ಸಾರಾಂಶ
ರೈತರು, ಅರಣ್ಯ ಇಲಾಖೆ ನಿದ್ದೆಗೆಡಿಸಿದ್ದ ಆನೆಗಳು । ಶಾಶ್ವತ ಪರಿಹಾರಕ್ಕೆ ರೈತ ಸಂಘ ಆಗ್ರಹ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸುಮಾರು ಒಂದು ತಿಂಗಳ ಕಾಲ ಜಿಲ್ಲೆಯ 2 ತಾಲೂಕುಗಳಲ್ಲಿ ಬೀಡು ಬಿಟ್ಟಿದ್ದ ಸುಮಾರು 19 ಕಾಡಾನೆಗಳ ಹಿಂಡು ಸಕಲೇಶಪುರಕ್ಕೆ ವಾಪಸ್ ತೆರಳಿವೆ.
ನಾಲ್ಕು ಮರಿ ಆನೆಗಳೊಂದಿಗೆ ಚಿಕ್ಕಮಗಳೂರು ಹಾಗೂ ಮೂಡಿಗೆರೆ ತಾಲೂಕುಗಳಲ್ಲಿ ಸುತ್ತಾಡಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ ಹಾಗೂ ಇತರೆ ಕೃಷಿ ಸಂಬಂಧಿತ ವಸ್ತುಗಳನ್ನು ಹಾಳು ಮಾಡಿ ರೈತರ ಹಾಗೂ ಅರಣ್ಯ ಇಲಾಖೆ ನಿದ್ದೆಗೆಡಿಸಿದ್ದ ಆನೆಗಳು ಸಕಲೇಶಪುರಕ್ಕೆ ಹಿಂದಿರುಗಿವೆ.ಸಕಲೇಶಪುರದಲ್ಲಿ ಸುಮಾರು 60 ಆನೆಗಳ ತಂಡ ಇದ್ದು, ಈ ತಂಡದಲ್ಲಿ ಭುವನೇಶ್ವರಿ, ಬೀಟಮ್ಮ- 1, ಬೀಟಮ್ಮ- 2 ಆನೆಗಳು ಇದ್ದರಿಂದ ಅವುಗಳಿಗೆ ಅಳವಡಿಸಿದ್ದ ಕಾಲರ್ ಐಡಿಯಿಂದ ಚಲನವಲನಗಳ ಮೇಲೆ ಕಣ್ಣಿಡಲು ಸಾಧ್ಯವಾಗುತ್ತಿತ್ತು. ಆದರೆ, ಈ ಗುಂಪಿನಲ್ಲಿದ್ದ 20 ಆನೆಗಳು ಬೇರ್ಪಟ್ಟು ಮೂಡಿಗೆರೆಗೆ ಬಂದಿದ್ದವು. ಇಲ್ಲಿರುವ ಯಾವ ಆನೆಯಲ್ಲೂ ಕಾಲರ್ ಐಡಿ ಇರಲಿಲ್ಲ. ಹಾಗಾಗಿ ಅವುಗಳ ಮೇಲೆ ನಿಗಾ ಇಡಲು ಅರಣ್ಯ ಇಲಾಖೆಯವರು ದ್ರೋಣ್ ಕ್ಯಾಮರ ಬಳಸಿದ್ದರು. ಗುಂಪಿನಲ್ಲಿ ಮರಿ ಆನೆಗಳು ಇದ್ದರಿಂದ ಅವುಗಳ ಮೇಲೆ ಒತ್ತಡ ಹೇರಿ ಓಡಿಸುವ ಪರಿಸ್ಥಿತಿ ಇರಲಿಲ್ಲ. ಹಾಗಾಗಿ ಬಂದ ದಾರಿಯಲ್ಲಿಯೇ ಅವುಗಳ ವಾಪಸ್ ಹೋಗುವುದನ್ನು ಕಾಯಬೇಕಾಗಿತ್ತು. ಇದರಿಂದ ಬೆಳೆ ಹಾನಿ ಪ್ರಮಾಣ ಹೆಚ್ಚಳವಾಗಿದೆ. ಸದ್ಯ ಈ ಆನೆಗಳು ಸಕಲೇಶಪುರಕ್ಕೆ ವಾಪಸ್ ಆಗಿವೆ.
--- ಬಾಕ್ಸ್---ಆನೆಗಳ ಹಾವಳಿ: ಶಾಶ್ವತ ಪರಿಹಾರಕ್ಕೆ ರೈತ ಸಂಘ ಆಗ್ರಹಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ರೈತರ ಬೆಳೆಗಳು ಹಾಳು ಮಾಡಿವೆ. ಕೂಡಲೇ ಆನೆಗಳ ಉಪಟಳಕ್ಕೆ ಕಡಿವಾಣ ಹಾಕದೆ ಇದ್ದರೆ
ಅರಣ್ಯ ಇಲಾಖೆ ಕಚೇರಿ ಎದುರು ಅಡುಗೆ ತಯಾರಿಸಿ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ. ಮಹೇಶ್ ಎಚ್ಚರಿಕೆ ನೀಡಿದ್ದಾರೆ.ರೈತರಿಗೆ ಅಪಾರ ನಷ್ಟವಾಗಿದೆ. ಇದಕ್ಕಾಗಿ ವೈಜ್ಞಾನಿಕ ಪರಿಹಾರ ನೀಡಬೇಕು. ಆನೆಗಳ ದಾಳಿಯಿಂದ ಮೃತಪಟ್ಟ ರೈತರಿಗೆ ಕನಿಷ್ಟ ₹30 ಲಕ್ಷ ಪರಿಹಾರ ನೀಡಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಕಳೆದ ವರ್ಷ 3 ಮಂದಿ ರೈತರು ಕಾಡಾನೆ ದಾಳಿಯಲ್ಲಿ ಮೃತಪಟ್ಟಿದ್ದರು. ಈ ಕಹಿ ಘಟನೆ ಮರೆಯುವ ಮುನ್ನವೇ ಮತ್ತೊಂದು ಜೀವ ಬಲಿಯಾಗಿದೆ. ಕಳೆದ ಐದರೂ ದಿನಗಳಿಂದ ಕೊಪ್ಪ ಭಾಗದಲ್ಲಿ ಕಾಡಾನೆ ಸುತ್ತುವ ಬಗ್ಗೆ ಮಾಹಿತಿ ಇದ್ದರೂ ಅರಣ್ಯ ಇಲಾಖೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಮುಖಂಡರಾದ ಕೆ.ಕೆ. ಕೃಷ್ಣೇಗೌಡ, ಚಂದ್ರೇಗೌಡ, ಸುನೀಲ್‌ಕುಮಾರ್, ನಜ್ಮಾ ಆಲಿ ಇದ್ದರು. 2 ಕೆಸಿಕೆಎಂ 2