ಕರಾವಳಿ ಭಾಗದ ಜನರಿಗೆ ಕಾನೂನು ಸೇವೆ ಒದಗಿಸಲು ಇಲ್ಲಿ ಹೈಕೋರ್ಟ್‌ ಸಂಚಾರಿ ಪೀಠ ಸ್ಥಾಪನೆಯಾಗಬೇಕು ಹಾಗೂ ಉತ್ತಮ ಆರೋಗ್ಯ-ಉನ್ನತ ಶಿಕ್ಷಣ ದೊರಕಿಸುವ ನಿಟ್ಟಿನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರಾಗಬೇಕು ಎಂದು ಆಗ್ರಹಿಸಿ ವಿವಿಧ ಸಂಘ-ಸಂಸ್ಥೆಗಳ ಒಕ್ಕೂಟದ ವತಿಯಿಂದ ಇಲ್ಲಿನ ಎಂ.ಜಿ.ಎಂ. ಕಾಲೇಜಿನಲ್ಲಿ ಶನಿವಾರ ಬೃಹತ್ ಹಕ್ಕೊತ್ತಾಯ ಸಭೆ ನಡೆಯಿತು.

ಉಡುಪಿ: ಕರಾವಳಿ ಭಾಗದ ಜನರಿಗೆ ಕಾನೂನು ಸೇವೆ ಒದಗಿಸಲು ಇಲ್ಲಿ ಹೈಕೋರ್ಟ್‌ ಸಂಚಾರಿ ಪೀಠ ಸ್ಥಾಪನೆಯಾಗಬೇಕು ಹಾಗೂ ಉತ್ತಮ ಆರೋಗ್ಯ-ಉನ್ನತ ಶಿಕ್ಷಣ ದೊರಕಿಸುವ ನಿಟ್ಟಿನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರಾಗಬೇಕು ಎಂದು ಆಗ್ರಹಿಸಿ ವಿವಿಧ ಸಂಘ-ಸಂಸ್ಥೆಗಳ ಒಕ್ಕೂಟದ ವತಿಯಿಂದ ಇಲ್ಲಿನ ಎಂ.ಜಿ.ಎಂ. ಕಾಲೇಜಿನಲ್ಲಿ ಶನಿವಾರ ಬೃಹತ್ ಹಕ್ಕೊತ್ತಾಯ ಸಭೆ ನಡೆಯಿತು.

ಸಭೆಯಲ್ಲಿ ತಮ್ಮ ಅಭಿಪ್ರಾಯ ಮಂಡಿಸಿದ ಮಾಜಿ ಸಂಸದ, ನ್ಯಾಯವಾದಿ ಕೆ. ಜಯಪ್ರಕಾಶ್ ಹೆಗ್ಡೆ, ಕರಾವಳಿಯಿಂದ ಬೆಂಗಳೂರಿಗೆ ಸಂಚರಿಸಿ ಕೇಸಿನ ವಾಯಿದೆಗೆ ಹಾಜರಾಗುವುದು ಇಲ್ಲಿನ ಜನಸಾಮಾನ್ಯರಿಗೆ ಸಾಹಸದ ಕೆಲಸವಾಗಿದೆ. ಇದರ ಜೊತೆಗೆ ಬೆಂಗಳೂರಿನಲ್ಲಿ ಉಳಿದುಕೊಂಡು ಕಾನೂನು ಹೋರಾಟ ನಡೆಸುವುದು ಆರ್ಥಿಕವಾಗಿ ಅಪಾರ ಹೊರೆಯನ್ನುಂಟು ಮಾಡುತ್ತಿದೆ. ಆದ್ದರಿಂದ ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾದರೆ, ಕೆಳ ಕೋರ್ಟಿನಲ್ಲಿ ವಾದ ಮಂಡಿಸಿದ ಸ್ಥಳೀಯ ವಕೀಲರೇ ಹೈಕೋರ್ಟ್‌ನಲ್ಲೂ ವಾದ ಮಂಡಿಸಲು ಅವಕಾಶ ಸಿಗುತ್ತದೆ. ಇದರಿಂದ ಕಕ್ಷಿದಾರರಿಗೆ ಹಣ ಮತ್ತು ಸಮಯದ ಉಳಿತಾಯವಾಗುತ್ತದೆ ಎಂದು ಪ್ರತಿಪಾದಿಸಿದರು. ಮಂಗಳೂರಿನ ವಕೀಲರ ಸಂಘದ ಅಧ್ಯಕ್ಷ ಜಗದೀಶ್ ಶೇಣವ ಮಾತನಾಡಿ, ಪಕ್ಷಭೇದ ಮರೆತು ಎಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸೋಣ, ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯ ಸಂದರ್ಭ ಮುಖ್ಯಮಂತ್ರಿಗಳ ಗಮನ ಸೆಳೆಯುವ ಪ್ರಯತ್ನ ಮಾಡೋಣ ಎಂದರು. ಹಿರಿಯ ಮನೋ ರೋಗ ವೈದ್ಯ ಡಾ. ಪಿ.ವಿ. ಭಂಡಾರಿ ಅವರು, ಕರಾವಳಿಯ ಜನತೆಗೆ ಖಾಸಗಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳ ವೆಚ್ಚ ಭರಿಸುವುದು ಬಹಳ ಕಷ್ಟವಾಗುತ್ತಿದ್ದು, ಉಡುಪಿ ಜಿಲ್ಲೆಗೆ ತಕ್ಷಣವೇ ಸರ್ಕಾರಿ ಮೆಡಿಕಲ್ ಕಾಲೇಜು ಮಂಜೂರು ಮಾಡಬೇಕು ಎಂದು ಡಾ. ಪಿವಿ. ಭಂಡಾರಿ ಒತ್ತಾಯಿಸಿದರು. ಅಧ್ಯಕ್ಷತೆ ವಹಿಸಿದ್ದ ಕರಾವಳಿ ಹೈಕೋರ್ಟ್ ಪೀಠ ಹೋರಾಟ ಸಮಿತಿ ಪ್ರೇಮ್‌ಪ್ರಸಾದ್ ಶೆಟ್ಟಿ, ಹೈಕೋರ್ಟಿನ ಒಂದು ದಿನದ ವಿಚಾರಣೆಗೆ ಕಕ್ಷಿದಾರರು 30 ಸಾವಿರ ರು. ವ್ಯಯಿಸಬೇಕಾಗುತ್ತದೆ. ಇದು ಜನಸಾಮಾನ್ಯರಿಗೆ ತೀರಾ ದುಬಾರಿಯಾಗುತ್ತಿದೆ. ವೆಚ್ಚವಾಗುವ ಪರಿಸ್ಥಿತಿ ಇದೆ. ಕರಾವಳಿ ಭಾಗಕ್ಕೆ ಸಂಬಂಧಿಸಿದ ಸುಮಾರು 25 ಸಾವಿರ ಪ್ರಕರಣಗಳು ಹೈಕೋರ್ಟಿನಲ್ಲಿ ಬಾಕಿ ಇದ್ದು, ಈ ಹೊರೆ ಕಡಿಮೆ ಮಾಡಲು ಕರಾವಳಿಯಲ್ಲೇ ಸಂಚಾರಿ ಪೀಠದ ಅಗತ್ಯವಿದೆ ಎಂದರು. ಸಭೆಯಲ್ಲಿ ಪತ್ರಕರ್ತ ನಿತ್ಯಾನಂದ ಪಡ್ರೆ, ಕರ್ನಾಟಕ ಬಾರ್ ಕೌನ್ಸಿಲ್‌ನ ಶ್ಯಾಮಲ ಭಂಡಾರಿ, ಪ್ರಾಧ್ಯಾಪಕಿ ಸವಿತಾ ಕೊರಗ, ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಶ್ರೀನಾಥ್ ರೈ, ಉಡುಪಿಯ ಹಿರಿಯ ನ್ಯಾಯವಾದಿ ಮಟ್ಟಾರು ರತ್ನಾಕರ ಹೆಗ್ಡೆ ಮುಂತಾದವರು ಹೋರಾಟದ ಪರ ಮಾತನಾಡಿದರು.

ಕಾರ್ಕಳ ವಕೀಲರ ಸಂಘದ ಅಧ್ಯಕ್ಷ ಹರೀಶ್ ಅಧಿಕಾರಿ, ಉಡುಪಿ ವಕೀಲರ ಸಂಘದ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ, ಬೈಂದೂರು ವಕೀಲರ ಸಂಘದ ಅಧ್ಯಕ್ಷ ಪ್ರಶಾಂತ್ ಪೂಜಾರಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.ಸುರೇಶ್ ಕಾಮತ್ ಕಟಪಾಡಿ ಕಾರ್ಯಕ್ರಮ ನಿರೂಪಿಸಿ, ವಿಜಯ ಡಿಸೋಜ ವಂದಿಸಿದರು.

ಒಗ್ಗಟ್ಟಿನ ಹೋರಾಟಕ್ಕೆ ಕರೆ: ಮಂಗಳೂರು, ಉಡುಪಿ ಅಥವಾ ಕಾರವಾರ ಎಂಬ ಆಂತರಿಕ ಭಿನ್ನಾಭಿಪ್ರಾಯ ಬದಿಗಿಟ್ಟು, ಕರಾವಳಿ ಭಾಗದಲ್ಲಿ ಎಲ್ಲೇ ಆದರೂ ಸಂಚಾರಿ ನ್ಯಾಯ ಪೀಠ ಸ್ಥಾಪನೆಯಾಗಬೇಕು ಎಂಬ ಒಂದೇ ಧ್ವನಿಯಲ್ಲಿ ಹೋರಾಟ ರೂಪಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.