ಕನ್ನಡಪ್ರಭ ವಾರ್ತೆ ಹಾಸನ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ನಾಡಿನ ಕಲಾ ವೈಭವವನ್ನು ಚಿತ್ರಕಲೆಯ ಮೂಲಕ ವಿಶ್ವದ ಗಮನಕ್ಕೆ ತಂದ ಹಿರಿಯ ಚಿತ್ರಕಲಾವಿದ, ಜನಪರ ಚಿಂತಕ, ದಲಿತ ಹಾಗೂ ರೈತ ಚಳವಳಿಗಳ ಮುಂಚೂಣಿ ಹೋರಾಟಗಾರ ಕೆ.ಟಿ. ಶಿವಪ್ರಸಾದ್ ಅವರ ಸ್ಮರಣಾರ್ಥ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಭಾನುವಾರ ‘ಕೆ.ಟಿ. ಶಿವಪ್ರಸಾದ್ ಅವರಿಗೆ ನುಡಿ ನಮನ’ಕಾರ್ಯಕ್ರಮ ನೆರವೇರಿತು.ಕಾರ್ಯಕ್ರಮದ ಆರಂಭದಲ್ಲಿ ಶಿವಪ್ರಸಾದ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಎರಡು ನಿಮಿಷಗಳ ಮೌನಾಚರಣೆ ಮೂಲಕ ಗೌರವ ಸೂಚಿಸಲಾಯಿತು. ಬಳಿಕ ವಿವಿಧ ಕ್ಷೇತ್ರಗಳ ಗಣ್ಯರು ಶಿವಪ್ರಸಾದ್ ಅವರ ಕಲಾ ಸಾಧನೆ, ಹೋರಾಟದ ಬದುಕು ಹಾಗೂ ಸಮಾಜಮುಖಿ ಚಿಂತನೆಗಳನ್ನು ಸ್ಮರಿಸಿದರು. ಕೇಂದ್ರ ಲಲಿತಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷ ಚಿ.ಸು. ಕೃಷ್ಣಶೆಟ್ಟಿ ಮಾತನಾಡಿ, ಕೆ.ಟಿ. ಶಿವಪ್ರಸಾದ್ ಕೇವಲ ಚಿತ್ರಕಾರರಲ್ಲ, ಸಮಾಜದ ನೋವು-ನಲಿವುಗಳನ್ನು ತಮ್ಮ ಕಲೆಯ ಮೂಲಕ ಜನರ ಮುಂದಿಟ್ಟ ಅಪರೂಪದ ಕಲಾವಿದ ಎಂದು ಬಣ್ಣಿಸಿದರು. ೧೯೮೪ರ ಕಲಾಯಾತ್ರೆಯಲ್ಲಿ ತಮ್ಮದೇ ನಗ್ನಚಿತ್ರದ ಮೂಲಕ ಸಮಾಜದ ಗಮನ ಸೆಳೆದದ್ದು ಅವರ ಕಲಾತ್ಮಕ ಧೈರ್ಯಕ್ಕೆ ಸಾಕ್ಷಿಯಾಗಿದೆ ಎಂದರು.ಜೆ.ಜೆ. ಕಲಾಶಾಲೆಯ ಶೈಲಿಯ ಪ್ರಭಾವ ಇದ್ದರೂ ಅದನ್ನು ಮೀರಿ ಹೊಸ ಕಲಾಭಾಷೆಯನ್ನು ರೂಪಿಸಿಕೊಂಡಿದ್ದ ಅವರು, ಗುಣಮಟ್ಟದ ಮತ್ತು ಬೃಹತ್ ಗಾತ್ರದ ಕಲಾಕೃತಿಗಳನ್ನು ಸೃಷ್ಟಿಸಿದ್ದರು. ಉತ್ತಮ ಓದುಗರಾಗಿದ್ದ ಶಿವಪ್ರಸಾದ್ ಸಾರ್ವಜನಿಕ ವೇದಿಕೆಗಳಲ್ಲಿ ಕಡಿಮೆ ಮಾತನಾಡಿದರೂ, ಅವರ ಕಲೆಯೇ ಅವರ ಧ್ವನಿಯಾಗಿತ್ತು ಎಂದು ಹೇಳಿದರು. ಕಲಾವಿದರ ನಿಧನದ ಸಂದರ್ಭದಲ್ಲಿ ಸರ್ಕಾರ ಪೊಲೀಸ್ ಗೌರವ ಸಲ್ಲಿಸುವ ಪರಂಪರೆ ರೂಪಿಸಬೇಕು ಎಂದು ಆಗ್ರಹಿಸಿದ ಅವರು, ಶಿವಪ್ರಸಾದ್ ಅವರ ಮೂಲ ಕಲಾಕೃತಿಗಳನ್ನು ಜನರು ನೇರವಾಗಿ ವೀಕ್ಷಿಸಲು ಶಾಶ್ವತ ಕಲಾ ಗ್ಯಾಲರಿ ಸ್ಥಾಪನೆಯಾಗಬೇಕು ಎಂದು ಆಶಿಸಿದರು.ದಲಿತ ಚಳವಳಿಯ ರಾಜ್ಯ ನಾಯಕ ಮಾವಳ್ಳಿ ಶಂಕರ್ ಮಾತನಾಡಿ, ಕೆ.ಟಿ. ಶಿವಪ್ರಸಾದ್ ದಲಿತ ಚಳುವಳಿಗೆ ಹೊಸ ಚೈತನ್ಯ ತುಂಬಿದ ವ್ಯಕ್ತಿ. ಅನೇಕ ಯುವ ಹೋರಾಟಗಾರರಿಗೆ ಅವರು ಪ್ರೇರಣೆಯಾಗಿದ್ದರು. ಅವರ ಹೆಸರಿನಲ್ಲಿ ಕಲಾ ಗ್ಯಾಲರಿ ನಿರ್ಮಿಸುವುದು ನಿಜವಾದ ಗೌರವವಾಗಲಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಹಸಿರುಭೂಮಿ ಪ್ರತಿಷ್ಠಾನದ ಸಂಸ್ಥಾಪಕ ಆರ್‌.ಪಿ. ವೆಂಕಟೇಶ್ ಮೂರ್ತಿ ಮಾತನಾಡಿ, ಅನ್ಯಾಯದ ವಿರುದ್ಧ ನಿರಂತರ ಹೋರಾಟ ನಡೆಸಿದ್ದ ಶಿವಪ್ರಸಾದ್ ಹಲವು ಜನಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು. ಗಡಿಪಾರು ಆದವರ ಪರವಾಗಿ ನಡೆಸಿದ ಹೋರಾಟ, ಜಪ್ತಿ ಪ್ರಕರಣಗಳ ವಿರುದ್ಧದ ಪ್ರತಿಭಟನೆಗಳು ಹಾಗೂ ಗಾಂಧಿ ಮತ್ತು ಅಂಬೇಡ್ಕರ್ ಅವರ ಚಿಂತನೆಗಳನ್ನು ಜನಸಾಮಾನ್ಯರ ಮನೆಮನೆಗೆ ತಲುಪಿಸುವ ಪ್ರಯತ್ನಗಳು ಅವರ ಸಮಾಜಮುಖಿ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಬೂಕರ್ ಪ್ರಶಸ್ತಿ ವಿಜೇತೆ ಭಾನು ಮುಸ್ತಾಕ್, ಮಾಜಿ ಶಾಸಕ ಹೆಚ್.ಎಂ. ವಿಶ್ವನಾಥ್, ಶಿವಪ್ರಸಾದ್ ಅವರ ಪತ್ನಿ ಸಿ. ಸುವರ್ಣ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಜಿ.ಎಲ್. ಮುದ್ದೇಗೌಡ, ಹಿರಿಯ ದಲಿತ ನಾಯಕ ನಾರಾಯಣದಾಸ್, ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಕೆ. ಎಚ್. ವೇಣುಕುಮಾರ್, ಶಿಕ್ಷಕ ಬಿ.ಡಿ. ಸಾಹಿತಿ, ಪಂಕಜ ಗೊರೂರು, ಶಂಕರೇಗೌಡ, ಚಿತ್ರಕಲಾವಿದ ಶಂಕರ್, ಮಾದಿಗ ದಂಡೋರ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಆರ್. ವಿಜಯಕುಮಾರ್, ಶಿವಪ್ರಸಾದ್ ಒಡನಾಡಿಗಳ ಬಳಗದ ಬಿ.ಎಸ್. ದೇಸಾಯಿ, ಎಂ. ಸೋಮಶೇಖರ್, ಧರ್ಮೇಶ್, ಎಚ್.ಆರ್. ನವೀನ್ ಕುಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಸಂಪಾದಕರು ಹಾಗೂ ಪತ್ರಕರ್ತರ ಸಂಘದ ನಿರ್ದೇಶಕರಾದ ಚಲಂ ಹಾಡ್ಲಳ್ಳಿ ಕಾರ್ಯಕ್ರಮ ನಿರೂಪಿಸಿದರು. ಲಕ್ಷ್ಮೀಕಾಂತ್ ಕಾರ್ಲೇ ಸ್ವಾಗತಿಸಿದರು.