ರಾಜ್ಯ ಸರ್ಕಾರ ಜೂನ್ 9ರೊಳಗೆ ಪಾಲಿಕೆ ರಚನೆ ಮಾಡಲು ಬೇಕಾದ ಕ್ರಮ ಕೈಗೊಳ್ಳಬೇಕು. ಇಲ್ಲದೇ ಹೋದಲ್ಲಿ ಧಾರವಾಡ ಬಂದ್ ಅಂತಹ ಕಠಿಣ ನಿರ್ಧಾರಕ್ಕೆ ಬರಬೇಕಾಗುತ್ತದೆ.
ಧಾರವಾಡ:
ಪ್ರತ್ಯೇಕ ಪಾಲಿಕೆಯ ಹೋರಾಟದ 15ನೇ ದಿನದ ಭಾಗವಾಗಿ ಶುಕ್ರವಾರ ಹೋರಾಟದ ವೇದಿಕೆಯಿಂದ ಬೃಹತ್ ಬೈಕ್ ರ್‍ಯಾಲಿ ಜರುಗಿತು.ಪಾಲಿಕೆ ಕಚೇರಿ ಎದುರಿಗೆ ಹತ್ತಾರು ಬೈಕ್‌ಗಳ ಮೂಲಕ ನಗರದ ವಿವಿಧೆಡೆ ಸಂಚರಿಸಿ ಪ್ರತ್ಯೇಕ ಪಾಲಿಕೆ ರಚನೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಯಿತು. ಹೋರಾಟದ ನೇತೃತ್ವ ವಹಿಸಿದ್ದ ಬಿ.ಡಿ. ಹಿರೇಮಠ ಹಾಗೂ ಇತರರು ತಮಟೆ ಬಾರಿಸುವ ಮೂಲಕ ಬೈಕ್ ರ್‍ಯಾಲಿಗೆ ಚಾಲನೆ ನೀಡಿದರು.
ಹೋರಾಟಗಾರರು ನೀಡಿದ ಗಡುವಿನೊಳಗೆ ರಾಜ್ಯಪಾಲರು ತಮ್ಮ ಪಾಲಿನ ಕಾರ್ಯ ಪೂರ್ಣಗೊಳಿಸಿದ್ದಾರೆ. ಈಗ ರಾಜ್ಯ ಸರ್ಕಾರ ಜೂನ್ 9ರೊಳಗೆ ಪಾಲಿಕೆ ರಚನೆ ಮಾಡಲು ಬೇಕಾದ ಕ್ರಮ ಕೈಗೊಳ್ಳಬೇಕು. ಇಲ್ಲದೇ ಹೋದಲ್ಲಿ ಧಾರವಾಡ ಬಂದ್ ಅಂತಹ ಕಠಿಣ ನಿರ್ಧಾರಕ್ಕೆ ಬರಬೇಕಾಗುತ್ತದೆ ಎಂದು ಹೋರಾಟಗಾರರು ಎಚ್ಚರಿಸಿದರು. ಗುರುರಾಜ ಹುಣಸೀಮರದ, ಮೋಹನ ರಾಮದುರ್ಗ ಸೇರಿದಂತೆ 50ಕ್ಕೂ ಹೆಚ್ಚು ಹೋರಾಟಗಾರರು ಬೈಕ್ ರ್‍ಯಾಲಿ ನಡೆಸಿದರು.ಇದಕ್ಕೂ ಮುಂಚೆ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜದ ವತಿಯಿಂದ ಸಮಾಜದ ಮುಖಂಡರು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಬಳಿಕ ಹೋರಾಟದ ವೇದಿಕೆಗೆ ಬಂದ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಪದಾಧಿಕಾರಿಗಳು ಬೆಂಬಲಿಸಿದರು. ಗಂಗಾಧರ ಬಡಿಗೇರ ಮಾತನಾಡಿ, ಧಾರವಾಡ ನಗರದ ಜನರ ಈ ಬೇಡಿಕೆಯು ನ್ಯಾಯಯುತವಾಗಿದ್ದು ಆಡಳಿತಾತ್ಮಕ ದೃಷ್ಟಿಯಿಂದ ಪ್ರತಿಯೊಂದು ಕೆಲಸಕ್ಕೂ ಹುಬ್ಬಳ್ಳಿಗೆ ಅಲೆಯುವಂತಾಗಿದೆ. ಆದ್ದರಿಂದ ಜನರ ಭಾವನೆಗೆ ಸರ್ಕಾರ ಒಮ್ಮತ ನೀಡಬೇಕೆಂದರು. ಭುವನ ಬಳ್ಳಾರಿ, ಶರಣಬಸವ ಗೋನವಾರ, ಮಧುಲತಾ ಗೌಡರ, ಭವಾನಿ ಶಂಕರ್ ಎಸ್ ಗೌಡ ಇದ್ದರು.