರಲ್ಲಿ ಪದ್ಮಶ್ರೀ, ೨೦೦೯ರಲ್ಲಿ ತಮಿಳುನಾಡು ಸರ್ಕಾರದಿಂದ ‘ಕಲೈಮಾಮಣಿ ಲೈಫ್‌ಟೈಮ್ ಅಚೀವ್‌ಮೆಂಟ್ ಅವಾರ್ಡ್’, ೨೦೦೯ರಲ್ಲಿ ಕರ್ನಾಟಕ ಸರ್ಕಾರದಿಂದ ‘ಡಾ ರಾಜ್‌ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ’, ೨೦೦೯ರಲ್ಲಿ ಆಂಧ್ರಪ್ರದೇಶ ಸರ್ಕಾರದಿಂದ ಎನ್‌ಟಿಆರ್ ನ್ಯಾಷನಲ್ ಅವಾರ್ಡ್, ೧೯೯೩ರಲ್ಲಿ ತಮಿಳುನಾಡು ಸರ್ಕಾರದಿಂದ ಎಂಜಿಆರ್ ಪ್ರಶಸ್ತಿ, ೧೯೯೮ರಲ್ಲಿ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ, ೧೯೯೪ರಲ್ಲಿ ಫಿಲ್ಮ್ಫೇರ್ ಜೀವಮಾನ ಸಾಧನೆ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನ ಬಿ.ಸರೋಜಾದೇವಿ ಮುಡಿಗೇರಿಸಿಕೊಂಡಿದ್ದರು ಎಂದರು.

ಬಿ.ಸರೋಜಾ ದೇವಿ ನಿಧನದಿಂದ ಕನ್ನಡ ಚಿತ್ರರಂಗದ ಹಿರಿಯ ಕೊಂಡಿ ಕಳಚಿದಂತಾಗಿದ್ದು, ಕನ್ನಡ ಸಿನಿಮಾರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.ಇವರ ನಿಧನಕ್ಕೆ ಕನ್ನಡ ಸಿನಿತಾರೆಯರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ ಎಂದು ವಿಷಾದಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಲಿಂಗಣ್ಣ ಬಂಧುಕಾರ್, ಹಿರಿಯ ಪತ್ರಕರ್ತ ಡಿ.ಎನ್‌.ಶ್ರೀಪಾದು, ಹೋರಾಟಗಾರ ಬೇಕ್ರಿ ರಮೇಶ್, ಲೋಕೇಶ್, ಮಾದೇಗೌಡ, ಚಂದ್ರಶೇಖರ್, ಶಿಕ್ಷಕ ಶಶಿಧರ್‌ ಈಚಗೆರೆ, ಮಲ್ಲೇಶ್, ಮಂಜುಳಾ, ಹನುಮಂತಯ್ಯ ಮತ್ತಿತರರಿದ್ದರು.