ಕನ್ನಡಪ್ರಭ ವಾರ್ತೆ ಜಗಳೂರು

ಪಟ್ಟಣದಲ್ಲಿ ಬೃಹತ್ ಬಸವ ಭವನ ನಿರ್ಮಾಣ ಹಾಗೂ ಜಗಜ್ಯೋತಿ ಬಸವೇಶ್ವರರ ಪುತ್ಥಳಿ ಸ್ಥಾಪನೆಗೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು.

ತಹಸೀಲ್ದಾರ್ ಕಚೇರಿಯಲ್ಲಿ ಸೋಮವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಸುಮಾರು 900 ವರ್ಷಗಳ ಹಿಂದೆ ಸಮಾನತೆಯ ಸಂದೇಶ ಸಾರಿದ ಬಸವಣ್ಣನವರ ತತ್ವಗಳು ಇಂದಿನ ಯುವಜನತೆಗೆ ಅತ್ಯಗತ್ಯವಾಗಿವೆ. ಈ ಹಿನ್ನೆಲೆಯಲ್ಲಿ ಪಟ್ಟಣದ ಪ್ರಮುಖ ವೃತ್ತದಲ್ಲಿ ಪುತ್ಥಳಿ ಸ್ಥಾಪನೆ ಹಾಗೂ ಸುಸಜ್ಜಿತ ಬಸವ ಭವನ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಸಮಾಜದ ಮುಖಂಡರು ಒಗ್ಗೂಡಿ ಚರ್ಚಿಸಿ ಶೀಘ್ರವೇ ಕಾಮಗಾರಿಗೆ ಚಾಲನೆ ನೀಡಲು ಸಿದ್ಧವಿದ್ದೇವೆ ಎಂದು ಹೇಳಿದರು.

ಬಸವ ಜಯಂತಿಯನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸದೆ ಸರ್ವಧರ್ಮೀಯರು ಸೇರಿ ಆಚರಿಸಬೇಕು. ಮುಂದಿನ ವರ್ಷ ಸಿರಿಗೆರೆಯ ತರಳಬಾಳು ಶ್ರೀಗಳು ಹಾಗೂ ಕೊಪ್ಪಳದ ಗವಿಸಿದ್ಧೇಶ್ವರ ಶ್ರೀಗಳನ್ನು ಆಹ್ವಾನಿಸಿ ವಿಜೃಂಭಣೆಯಿಂದ ಜಯಂತಿ ನಡೆಸಲು ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.


ತಹಸೀಲ್ದಾರ್ ಸೈಯದ್ ಕಲೀಂಉಲ್ಲಾ, ಕಾಯಕವೇ ಕೈಲಾಸ ಎಂಬ ಬಸವಣ್ಣನವರ ತತ್ವ ಕಾರ್ಯಕ್ಷೇತ್ರದಲ್ಲೂ ಪ್ರತಿಫಲಿಸಬೇಕು ಎಂದು ಹೇಳಿದರು. ಅಖಿಲ ವೀರಶೈವ ಲಿಂಗಾಯತ ಸಂಘದ ಅಧ್ಯಕ್ಷ ಅಜ್ಜಯ್ಯ ನಾಡಿಗೇರ್ ಸೇರಿ ಹಲವರು ಮಾತನಾಡಿದರು.

ಇದಕ್ಕೂ ಮೊದಲು ಪಟ್ಟಣದ ಹೊರಕೆರೆ ಈಶ್ವರ ದೇವಸ್ಥಾನದಿಂದ ಎತ್ತಿನ ಬಂಡಿ, ಟ್ರ್ಯಾಕ್ಟರ್‌ಗಳ ಮೂಲಕ ಬಸವಣ್ಣನವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಡೊಳ್ಳು-ಡ್ರಮ್‌ಗಳೊಂದಿಗೆ ಮಹಿಳೆಯರು, ಯುವಕರು ಉತ್ಸಾಹದಿಂದ ಭಾಗವಹಿಸಿದರು.

ಅಖಿಲ ವೀರಶೈವ ಲಿಂಗಾಯತ ಮುಖಂಡರಾದ ಶಿವನಗೌಡ್ರು, ದಿದ್ದಿಗಿ ಕರಿಬಸವನಗೌಡ, ಗೋಡೆ ಪ್ರಕಾಶ್‌, ರೇಖಾ, ಎಸ್.ಕೆ.ಮಂಜುನಾಥ್, ಗಡಿಮಾಕುಂಟೆ ಸಿದ್ದೇಶ್, ವೈ.ಎನ್.ಮಂಜುನಾಥ್, ವಸಂತಪ್ರಕಾಶ್, ಎನ್.‌ ಎಸ್.ರಾಜು,ಗಂಗಮ್ಮ ‌, ಬಿ.ಮಹೇಶ್ವರಪ್ಪ ಇತರರು ಇದ್ದರು.