ಕುಡಿಯುವ ನೀರು, ಮೇವು ಒದಗಿಸಲು ಆಡಳಿತ ಸಿದ್ಧ: ಶಾಸಕ ವಿನಯ ಕುಲಕರ್ಣಿ

| Published : Mar 11 2024, 01:19 AM IST

ಕುಡಿಯುವ ನೀರು, ಮೇವು ಒದಗಿಸಲು ಆಡಳಿತ ಸಿದ್ಧ: ಶಾಸಕ ವಿನಯ ಕುಲಕರ್ಣಿ
Share this Article
  • FB
  • TW
  • Linkdin
  • Email

ಸಾರಾಂಶ

ಧಾರವಾಡ ಗ್ರಾಮೀಣ ಮತಕ್ಷೇತ್ರ ಹಾಗೂ ಕಲಘಟಗಿ ಮತಕ್ಷೇತ್ರಯ 121 ಹಳ್ಳಿಗಳು ತಾಲೂಕಿನಲ್ಲಿ ಬರುತ್ತವೆ. ಎಲ್ಲ ಹಳ್ಳಿಗಳಿಗೂ ಕುಡಿಯುವ ನೀರಿನ ತೊಂದರೆ ಆಗದಂತೆ ಈಗಾಗಲೇ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಶಾಸಕ ವಿನಯ ಕುಲಕರ್ಣಿ ಹೇಳಿದರು.

ಕನ್ನಡಪ್ರಭ ವಾರ್ತೆ ಧಾರವಾಡ

ಧಾರವಾಡ ಗ್ರಾಮೀಣ ಮತ್ತು ಕಲಘಟಗಿ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ 121 ಗ್ರಾಮಗಳಿಗೆ ಅಗತ್ಯವಿರುವ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಪೂರೈಸಲು ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ಹಾಗೂ ಶಾಸಕ ವಿನಯ ಕುಲಕರ್ಣಿ ಹೇಳಿದರು.

ಇಲ್ಲಿಗೆ ಸಮೀಪದ ಕಿತ್ತೂರ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ, ಗ್ರಾಪಂ ನೋಡಲ್ ಅಧಿಕಾರಿಗಳೊಂದಿಗೆ ಬರ ಪರಿಸ್ಥಿತಿ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ತಾಲೂಕಿನ ಪ್ರತಿ ಎರಡರಿಂದ ಮೂರು ಗ್ರಾಮ ಪಂಚಾಯಿತಿಗಳಿಗೆ ತಾಲೂಕು ಮಟ್ಟದ ಓರ್ವ ಅಧಿಕಾರಿಯನ್ನು ಗ್ರಾಪಂ ಮಟ್ಟದಲ್ಲಿ ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಗ್ರಾಮ ಪಂಚಾಯತ್‌ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಗ್ರಾಮಮಟ್ಟದ ಟಾಸ್ಕ್‌ಪೊರ್ಸ್ ಸಮಿತಿಗಳನ್ನು ರಚಿಸಲಾಗಿದೆ. ಇವುಗಳ ವರದಿ ಆಧಾರದ ಮೇಲೆ ತುರ್ತು ಕ್ರಮ ನಿರ್ವಹಿಸಲಾಗುತ್ತದೆ ಎಂದರು.

ಧಾರವಾಡ ಗ್ರಾಮೀಣ ಮತಕ್ಷೇತ್ರ ಹಾಗೂ ಕಲಘಟಗಿ ಮತಕ್ಷೇತ್ರಯ 121 ಹಳ್ಳಿಗಳು ತಾಲೂಕಿನಲ್ಲಿ ಬರುತ್ತವೆ. ಎಲ್ಲ ಹಳ್ಳಿಗಳಿಗೂ ಕುಡಿಯುವ ನೀರಿನ ತೊಂದರೆ ಆಗದಂತೆ ಈಗಾಗಲೇ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಪ್ರತಿ ಗ್ರಾಮಕ್ಕೆ ಮೂರು ಖಾಸಗಿ ಬೋರ್‌ವೆಲ್‌ಗಳನ್ನು ಗುರುತಿಸಿ, ಮಾಲೀಕರೊಂದಿಗೆ ಚರ್ಚಿಸಿ, ಒಪ್ಪಂದ ಮಾಡಿಕೊಳ್ಳಲಾಗಿದೆ. ಫೆಬ್ರವರಿ 1ರಿಂದ ಧಾರವಾಡ ಗ್ರಾಮೀಣ ವಿಭಾಗದ ಹೊಸಟ್ಟಿ, ಬೇಲೂರ ಮತ್ತು ಕಲಘಟಗಿ ವಿಧಾನಸಭಾ ಮತಕ್ಷೇತ್ರ ಮುಗದ ಮತ್ತು ನಿಗದಿ ಗ್ರಾಮಗಳಿಗೆ ಬಾಡಿಗೆ ಬೋರ್‌ವೆಲ್‌ನಿಂದ ಕುಡಿಯುವ ನೀರು ಪೂರೈಸಲಾಗುತ್ತಿದೆ ಎಂದರು.

ಕುಡಿಯುವ ನೀರು, ಜಾನುವಾರುಗಳಿಗೆ ಅಗತ್ಯವಿರುವ ಮೇವು ಕುರಿತು ಟಾಸ್ಕ್ ಫೋರ್ಸ್‌ ಮಾಡುವ ಶಿಫಾರಸುಗಳನ್ನು 24 ಗಂಟೆಗಳಲ್ಲಿ ಈಡೇರಿಸಲಾಗುವುದು ಎಂದು ಶಾಸಕ ವಿನಯ ಕುಲಕರ್ಣಿ ತಿಳಿಸಿದರು.

ಪಶುಪಾಲನೆ ಇಲಾಖೆ ನೀಡಿರುವ ತಾಲೂಕಿನ ಜಾನುವಾರುಗಳ ಸಂಖ್ಯೆ ಮತ್ತು ತಾಲೂಕಿನಲ್ಲಿ ಮೇವು ಲಭ್ಯತೆ ಕುರಿತು ಗ್ರಾಮವಾರು ಸಮೀಕ್ಷೆ ಮಾಡಲಾಗಿದೆ. ಮುಂದಿನ 12 ವಾರುಗಳಿಗೆ ಆಗುವಷ್ಟು ಮೇವು ಲಭ್ಯವಿದೆ. ಆದರೂ ಈಗಾಲೇ ಮಾದನಭಾವಿ, ಧಾರವಾಡ ಎಪಿಎಂಸಿ ಮತ್ತು ಮರೇವಾಡದಲ್ಲಿ ಸುಮಾರು 10 ಟನ್ ಮೇವು ದಾಸ್ತಾನು ಮಾಡಲಾಗಿದೆ. ರೈತರು ಬೇಡಿಕೆ ಸಲ್ಲಿಸಿದಲ್ಲಿ ತಕ್ಷಣ ಪೂರೈಸಲಾಗುವುದು. ಕೃಷಿಕರಲ್ಲದ ಜಾನುವಾರು ಸಾಕಾಣಿಕೆದಾರರು ಮತ್ತು ಸಣ್ಣ, ಅತೀ ಸಣ್ಣ ರೈತರು ಮೇವು ಬೇಕು ಎಂದಲ್ಲಿ ನೀಡಲಾಗುವುದು. ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಬೇಡಿಕೆಗೆ ಅನುಗುಣವಾಗಿ ನರೇಗಾ ಕೂಲಿ ನೀಡಲಾಗುತ್ತಿದೆ. ಬರಗಾಲ ಹಿನ್ನೆಲೆಯಲ್ಲಿ ನೂರು ದಿನಗಳ ಬದಲಾಗಿ ನೂರೈವತ್ತು ದಿನಗಳ ವರೆಗೆ ನರೇಗಾ ಕೂಲಿ ಕೆಲಸ ನೀಡಲು ಕ್ರಮವಹಿಸಲಾಗಿದೆ ಎಂದರು.

ತಾಲೂಕಿನ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಅಗತ್ಯವಿದ್ದಲ್ಲಿ ಸಾರ್ವಜನಿಕರು ಸಂಪರ್ಕಿಸಲು ಧಾರವಾಡ ತಹಶಿಲ್ದಾರ ಕಚೇರಿಯಲ್ಲಿ ಸಹಾಯವಾಣಿ 0836-2233822 ಆರಂಭಿಸಲಾಗಿದೆ. ದಿನದ 24 ಗಂಟೆ ಸಹಾಯವಾಣಿ ಕರೆ ಸ್ವೀಕರಿಸಲು ಅಗತ್ಯ ಸಿಬ್ಬಂದಿ ನೇಮಿಸಲಾಗಿದೆ. ಸಾರ್ವಜನಿಕರು ಅಗತ್ಯವಿದ್ದಲ್ಲಿ ಕರೆ ಮಾಡಿ, ತಿಳಿಸಿಬಹುದು ಎಂದು ಶಾಸಕರು ತಿಳಿಸಿದರು.

ಸಭೆಯಲ್ಲಿ ಧಾರವಾಡ ತಹಸೀಲ್ದಾರ್‌ ಡಾ. ಡಿ.ಎಚ್. ಹೂಗಾರ, ತಾಪಂ ಅಧಿಕಾರಿ ಸುಭಾಸ ಸಂಪಗಾವಿ, ನರೇಗಾದ ಚಂದ್ರು ಪೂಜಾರ ಸೇರಿದಂತೆ ಕೃಷಿ, ತೋಟಗಾರಿಗೆ, ಪಶುಸಂಗೋಪನೆ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.