ನಿರುದ್ಯೋಗಿಗಳನ್ನು ಆಕರ್ಷಿಸಿದ ಬೃಹತ್ ಉದ್ಯೋಗ ಮೇಳ

| Published : Oct 19 2024, 12:28 AM IST / Updated: Oct 19 2024, 12:29 AM IST

ಸಾರಾಂಶ

‘ಉದ್ಯೋಗದ ಹುಡುಕಾಟದಲ್ಲಿರುವವರಿಗೆ ಉದ್ಯೋಗ ಮೇಳ ಲಾಭದಾಯಕವಾಗಿದೆ. ನಾನು ಬಿಸಿಎ ಮಾಡಿ ಉದ್ಯೋಗದ ಹುಡುಕಾಟದಲ್ಲಿದ್ದೇನೆ. ಕೆಲವು ಕಂಪನಿಗಳಿಗೆ ವಿದ್ಯಾರ್ಹತೆಯ ವಿವರ ನೀಡಿದ್ದೇನೆ. ಉದ್ಯೋಗ ಸಿಗುವ ಭರವಸೆ ಇದೆ.’

ಕನ್ನಡಪ್ರಭ ವಾರ್ತೆ ಮಂಡ್ಯ

ಗ್ರಾಮೀಣ ಪದವೀಧರ ನಿರುದ್ಯೋಗಿಗಳ ಕೌಶಲ್ಯತೆ ಮತ್ತು ವಿದ್ಯಾರ್ಹತೆಗೆ ಪೂರಕವಾದ ಉದ್ಯೋಗಾವಕಾಶಗಳನ್ನು ದೊರಕಿಸಿಕೊಡುವ, ಮಾರ್ಗದರ್ಶನ ಮಾಡುವ ಉದ್ಯೋಗ ಮೇಳಕ್ಕೆ ನಗರದಲ್ಲಿ ಉದ್ಯೋಗಾಕಾಂಕ್ಷಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದಂತಹ ಉದ್ಯೋಗ ಮೇಳದಲ್ಲಿ ಸುಮಾರು ೧೫೦ಕ್ಕೂ ಹೆಚ್ಚು ಕಂಪನಿಯ ಪ್ರತಿನಿಧಿಗಳು ಭಾಗವಹಿಸಿದ್ದರು. ಪ್ರತಿಯೊಂದು ಸ್ಟಾಲ್ ಎದುರು ಉದ್ಯೋಗದ ಹೆಸರು, ವಿದ್ಯಾರ್ಹತೆಯನ್ನು ನಮೂದಿಸಿದ್ದರಿಂದ ನಿರುದ್ಯೋಗಿ ಪದವೀಧರರು, ಪಿಯುಸಿ, ಎಸ್‌ಎಸ್‌ಎಲ್‌ಸಿ ಪಾಸಾದವರು ತಾವು ಕೆಲಸ ಮಾಡುವುದಕ್ಕೆ ಪೂರಕವಾದ ಕಂಪನಿಗಳಿಗೆ ತಮ್ಮ ವೈಯಕ್ತಿಕ ವಿವರಗಳನ್ನು ನೀಡುತ್ತಿದ್ದರು. ಕೆಲವು ಕಂಪನಿಗಳು ವೈಯಕ್ತಿಕ ವಿವರಗಳನ್ನು ಪಡೆದು ಸಂದರ್ಶನಕ್ಕೆ ಅವಕಾಶ ಕಲ್ಪಿಸುವ ಭರವಸೆಯೊಂದಿಗೆ ಮೊಬೈಲ್ ನಂಬರ್‌ಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು.

ಕೇಂದ್ರ ಸಂಸ್ಥೆಗಳಿಂದ ಕೇವಲ ಮಾರ್ಗದರ್ಶನ:

ಉದ್ಯೋಗ ಮೇಳದಲ್ಲಿ ಎಚ್‌ಎಎಲ್, ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ, ಕೇಂದ್ರ ರೇಷ್ಮೆ ಮಂಡಳಿ, ಭಾರತೀಯ ವಾಯುಸೇನೆ, ಟೆಕ್ಸ್‌ಟೈಲ್ಸ್ ಸಚಿವಾಲಯದಿಂದ ಅಧಿಕಾರಿಗಳು, ಸಂಪನ್ಮೂಲ ವ್ಯಕ್ತಿಗಳು ಆಗಮಿಸಿದ್ದರು. ಆದರೆ, ಇವರು ಉದ್ಯೋಗದ ಕುರಿತಾಗಿ ನಿರುದ್ಯೋಗಿ ಪದವೀಧರರಿಗೆ ಮಾರ್ಗದರ್ಶನ ನೀಡುವುದಕ್ಕೆ ಸೀಮಿತರಾಗಿದ್ದರು.

ಒಂದರಿಂದ ಮೂರು ವರ್ಷದವರೆಗೆ ತಾತ್ಕಾಲಿಕವಾಗಿ ಕೆಲಸ ನೀಡುವುದರ ಕುರಿತು, ಅದಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಯಾವ ಕ್ರಮಗಳನ್ನು ಅನುಸರಿಸಬೇಕು ಎಂಬ ಕುರಿತಾದ ಮಾಹಿತಿ ನೀಡುತ್ತಿದ್ದರು. ಹುದ್ದೆಗಳ ನೇಮಕಕ್ಕೆ ಅರ್ಜಿ ಕರೆದಾಗ ವಿದ್ಯಾರ್ಹತೆ, ಪ್ರವೇಶ ಪರೀಕ್ಷೆ, ತರಬೇತಿ ಸೇರಿದಂತೆ ಇನ್ನುಳಿದ ಪ್ರಕ್ರಿಯೆಗಳ ಬಗ್ಗೆ ಮಾಹಿತಿಯೊಂದಿಗೆ ಕರಪತ್ರಗಳನ್ನು ನೀಡುತ್ತಿದ್ದರು.

ಬೆಂಗಳೂರು ಕೇಂದ್ರಿತ ಕಂಪನಿಗಳು ಹೆಚ್ಚು:

ಎಸ್ಸೆಸ್ಸೆಲ್ಸಿ, ಪಿಯುಸಿ, ಡಿಪ್ಲೋಮಾ, ಐಟಿಐ, ಪದವೀಧರರು, ಬಿಇ ಪದವೀಧರ ನಿರುದ್ಯೋಗಿಗಳಿಗೆ ಬೇಕಾದ ಉದ್ಯೋಗಗಳನ್ನು ದೊರಕಿಸುವುದಕ್ಕೆ ಬೆಂಗಳೂರು ಕೇಂದ್ರೀಕೃತವಾದ ಹಲವಾರು ಕಂಪನಿಗಳು ಭಾಗವಹಿಸಿದ್ದವು. ಈ ಕಂಪನಿಗಳಲ್ಲಿ ಆರಂಭದ ವೇತನ ೧೮ ಸಾವಿರ ರು.ನಿಂದ ೨೦ ಸಾವಿರ ರು.ವರೆಗೆ ಇತ್ತು. ಮಾರ್ಕೆಟಿಂಗ್ ಮ್ಯಾನೇಜರ್, ಸರ್ವೀಸ್ ಮ್ಯಾನೇಜರ್, ಬ್ಯಾಂಕುಗಳಲ್ಲಿ ವಿಮಾ ಪ್ರತಿನಿಧಿಗಳು, ಫಿಟ್ಟರ್, ಎಲೆಕ್ಟ್ರಿಕಲ್, ಎಲೆಕ್ಟ್ರಿಕಲ್ ಮೆಕ್ಯಾನಿಕ್, ಎಲೆಕ್ಟ್ರಿಕಲ್ ಇನ್‌ಸ್ಟ್ರುಮೆಂಟೇಷನ್ ಹೀಗ ವಿವಿಧ ಮಾದರಿಯ ಕೆಲಸಗಳಿಗೆ ನಿರುದ್ಯೋಗಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಪಡೆಯಲಾಗುತ್ತಿತ್ತು.

ಕೌಶಲ್ಯವಂತರ ಕೊರತೆ:

ಶಾಹಿ ಎಕ್ಸ್‌ಪೋರ್ಟ್ ಕಂಪನಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಅಲ್ಲದೆ, ಶ್ರೀರಂಗಪಟ್ಟಣ, ಗೆಜ್ಜಲಗೆರೆ, ಮೈಸೂರು ವ್ಯಾಪ್ತಿಯಲ್ಲಿರುವ ಗಾರ್ಮೆಂಟ್ಸ್‌ಗಳಲ್ಲಿ ಕೆಲಸ ನಿರ್ವಹಿಸಲು ೫೦ ಹುದ್ದೆಗಳು ಖಾಲಿ ಇವೆ. ವೇತನ ೨೦ ಸಾವಿರ ರು.ನಿಂದ ೨೫ ಸಾವಿರ ರು.ವರೆಗೆ ಇದೆ. ಪುರುಷರಿಗೆ ವಿವಿಧ ಮಾದರಿಯ ಹೊಲಿಗೆ ಯಂತ್ರಗಳ ರಿಪೇರಿ, ಮಹಿಳೆಯರಿಗೆ ಡಿಸೈನಿಂಗ್ ವರ್ಕ್‌ಗೆ ಸಂಬಂಧಿಸಿದ ಕೆಲಸಗಳಿದ್ದರೂ ಕೌಶಲ್ಯವಂತರು ಸಿಗುತ್ತಿಲ್ಲ ಎಂದು ಐಐಟಿ ಮ್ಯಾನೇಜರ್ ರಘು ಕನ್ನಡಪ್ರಭ ಪತ್ರಿಕೆಗೆ ಪ್ರತಿಕ್ರಿಯಿಸಿದರು.

ವೃದ್ಧರು, ರೋಗಿಗಳ ಆರೈಕೆ ಕೆಲಸ:

ವಯೋವೃದ್ಧರು, ರೋಗಿಗಳನ್ನು ಆರೈಕೆ ಮಾಡುವ ಕೆಲಸಕ್ಕೆ ಅರ್ಹರನ್ನು ನೇಮಕ ಮಾಡಿಕೊಳ್ಳುವುದಕ್ಕೆ ಗ್ಲೋಬಲ್ ಹೆಲ್ತ್‌ಕೇರ್ ಸಂಸ್ಥೆಯವರು ಮುಂದಾಗಿದ್ದರು. ಪಾರ್ಟ್‌ಟೈಮ್, ಫುಲ್ ಟೈಮ್ ಸೇರಿದಂತೆ ಎರಡೂ ರೀತಿಯಲ್ಲಿ ಕೆಲಸ ಮಾಡುವ ಅವಕಾಶವನ್ನು ದೊರಕಿಸಿದ್ದರು. ಅದಕ್ಕೆ ಯಾವುದೇ ವಿದ್ಯಾರ್ಹತೆಯನ್ನು ನಿಗದಿಪಡಿಸಿರಲಿಲ್ಲ. ಪುರುಷ ಮತ್ತು ಮಹಿಳೆಯರಿಗೂ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ದೊರಕಿಸಲಾಗಿತ್ತು.

ಐಟಿ- ಬಿಟಿ ಕಂಪನಿಗಳು ಇರಲಿಲ್ಲ:

ಪ್ರತಿಭಾವಂತ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಕಾಲೇಜು ಹಂತಗಳಲ್ಲೇ ನಡೆಯುವ ಪ್ಲೇಸ್‌ಮೆಂಟ್‌ನಲ್ಲೇ ಐಟಿ- ಬಿಟಿಯಂತಹ ಪ್ರತಿಷ್ಠಿತ ಕಂಪನಿಗಳಿಗೆ ನೇಮಕಗೊಂಡಿರುತ್ತಾರೆ. ಆ ಹಿನ್ನೆಲೆಯಲ್ಲಿ ಐಟಿ- ಬಿಟಿ ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸುವುದಕ್ಕೆ ಆಸಕ್ತಿಯನ್ನು ತೋರುವುದಿಲ್ಲ. ಕಡಿಮೆ ಅಂಕ ಗಳಿಸಿದ ವಿವಿಧ ವಿಭಾಗಗಳ ಇಂಜಿನಿಯರಿಂಗ್ ಪದವೀಧರರು, ಐಟಿಐ, ಡಿಪ್ಲೋಮಾ ಪದವೀಧರರು, ಬಿಎ, ಬಿಎಸ್ಸಿ ಸೇರಿದಂತೆ ಇನ್ನಿತರ ಪದವಿಗಳನ್ನು ಪಡೆದವರು ವಿದ್ಯಾರ್ಹತೆ ಇಲ್ಲದಿದ್ದರೂ ತಾವು ಓದಿದ ಕ್ಷೇತ್ರದಲ್ಲಿ ಅಥವಾ ಬೇರೊಂದು ಕ್ಷೇತ್ರದಲ್ಲಿ ಕೌಶಲ್ಯ ಗಳಿಸುವಲ್ಲಿ ಹಿಂದೆ ಬಿದ್ದಿರುವುದೂ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನುವುದು ಸಾರ್ವಜನಿಕವಾಗಿ ವ್ಯಕ್ತವಾಗುತ್ತಿರುವ ಅಭಿಪ್ರಾಯವಾಗಿದೆ.

-------

‘ಉದ್ಯೋಗದ ಹುಡುಕಾಟದಲ್ಲಿರುವವರಿಗೆ ಉದ್ಯೋಗ ಮೇಳ ಲಾಭದಾಯಕವಾಗಿದೆ. ನಾನು ಬಿಸಿಎ ಮಾಡಿ ಉದ್ಯೋಗದ ಹುಡುಕಾಟದಲ್ಲಿದ್ದೇನೆ. ಕೆಲವು ಕಂಪನಿಗಳಿಗೆ ವಿದ್ಯಾರ್ಹತೆಯ ವಿವರ ನೀಡಿದ್ದೇನೆ. ಉದ್ಯೋಗ ಸಿಗುವ ಭರವಸೆ ಇದೆ.’

- ರಕ್ಷಿತಾ, ಮಂಡ್ಯ

----

‘ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ವಿಮಾ ಪ್ರತಿನಿಧಿಯಾಗಿ ಕೆಲಸ ಮಾಡುವಂತೆ ಆಹ್ವಾನ ನೀಡಿದ್ದಾರೆ. ಆರಂಭದಲ್ಲಿ ೧೬ ಸಾವಿರ ರು. ವೇತನ ನೀಡುತ್ತೇವೆ. ಕೆಲಸ ಖಾಲಿ ಇದ್ದು ಸೋಮವಾರವೇ ಕೆಲಸಕ್ಕೆ ಸೇರಬಹುದು ಎಂದಿದ್ದಾರೆ. ಮನೆಯಲ್ಲಿ ಕೇಳಿ ನಿರ್ಧರಿಸುವೆ.’

- ನಿಸರ್ಗ, ಮಂಡ್ಯ

----

‘ನಾನು ಎಂಸಿಎ ಮಾಡಿದ್ದೇನೆ. ಹಲವು ಕಂಪನಿಗಳಿಗೆ ವಿದ್ಯಾರ್ಹತೆಯ ವಿವರ ನೀಡಿದ್ದೇನೆ. ಸಂದರ್ಶನ ಎದುರಿಸಿದ್ದೇನೆ. ಬೆಂಗಳೂರಿನಲ್ಲಿ ಕೆಲಸ ಸಿಗುವ ವಿಶ್ವಾಸವಿದೆ. ಹೋಗಲು ರೆಡಿ ಇದ್ದೇನೆ. ಕೆಲಸದ ಅನುಭವ ಪಡೆದರೆ ಉನ್ನತ ಹುದ್ದೆಗೇರಬಹುದು.’

- ಪಲ್ಲವಿ, ಮಲ್ಲನಾಯಕನಕಟ್ಟೆ

----

ನಮ್ಮ ಕಂಪನಿಯಲ್ಲಿ ಇಂಜಿನಿಯರಿಂಗ್ ವಿಭಾಗದಲ್ಲಿ ಮೆಕ್ಯಾನಿಕಲ್, ಟ್ರಿಪಲ್-ಇ ಮತ್ತು ಸಿವಿಲ್ ವಿಭಾಗದಲ್ಲಿ ಪದವಿ ಗಳಿಸಿರುವವರಿಗೆ ೨೩ ಹುದ್ದೆಗಳಿದ್ದು, ಹೆಸರುಗಳನ್ನು ದಾಖಲಿಸಿಕೊಳ್ಳಲಾಗಿದೆ. ಸಂದರ್ಶನಕ್ಕೆ ಆಹ್ವಾನಿಸಿ ನೇಮಕ ಮಾಡಿಕೊಳ್ಳಲಾಗುವುದು.

ಅಲೆಕ್ಯಾ, ಖಾಸಗಿ ಕಂಪನಿ ಪ್ರತಿನಿಧಿ

----

‘ಜೆಸಿಬಿ ಕಂಪನಿಯ ೩೦ ಮಾದರಿ ವಾಹನ ಚಲಾಯಿಸಲು ಬೇಕಾದ ತರಬೇತಿ ನೀಡಿ ಸಂಬಂಧಿಸಿದ ಕಂಪನಿಗಳಲ್ಲಿ ಉದ್ಯೋಗ ದೊರಕಿಸುವುದು ಅಥವಾ ಸ್ವಯಂ ಉದ್ಯೋಗ ಕಂಡುಕೊಳ್ಳುವುದಕ್ಕೆ ಪೂರಕ ಅವಕಾಶ ಕಲ್ಪಿಸಿಕೊಡಲು ಸಿದ್ಧರಿದ್ದೇವೆ.’

-ಮಮತಾ, ಎಕ್ಸಿಕ್ಯುಟೀವ್ ಅಸಿಸ್ಟೆಂಟ್, ಐಇಎಸ್‌ಸಿ ಕಂಪನಿ