ಸಾರಾಂಶ
ಶಿಕ್ಷಣ ಎಂದರೆ ಕೇವಲ ಅಂಕ ಗಳಿಸಿ ತೇರ್ಗಡೆಯಾಗುವುದಕ್ಕೆ ವಿದ್ಯಾರ್ಥಿಗಳು ಸೀಮಿತವಾಗಬಾರದು. ವಿದ್ಯೆ ಕಲಿತವರಿಗೆಲ್ಲ ಕೆಲಸ ಸಿಗುವುದಿಲ್ಲ. ಉದ್ಯೋಗದಿಂದಲೇ ಜೀವನ ಕಟ್ಟಿಕೊಳ್ಳುತ್ತೇವೆ ಎನ್ನುವುದನ್ನು ಬಿಡಬೇಕು.
ಕುಮಟಾ:
ಅಂಕ ಗಳಿಕೆಯೊಂದೇ ಸಾಧನೆಯಲ್ಲ, ಬದಲಿಗೆ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದೂ ಮುಖ್ಯ. ಸಮಗ್ರ ವ್ಯಕ್ತಿತ್ವ ರೂಪಿಸಿಕೊಳ್ಳಲು ಶಿಕ್ಷಣದ ಜತೆಗೆ ಸಾಂಸ್ಕೃತಿಕ ಚಟುವಟಿಕೆ ಅಗತ್ಯ ಎಂದು ಪ್ರಾಚಾರ್ಯ ಸಂಘದ ಜಿಲ್ಲಾಧ್ಯಕ್ಷ ಸತೀಶ ನಾಯ್ಕ ಅಭಿಪ್ರಾಯಪಟ್ಟರು.ಅವರು ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನ ಬಿ.ಕೆ. ಭಂಡಾರಕರ್ಸ್ ಸರಸ್ವತಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ ಹಂತದ ಜಿಲ್ಲಾಮಟ್ಟದ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಎಂದರೆ ಕೇವಲ ಅಂಕ ಗಳಿಸಿ ತೇರ್ಗಡೆಯಾಗುವುದಕ್ಕೆ ವಿದ್ಯಾರ್ಥಿಗಳು ಸೀಮಿತವಾಗಬಾರದು. ವಿದ್ಯೆ ಕಲಿತವರಿಗೆಲ್ಲ ಕೆಲಸ ಸಿಗುವುದಿಲ್ಲ. ಉದ್ಯೋಗದಿಂದಲೇ ಜೀವನ ಕಟ್ಟಿಕೊಳ್ಳುತ್ತೇವೆ ಎನ್ನುವುದನ್ನು ಬಿಡಬೇಕು. ವೈಯಕ್ತಿಕವಾಗಿ ಜೀವನ ಕಟ್ಟಿಕೊಳ್ಳಲು ಅನೇಕ ದಾರಿಗಳಿವೆ. ವಿದ್ಯೆಯ ಜತೆಗೆ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಂಡು ವಿವೇಕ ಬೆಳೆಸಿಕೊಂಡು, ಬುದ್ಧಿವಂತರಾಗಿ ದೇಶದ ವಿಚಾರ ತಿಳಿದುಕೊಳ್ಳಬೇಕು. ಸ್ವಾತಂತ್ರ್ಯ ನಂತರದಲ್ಲಿ ದೇಶದಲ್ಲಿ ಏನೆಲ್ಲ ಅಗುತ್ತಿದೆ? ನಮ್ಮ ಜವಾಬ್ದಾರಿಗಳೇನು? ಎಂಬುದನ್ನು ಅರಿತು, ತಾವು ಕಲಿತ ಶಿಕ್ಷಣ ಸಂಸ್ಥೆ ಮತ್ತು ಪೋಷಕರಿಗೆ ಕೀರ್ತಿ ತರುವ ನಿಟ್ಟಿನಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದರು.ಕಲಭಾಗ ಪಂಚಾಯಿತಿ ಅಧ್ಯಕ್ಷ ಮಂಜುನಾಥ ನಾಯ್ಕ ಮಾತನಾಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಂಕಣ ಟ್ರಸ್ಟ್‌ನ ವಿಶ್ವಸ್ಥ ರಮೇಶ ಪ್ರಭು ಅವರು, ಇಂದು ಎಲ್ಲರಿಗೂ ಪರೀಕ್ಷೆಯ ಅಂಕ ಗಳಿಕೆಯೇ ಮುಖ್ಯವಾಗಿದೆ. ಆಟೋಟ, ಸಾಂಸ್ಕೃತಿಕ ಚಟುವಟಿಕೆ ಬೇಡವಾಗಿದೆ. ಯುವಕರು ಆತ್ಮಹತ್ಯೆಯಂತಹ ಹೇಯ ಮಾರ್ಗ ಅನುಸರಿಸುತ್ತಿದ್ದಾರೆ. ಇದರಿಂದ ಹೊರಬರಬೇಕಾದರೆ ಇಂತಹ ಚಟುವಟಿಕೆಯಲ್ಲಿ ಹೆಚ್ಚು ಭಾಗವಹಿಸಬೇಕು ಎಂದರು.
ವಿಧಾತ್ರಿ ಅಕಾಡೆಮಿಯ ಸಹ ಸಂಸ್ಥಾಪಕ ಗುರುರಾಜ ಶೆಟ್ಟಿ, ಕಲಭಾಗ ಪಂಚಾಯಿತಿ ಸದಸ್ಯರಾದ ರೂಪಾ ಭಂಡಾರಿ, ಮಂಜುಳಾ ಮುಕ್ರಿ, ಡಾ. ಸುಲೋಚನಾ ರಾವ್ ಬಿ. ಪ್ರಾಚಾರ್ಯ ಕಿರಣ ಭಟ್ಟ, ಉಪ ಪ್ರಾಚಾರ್ಯೆ ಸುಜಾತಾ ಹೆಗಡೆ ಇದ್ದರು. ಭವ್ಯಾ ಸಂಗಡಿಗರು ಪ್ರಾರ್ಥಿಸಿದರು. ಕಿರಣ ಭಟ್ಟ ಸ್ವಾಗತಿಸಿದರು. ಉಪನ್ಯಾಸಕ ಪದ್ಮನಾಭ ಪ್ರಭು ವಂದಿಸಿದರು. ಉಪನ್ಯಾಸಕ ಚಿದಾನಂದ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು