ಸಾರಾಂಶ
ಚಾಮರಾಜನಗರದ ಚಾಮರಾಜೇಶ್ವರ ದೇವಾಲಯದ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ ದಸರಾ ಪಾರಂಪರಿಕ ನಡಿಗೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಹಸಿರು ನಿಶಾನೆ ತೋರಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲಾ ದಸರಾ ಮಹೋತ್ಸವದ ಅಂಗವಾಗಿ ನಗರದಲ್ಲಿ ಬುಧವಾರ ಆಯೋಜಿಸಲಾಗಿದ್ದ ದಸರಾ ಪಾರಂಪರಿಕ ನಡಿಗೆ ಕಾರ್ಯಕ್ರಮ ನಾಗರಿಕರ ಗಮನ ಸೆಳೆಯಿತು. ನಗರದ ಚಾಮರಾಜೇಶ್ವರ ದೇವಾಲಯದ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ ದಸರಾ ಪಾರಂಪರಿಕ ನಡಿಗೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ಹಸಿರು ನಿಶಾನೆ ತೋರಿದರು. ಪಾರಂಪರಿಕ ನಡಿಗೆಯನ್ನು ಉದ್ದೇಶಿಸಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು, ಚಾಮರಾಜನಗರ ಜಿಲ್ಲಾ ದಸರಾ ಮಹೋತ್ಸವದ ಅಂಗವಾಗಿ ನಗರದಲ್ಲಿ ಮೂರು ದಿನಗಳ ಕಾಲ ಏರ್ಪಡಿಸಲಾಗಿರುವ ಹಲವು ವಿಶೇಷ, ವಿಭಿನ್ನ ಕಾರ್ಯಕ್ರಮಗಳ ಪೈಕಿ ದಸರಾ ಪಾರಂಪರಿಕ ನಡಿಗೆಯು ಸಹ ಒಂದಾಗಿದೆ. ಜಿಲ್ಲೆ ಹಾಗೂ ಪಟ್ಟಣದಲ್ಲಿರುವ ಪಾರಂಪರಿಕ ಕಟ್ಟಡಗಳು, ದೇವಾಲಯಗಳ ಬಗ್ಗೆ ಜಾಗೃತಿ ಮೂಡಿಸುವುದೇ ಪಾರಂಪರಿಕ ನಡಿಗೆಯ ಉದ್ದೇಶವಾಗಿದೆ. ಇದರಿಂದ ಸಂಸ್ಕೃತಿಯ ಪಸರಿಸುವಿಕೆ ಸಾಧ್ಯವಾಗಲಿದೆ ಎಂದರು. ಚಾಮರಾಜನಗರದಲ್ಲಿ ಹಲವಾರು ಪಾರಂಪರಿಕ ಕಟ್ಟಡಗಳು, ದೇವಾಲಯಗಳಿವೆ. ನಗರದ ಹೃದಯಭಾಗದಲ್ಲಿರುವ ಮಹಾರಾಜರು ಹುಟ್ಟಿದ ಜನನ ಮಂಟಪ, ಚಾಮರಾಜೇಶ್ವರ ದೇವಾಲಯ, ಹರಳುಕೋಟೆ ಆಂಜನೇಯ ದೇವಸ್ಥಾನ, ಇನ್ನಿತರೆ ಪ್ರಮುಖ ಸ್ಥಳಗಳಿವೆ. ಚಾಮರಾಜನಗರವನ್ನು ಮೊದಲು ಅರಿಕುಠಾರ ಎಂದು ಕರೆಯಲಾಗುತ್ತಿತ್ತು. 9ನೇ ಚಾಮರಾಜ ಒಡೆಯರ್ ಇಲ್ಲಿ ಜನಿಸಿದ ಬಳಿಕ ಅವರದೇ ಹೆಸರಿನಿಂದ ಪಟ್ಟಣವನ್ನು ಚಾಮರಾಜನಗರವೆಂದು ನಾಮಕರಣ ಮಾಡಲಾಯಿತು. ಪಾರಂಪರಿಕ ನಡಿಗೆಗೆ ಮಹತ್ವ ನೀಡಿ ನಮ್ಮ ಪೂರ್ವಜರ ಹಾದಿಯಲ್ಲಿ ಮುನ್ನೆಡೆಯೋಣ ಎಂದು ತಿಳಿಸಿದರು. ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ ಪ್ರಸನ್ನ, ಜಿಲ್ಲಾ ಪರಿಸರ ಅಧಿಕಾರಿ ಉಮಾಶಂಕರ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಶಂಕರ್, ನಗರಸಭೆ ಹಿರಿಯ ಆರೋಗ್ಯ ನಿರೀಕ್ಷರಾದ ಮಂಜುನಾಥ್, ನಾರಾಯಣ್, ದೈಹಿಕ ಶಿಕ್ಷಕರಾದ ಚಿಕ್ಕಬಸವಯ್ಯ, ಶಿವಮಲ್ಲು, ಇತರರು ಇದೇ ವೇಳೆ ಇದ್ದರು. ಪಾರಂಪರಿಕ ನಡಿಗೆಯು ಚಾಮರಾಜೇಶ್ವರ ದೇವಾಲಯದಿಂದ ಆರಂಭವಾಗಿ ನಗರದ ಜನನ ಮಂಟಪ, ವೀರಭದ್ರೇಶ್ವರ ದೇವಸ್ಥಾನ, ಜೈನರ ಬೀದಿ, ಕೊಳದ ಗಣಪತಿ, ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ, ಪಚ್ಚಪ್ಪ ವೃತ್ತದ ಮೂಲಕ ಮತ್ತೆ ಚಾಮರಾಜೆಶ್ವರ ದೇವಾಲಯದಲ್ಲಿ ಅಂತ್ಯಗೊಂಡಿತು.