ಕನ್ನಡಪ್ರಭ ವಾರ್ತೆ ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿಯ ಹೊಸಹಳ್ಳಿ ಗ್ರಾಮದ ಕಾಫಿ ತೋಟಕ್ಕೆ ಕಾಡಾನೆಗಳ ಹಿಂಡು ಗೇಟ್ ಮುರಿದು ಒಳಪ್ರವೇಶಿಸಿದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.ಕಳೆದ ಎರಡು ದಿನಗಳ ಹಿಂದೆ ಬಿಕ್ಕೋಡು ಸಮೀಪ ರಘುನಂದನ್ ಎಂಬುವರನ್ನು ಕಾಡಾನೆ ಎಂದು ಅಟ್ಟಾಡಿಸಿಕೊಂಡು ಹೋದ ಘಟನೆಯ ಬೆನ್ನಲ್ಲೇ ಸೋಮವಾರ ರಾತ್ರಿ ವೇಳೆ ಆಹಾರಕ್ಕಾಗಿ ಬಂದ ಕಾಡಾನೆಗಳ ಹಿಂಡು ಬಿಕ್ಕೋಡು ಸಮೀಪದ ಹೊಸಹಳ್ಳಿ ಗ್ರಾಮದ ಕಾಫಿ ಎಸ್ಟೇಟ್‌ನ ಮುಖ್ಯ ಗೇಟ್ ಅನ್ನು ಮುರಿದು ಒಳನುಗ್ಗಿವೆ. ನಂತರ ತೋಟದ ಸುತ್ತ ಕೆಲಕಾಲ ಸಂಚರಿಸಿದೆ. ಆನೆಗಳು ನುಗ್ಗಿದ ರಭಸಕ್ಕೆ ಗೇಟ್‌ ಜಖಂಗೊಂಡಿದೆ. ಮಲೆನಾಡು ಭಾಗ ಹಾಗೂ ಬೇಲೂರು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ತೀವ್ರ ಆತಂಕಕಾರಿ ಸಂಗತಿಯಾಗಿದೆ. ತೋಟದ ಗೇಟ್‌ಗಳನ್ನು ಮುರಿದು, ಬೇಲಿಗಳನ್ನು ಧ್ವಂಸಗೊಳಿಸಿ ಆನೆಗಳು ನುಗ್ಗುತ್ತಿರುವುದರಿಂದ ರೈತರು ಮತ್ತು ಗ್ರಾಮಸ್ಥರು ಜೀವಭಯದಲ್ಲೇ ದಿನ ಕಳೆಯುವಂತಾಗಿದೆ.ಕೇವಲ ಆನೆಗಳನ್ನು ಓಡಿಸುವುದರಿಂದ ತಾತ್ಕಾಲಿಕ ಪರಿಹಾರ ಸಿಗುತ್ತದೆಯೇ ಹೊರತು ಶಾಶ್ವತ ಮುಕ್ತಿ ಸಿಗುವುದಿಲ್ಲ. ಬಾಧಿತ ಪ್ರದೇಶಗಳಲ್ಲಿ ರೈಲ್ವೆ ಹಳಿಗಳ ಬ್ಯಾರಿಕೇಡ್ ನಿರ್ಮಾಣವನ್ನು ಪೂರ್ಣಗೊಳಿಸಲು ಮತ್ತು ತೊಂದರೆ ಕೊಡುವ ಆನೆಗಳನ್ನು ಪತ್ತೆಹಚ್ಚಿ ರೇಡಿಯೋ ಕಾಲರ್‌ ಅಳವಡಿಸಲು ಅಥವಾ ಸ್ಥಳಾಂತರಿಸಲು ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಬೇಕಿದೆ. ಕಾಡಾನೆಗಳ ಓಡಾಟದಿಂದ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಂಡು ಕಾಡಾನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸುವಂತೆ ಹಾಗೂ ಗ್ರಾಮಸ್ಥರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಬೆಳೆಗಾರರು ಒತ್ತಾಯಿಸಿದ್ದಾರೆ.