ಕೊಪ್ಪಳ ಗವಿಮಠದಲ್ಲಿ ಐದು ಸಾವಿರ ವಿದ್ಯಾರ್ಥಿಗಳ ವಸತಿ ನಿಲಯ ಜು. 1ರಂದು ಲೋಕಾರ್ಪಣೆ

| Published : Jun 27 2024, 01:02 AM IST

ಕೊಪ್ಪಳ ಗವಿಮಠದಲ್ಲಿ ಐದು ಸಾವಿರ ವಿದ್ಯಾರ್ಥಿಗಳ ವಸತಿ ನಿಲಯ ಜು. 1ರಂದು ಲೋಕಾರ್ಪಣೆ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ಸಿದ್ಧಗಂಗಾಮಠದ ಆನಂತರ ರಾಜ್ಯದಲ್ಲಿಯೇ ಅತ್ಯಂತ ದೊಡ್ಡ, ಉಚಿತ ಪ್ರಸಾದ ಮತ್ತು ವಸತಿ ನಿಲಯವನ್ನು ಕೊಪ್ಪಳ ಶ್ರೀ ಗವಿಮಠದ ಆವರಣದಲ್ಲಿ ನಿರ್ಮಾಣ ಮಾಡಲಾಗಿದ್ದು, ಜು. 1ರಂದು ಲೋಕಾರ್ಪಣೆಯಾಗಲಿದೆ.

- 4500 ವಿದ್ಯಾರ್ಥಿಗಳಿಗೆ ಪ್ರಸಕ್ತ ವರ್ಷ ಆಶ್ರಯ

- ಸಿದ್ದಗಂಗಾ ಮಠದ ನಂತರ ಬಹುದೊಡ್ಡ ಹಾಸ್ಟೆಲ್

- ವಿದ್ಯಾರ್ಥಿಗಳಿಗೆ ಸುಸಜ್ಜಿತ ವ್ಯವಸ್ಥೆ

ಕನ್ನಡಪ್ರಭ ವಾರ್ತೆ ಕೊಪ್ಪಳ

ಶ್ರೀ ಸಿದ್ಧಗಂಗಾಮಠದ ಆನಂತರ ರಾಜ್ಯದಲ್ಲಿಯೇ ಅತ್ಯಂತ ದೊಡ್ಡ, ಉಚಿತ ಪ್ರಸಾದ ಮತ್ತು ವಸತಿ ನಿಲಯವನ್ನು ಕೊಪ್ಪಳ ಶ್ರೀ ಗವಿಮಠದ ಆವರಣದಲ್ಲಿ ನಿರ್ಮಾಣ ಮಾಡಲಾಗಿದ್ದು, ಜು. 1ರಂದು ಲೋಕಾರ್ಪಣೆಯಾಗಲಿದೆ. ಸುಮಾರು ನಾಲ್ಕೂವರೆ ಸಾವಿರ ವಿದ್ಯಾರ್ಥಿಗಳಿಗೆ ಪ್ರಸಕ್ತ ವರ್ಷ ಆಶ್ರಯ ನೀಡಲಾಗುತ್ತದೆ.

2007ರಲ್ಲಿ ಸುಮಾರು 2 ಸಾವಿರ ವಿದ್ಯಾರ್ಥಿಗಳ ವಸತಿ ನಿಲಯ ನಿರ್ಮಾಣಕ್ಕೆ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಶ್ರೀ ಅಡಿಗಲ್ಲು ಹಾಕಿದರು. ಒಂದೇ ವರ್ಷದಲ್ಲಿ ಹಾಸ್ಟೆಲ್ ನಿರ್ಮಾಣಕಾರ್ಯವನ್ನು ಪೂರ್ಣಗೊಳಿಸಿ, 2008ರಲ್ಲಿ ಪುನಃ ಶ್ರೀ ಸಿದ್ದಗಂಗಾ ಶ್ರೀಗಳಿಂದಲೇ ಉದ್ಘಾಟಿಸಲಾಯಿತು.

ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇರುವುದರಿಂದ ಐದು ಸಾವಿರ ವಿದ್ಯಾರ್ಥಿಗಳು ವಸತಿ ಮಾಡಬಹುದಾದ ಹಾಸ್ಟೆಲ್ ನಿರ್ಮಾಣ ಮಾಡಲು ತೀರ್ಮಾನಿಸಿ, ಇರುವ ಕಟ್ಟಡದ ಅಂತಸ್ತು ಹೆಚ್ಚಳ ಮಾಡಿ, ಪೂರ್ಣಗೊಳಿಸಲಾಗಿದೆ. ಬರೋಬ್ಬರಿ 5 ಸಾವಿರ ವಿದ್ಯಾರ್ಥಿಗಳ ಹಾಸ್ಟೆಲ್ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಜು. 1ರಂದು ಲೋಕಾರ್ಪಣೆಯಾಗಲಿದೆ.

ಇತಿಹಾಸ:

ಶ್ರೀ ಗವಿಸಿದ್ಧೇಶ್ವರ ಮಠದ 16ನೇ ಪಿಠಾಧಿಪತಿಗಳಾಗಿದ್ದ ಮರಿಶಾಂತವೀರ ಶ್ರೀಗಳು ಕಾಶಿಯಲ್ಲಿ ಓದಿ, ಸಂಸ್ಕೃತ ಪಂಡಿತರಾಗಿದ್ದರು. ಹೀಗೆ ಕಾಶಿಯಲ್ಲಿ ಕಲಿತುಬಂದ ಶ್ರೀಗಳು ನಾನು ಕಾಶಿಯಲ್ಲಿ ಪಂಡಿತನಾಗಿದ್ದರೂ ನನ್ನ ನಾಡಿನ ಮಕ್ಕಳು ಅಕ್ಷರ ಬರದಿಂದ ಬಳಲುತ್ತಿದ್ದಾರೆ ಎಂದು ಕೊರಗಿ, 1951ರಲ್ಲಿ ಗವಿಸಿದ್ಧೇಶ್ವರ ಪ್ರೌಢಶಾಲೆಯ ಜತೆಗೆ ಹಾಸ್ಟೆಲ್ ಪ್ರಾರಂಭಿಸಿದರು. ತಾವೆ ಖುದ್ದು ಆಯುರ್ವೇದ ಶಿಕ್ಷಣ ನೀಡಿ, ಹಳ್ಳಿಯಲ್ಲಿ ವೈದ್ಯಕೀಯ ಸೇವೆ ಸಲ್ಲಿಸಲು ಅಣಿಮಾಡಿದರು.

ಅಂದಿನಿಂದ ಪ್ರಾರಂಭವಾದ ಹಾಸ್ಟೆಲ್ ಪರಂಪರೆ ಬೆಳೆದು ನಿಂತಿದೆ. ನಂತರ 17ನೇ ಪೀಠಾಧಿಪತಿಗಳಾದ ಶ್ರೀ ಶಿವಶಾಂತವೀರ ಮಹಾಸ್ವಾಮಿಗಳು ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಸ್ಥಾಪಿಸಿದರು.

2002ರಲ್ಲಿ ಪಟ್ಟಾಧಿಕಾರ ವಹಿಸಿಕೊಂಡ ಗವಿಸಿದ್ಧೇಶ್ವರ ಶ್ರೀಗಳು ಪ್ರಸಾದ ಮತ್ತು ವಸತಿ ನಿಲಯದಲ್ಲಿ ಕ್ರಾಂತಿಯನ್ನೇ ಪ್ರಾರಂಭಿಸಿದರು. ನೂರಾರು ಇದ್ದ ಮಕ್ಕಳ ಸಂಖ್ಯೆ ಸಾವಿರಾರು ಆಯಿತು.

ಭವಿಷ್ಯದ ದಿನಗಳಲ್ಲಿ ಹತ್ತು ಸಾವಿರ ವಿದ್ಯಾರ್ಥಿಗಳ ಉಚಿತ ವಸತಿ ಮತ್ತು ಪ್ರಸಾದ ನಿಲಯ ನಿರ್ಮಾಣಕ್ಕೆ ಬೃಹತ್ ಕಟ್ಟಡ ನಿರ್ಮಾಣದ ಗುರಿಯನ್ನು ಹಾಕಿಕೊಂಡು ಈಗಾಗಲೇ ಕಾರ್ಯಗತವಾಗಿದ್ದಾರೆ.

ಬಡತನದಿಂದ ಯಾವೊಬ್ಬ ವಿದ್ಯಾರ್ಥಿಯೂ ಶಿಕ್ಷಣದಿಂದ ವಂಚಿತವಾಗಬಾರದು ಎನ್ನುವ ಧ್ಯೇಯದೊಂದಿಗೆ ಈಗಿನ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಉಚಿತ ವಸತಿ ಮತ್ತು ಪ್ರಸಾದ ನಿಲಯದ ಸಾಮರ್ಥ್ಯವನ್ನು ವರ್ಷದಿಂದ ವರ್ಷ ಹೆಚ್ಚಳ ಮಾಡುತ್ತಲೇ ಇದ್ದಾರೆ.

ಸೌಲಭ್ಯಗಳು:

130 ಸುಸಜ್ಜಿತ ಕೊಠಡಿಗಳು

20 ಸುಂದರವಾದ ಡಾರ್ಮೆಟರಿಗಳು

ಆತ್ಯಾಧುನಿಕ ತಂತ್ರಜ್ಞಾನದ ಅಡುಗೆ ಕೋಣೆ

ತರಕಾರಿ ಕತ್ತರಿಸುವ ಯಂತ್ರ

ಗಂಟೆಗೆ 1500 ಚಪಾತಿ ಮಾಡುವ ಯಂತ್ರ

10 ನಿಮಿಷದಲ್ಲಿ 2 ಸಾವಿರ ಇಡ್ಲಿ ತಯಾರಿಸುವ ಸ್ಟೀಮ್ ಕುಕ್ಕಿಂಗ್

ಮಕ್ಕಳ ಆರೈಕೆಗೆ ಆಸ್ಪತ್ರೆ

ಕಂಪ್ಯೂಟರ್ ಲ್ಯಾಬ್

ಆಡಿಟೋರಿಯಮ್ ಹಾಲ್

ಶುದ್ಧ ಕುಡಿಯುವ ನೀರು

ಆತ್ಯಾಧುನಿಕ ಶೌಚಾಲಯ ಹಾಗೂ ಸ್ನಾನಗೃಹಗಳು ನೀಡೋಣ ತಿಂಗಳಿಗೆ ನೂರು ರುಪಾಯಿ

ಶ್ರೀ ಗವಿಮಠದಲ್ಲಿ ಈಗಾಗಲೇ ಇರುವ ಐದು ಸಾವಿರ ವಿದ್ಯಾರ್ಥಿಗಳ ನಿಲಯ ಮತ್ತು ಭವಿಷ್ಯದ ಯೋಜನೆಗಳಿಗೆ ದೇಣಿಗೆ ನೀಡಲು ಆಟೋ ಡೆಬಿಟ್ ವರ್ಗಾವಣೆ ಪದ್ಧತಿ ಪ್ರಾರಂಭಿಸಲಾಗಿದೆ. ನೀಡೋಣ ತಿಂಗಳಿಗೆ ನೂರು ರುಪಾಯಿ ಹಣ, ತೀರಿಸೋಣ ಮಾನವ ಜನ್ಮದ ಋಣ ಎನ್ನುವ ಘೋಷವಾಕ್ಯದೊಂದಿಗೆ ಅಕ್ಷರ ಜೋಳಿಗೆ ಕಾರ್ಯಕ್ರಮಕ್ಕೂ ಜು. 1ರಂದು ಚಾಲನೆ ನೀಡಲಾಗುತ್ತದೆ.