ಸಾರಾಂಶ
ಪ್ರತಿ ಮೂರು ನಿಮಿಷಕ್ಕೊಂದು ಹಿಟ್ ಆ್ಯಂಡ್ ರನ್ ಕೇಸ್‌ಗಳು ದಾಖಲಾಗುತ್ತಿವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ಎಫ್. ದೊಡ್ಡಮನಿ ಹೇಳಿದರು.
ಕನ್ನಡಪ್ರಭ ವಾರ್ತೆ ಧಾರವಾಡ
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರಿನ ಜೀವರಕ್ಷಾ ಟ್ರಸ್ಟ್, ರೋಟರಿ ಕ್ಲಬ್ ಆಫ್ ಬೇಲೂರು ಸೇರಿದಂತೆ ಹಲವು ಸಂಘಟನೆಗಳೊಂದಿಗೆ ಭಾನುವಾರ ರಸ್ತೆ ನಿಯಮಗಳ ಪಾಲನೆಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆಯೋಜಿಸಿದ್ದ ರಸ್ತೆ ಸುರಕ್ಷತಾ ಬೈಕ್‌ಥಾನ್ ಯಶಸ್ವಿಯಾಗಿ ನಡೆಯಿತು.ಇಲ್ಲಿಯ ಸಿ.ಬಿ. ನಗರ ಕ್ರಾಸ್, ಲಿಂಗಾಯತ ಭವನದಿಂದ ಎಸ್‌ಡಿಎಂ ಆಸ್ಪತ್ರೆ ವರೆಗೆ ನಡೆದ ಬೈಕ್‌ಥಾನ್‌ಗೆ ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ಎಫ್. ದೊಡ್ಡಮನಿ ಚಾಲನೆ ನೀಡಿದರು.ಪ್ರತಿ ಮೂರು ನಿಮಿಷಕ್ಕೊಂದು ಹಿಟ್ ಆ್ಯಂಡ್ ರನ್ ಕೇಸ್‌ಗಳು ದಾಖಲಾಗುತ್ತಿವೆ. ಇದು ವಾಹನ ಸವಾರರ ಅಜಾಗರೂಕತೆ ಅಲ್ಲದೇ ಬೇರೇನೂ ಅಲ್ಲ. ಇಂತಹ ರಸ್ತೆಯ ಅಪಘಾತಗಳ ಮೇಲೆ ನಿಗಾವಹಿಸುವ ನಿಟ್ಟಿನಲ್ಲಿ ಪ್ರಸ್ತುತ ಪೊಲೀಸ್ ಇಲಾಖೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಸಮಿತಿಯನ್ನು ರಚಿಸಲು ಯೋಜಿಸಲಾಗಿದೆ. ರಸ್ತೆ ನಿಯಮ ಪಾಲಿಸದೇ ಇರುವುದು ಈ ಅವಘಡಗಳಿಗೆ ಕಾರಣವಾಗಿದೆ. 2019ರ ತಿದ್ದುಪಡಿಯ ಪ್ರಕಾರ 18 ವಯೋಮಾನಕ್ಕಿಂತ ಕಡಿಮೆ ಇರುವವರು ವಾಹನ ಚಲಾಯಿಸುವಾಗ ಅವಘಡಗಳು ಸಂಭವಿಸಿದರೆ ವಾಹನದ ಮಾಲೀಕರು ₹25000 ದಂಡ, ಪ್ರಕರಣ ಸಾಬೀತಾದರೆ 3 ವರ್ಷ ಜೈಲು ಶಿಕ್ಷೆಗೆ ಒಳಪಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪಾಲಕರು ಗಮನ ಹರಿಸಲು ತಿಳಿಸಿದರು.ರೋಟರಿ ಕ್ಲಬ್‌ನ ನಾಸಿರ್ ಎಂ. ಮಾತನಾಡಿ, ಪ್ರಸ್ತುತ 3000ಕ್ಕೂ ಹೆಚ್ಚಿನ ಸಮಾಜಮುಖಿ ಕಾರ್ಯಕ್ರಮಗಳು ರೋಟರಿ ಸಂಸ್ಥೆಯಿಂದ ಜರುಗುತ್ತಿರುವುದಾಗಿ ತಿಳಿಸಿದರು.ಹುಬ್ಬಳ್ಳಿಯ 99 ಕ್ಯಾನಾನ್ಸ್ ಮೋಟಾರ್ ಸೈಕಲ್ ಕ್ಲಬ್ ನ ಸಂಸ್ಥಾಪಕ ಸಂಜೀವ ಭಾಟಿ ಮಾತನಾಡಿ, ಯಾವುದೇ ರಸ್ತೆ ಅಪಘಾತಗಳಾದ ಮಾನವೀಯತೆ ಮೆರೆಯ ಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದರು.ಜೀವರಕ್ಷಾ ಟ್ರಸ್ಟಿಗಳಾದ ಡಾ. ವಿಜಯಭಾಸ್ಕರ ರೆಡ್ಡಿ ಕಂದುಲ, ನಮ್ಮಿಂದ ಜರುಗುವ ಸಣ್ಣ ತಪ್ಪುಗಳೇ ದೊಡ್ಡ ಅಪಘಾತಗಳಿಗೆ ಕಾರಣವಾಗುತ್ತವೆ. ಸರಿಯಾಗಿ ರಸ್ತೆಯ ಮತ್ತು ವಾಹನ ಸಂಚಾರಿ ನಿಯಮಗಳನ್ನು ಪಾಲಿಸಿದ್ದೆ ಆದರೆ, ಅಪಘಾತಗಳ ಸಂಭನೀಯತೆ ಕಡಿಮೆ ಎಂದರು.ಎಸ್‌ಡಿಎಂ ವಿಶ್ವವಿದ್ಯಾಲಯದ ರಿಜಿಸ್ಟ್ರಾರಗಳಾದ ಡಾ. ಚಿದೇಂದ್ರ ಶೆಟ್ಟರ, ರೋಟರಿ ಕ್ಲಬ್ ಆಫ್ ಬೇಲೂರಿನ ಅಧ್ಯಕ್ಷ ಅರುಣ ಹೆಬ್ಳೀಕರ್, ಪಿ.ಸಿ. ಗೋಡಿ, ಧಾರವಾಡ ಸಂಚಾರಿ ಠಾಣೆಯ ಇನ್‌ಸ್ಪೆಕ್ಟರ್ ಎಸ್.ಸಿ. ಮೇಟಿ, ಏರವೇಸ್ ಲಾಜಿಸ್ಟಿಕ್‌ನ ರಾಜೇಶಕುಮಾರ, ಡಾ. ಸತೀಶ್ ಪಾಟೀಲ, ಅಶೋಕ ಕೋರಿ, ಡಾ. ಶ್ರೀಧರ ಕುಲಕರ್ಣಿ, ಇದ್ದರು. 46 ಬೈಕರ್‌ಗಳು ಸೇರಿದಂತೆ ಒಟ್ಟು 150 ಜನ ಭಾಗವಹಿಸಿದ್ದರು.ಶ್ರೀಕಾಂತ ಹಂಜಿ ನಿರೂಪಿಸಿದರು. ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಮೋಹನ ಕುಮಾರ ಥಂಬದ ವಂದಿಸಿದರು.