ರಾಮಮಂದಿರ ಉದ್ಘಾಟನೆ ಮುನ್ನಾದಿನ ಕೊಪ್ಪಳದಲ್ಲಿ ಬೃಹತ್ ಶೋಭಾಯಾತ್ರೆ

| Published : Jan 22 2024, 02:16 AM IST

ರಾಮಮಂದಿರ ಉದ್ಘಾಟನೆ ಮುನ್ನಾದಿನ ಕೊಪ್ಪಳದಲ್ಲಿ ಬೃಹತ್ ಶೋಭಾಯಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಘವೇಂದ್ರ ಮಠದಿಂದ ಪ್ರಾರಂಭವಾದ ಶೋಭಾಯಾತ್ರೆ ಕೊಪ್ಪಳ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೇಂದ್ರೀಯ ಬಸ್ ನಿಲ್ದಾಣದ ಮುಂಭಾಗದಲ್ಲಿ ಜನಸ್ತೋಮದ ಮಧ್ಯೆ ಸಾಂಘವಾಗಿ ಸಾಗಿತು. ಜಯ ಘೋಷ ಮತ್ತು ಶ್ರೀರಾಮನಾಮದೊಂದಿಗೆ ಶೋಭಾಯಾತ್ರೆ ಪಾಲ್ಗೊಂಡಿದ್ದರು.

ಕೊಪ್ಪಳ: ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆ ನಿಮಿತ್ತ ಕೊಪ್ಪಳದಲ್ಲಿ ಬ್ರಾಹ್ಮಣ ಮಹಾಸಭೆ ಸೇರಿದಂತೆ ಶ್ರೀರಾಮನ ಭಕ್ತ ಸಮೂಹ ಜಂಟಿಯಾಗಿ ಆಯೋಜಿಸಿದ್ದ ಶೋಭಾಯಾತ್ರೆ ಪೊಲೀಸ್ ಅನುಮತಿ ನಿರಾಕರಣೆಯ ನಡುವೆಯೂ ಭಾನುವಾರ ರಾತ್ರಿ ಬೃಹತ್ ಪ್ರಮಾಣದಲ್ಲಿ ಸಡಗರ, ಸಂಭ್ರಮದಿಂದ ನಡೆಯಿತು.ನಗರದ ರಾಘವೇಂದ್ರ ಮಠದಿಂದ ಪ್ರಾರಂಭವಾದ ಶೋಭಾಯಾತ್ರೆ ಕೊಪ್ಪಳ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೇಂದ್ರೀಯ ಬಸ್ ನಿಲ್ದಾಣದ ಮುಂಭಾಗದಲ್ಲಿ ಜನಸ್ತೋಮದ ಮಧ್ಯೆ ಸಾಂಘವಾಗಿ ಸಾಗಿತು. ಜಯ ಘೋಷ ಮತ್ತು ಶ್ರೀರಾಮನಾಮದೊಂದಿಗೆ ಶೋಭಾಯಾತ್ರೆ ಪಾಲ್ಗೊಂಡಿದ್ದರು.ಬ್ರಾಹ್ಮಣ ವಿದ್ಯಾರ್ಥಿ ‌ಸದಾಚಾರ ಸದನದವರೆಗೆ ಶ್ರೀರಾಮನ ಬೃಹತ್ ಭಾವಚಿತ್ರ, ಮಹಿಳೆಯರ ಭಜನೆ ವಿಶೇಷ ಆಕರ್ಷಣೆಯಾಗಿರುವುದು ಕಂಡುಬಂದಿತು.

ಬೃಹತ್ ಶೋಭಾಯಾತ್ರೆಯ ನೇತೃತ್ವವನ್ನು ಸಂಸದ ಕರಡಿ ಸಂಗಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ್ ಸೇರಿದಂತೆ ಸಾವಿರಾರು ಮಹಿಳೆಯರು, ಬ್ರಾಹ್ಮಣ ಸಮುದಾಯದ ಮುಖಂಡರು ಸೇರಿದಂತೆ ಅಪಾರ ಪ್ರಮಾಣದಲ್ಲಿ ಪಾಲ್ಗೊಂಡು, ಹರ್ಷೋದ್ಘಾರ ಹಾಕಿದರು.ಅನುಮತಿ ನಿರಾಕರಣೆ: ಅಖಿಲ ಕರ್ನಾಟಕ ರಾಜ್ಯ ಬ್ರಾಹ್ಮಣ ಮಹಾಸಭಾ ಶ್ರೀರಾಮ ಮಂದಿರ ಉದ್ಘಾಟನೆ ಮುನ್ನಾ ದಿನವಾದ ಭಾನುವಾರ ಬೆಳಗ್ಗೆ ಬೈಕ್ ರ್‍ಯಾಲಿ, ಸಂಜೆ ಶೋಭಾಯಾತ್ರೆ ಆಯೋಜಿಸಿ, ಪೊಲೀಸ್ ಇಲಾಖೆಗೆ ಅನುಮತಿ ಕೋರಿತ್ತು. ಆದರೆ, ಪೊಲೀಸರು ಕಾನೂನು ಸುವ್ಯವಸ್ಥೆ ಮತ್ತು ಶಾಂತಿಯ ಕಾಪಾಡುವ ದೃಷ್ಟಿಯಿಂದ ಬೈಕ್ ರ್‍ಯಾಲಿ ಮತ್ತು ಶೋಭಾಯಾತ್ರೆಗೆ ಅನುಮತಿ ನೀಡಲು ಆಗುವುದಿಲ್ಲ ಎಂದು ಅನುಮತಿಯನ್ನು ನಿರಾಕರಿಸಿದ್ದರು. ಆದರೆ ಶೋಭಾಯಾತ್ರೆ ಮಾಡಬಹುದು ಎಂದು ಮೌಖಿಕವಾಗಿ ಹೇಳಿ, ಸಂಜೆ ಅದಕ್ಕೂ ಪುನಃ ಮೀನಮೇಷ ಎಣಿಸುತ್ತಿದ್ದುದು ಆಕ್ರೋಶಕ್ಕೆ ಕಾರಣವಾಯಿತು.ಮಾತಿನ ಚಕಮಕಿ: ಶೋಭಾಯಾತ್ರೆಗೆ ಅನುಮತಿ ನೀಡಲು ನಿರಾಕರಿಸಿದ್ದರಿಂದ ಶ್ರೀರಾಮಭಕ್ತರು ಆಕ್ರೋಶಗೊಂಡು ಶ್ರೀರಾಘವೇಂದ್ರ ಮಠದ ಬಳಿ ಜಮಾಯಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ ಅವರನ್ನೊಳಗೊಂಡಂತೆ ಇತರರು ಸ್ಥಳಕ್ಕೆ ಆಗಮಿಸಿದ್ದು, ಪೊಲೀಸರು ಮತ್ತು ಯಾತ್ರೆ ‌ಆಯೋಜಕರ ನಡುವೆ ಮಾತಿನ ಚಕಮಕಿ ನಡೆಯಿತು.ಪೊಲೀಸರ ಅನುಮತಿ ನಿರಾಕರಣೆಯನ್ನು ಲೆಕ್ಕಿಸದೇ ಶೋಭಾಯಾತ್ರೆಯನ್ನು ಪ್ರಾರಂಭಿಸಲಾಯಿತು. ಸಂಸದ ಸಂಗಣ್ಣ ಕರಡಿ ಸೇರಿದಂತೆ ಮೊದಲಾದವರು ಶೋಭಾಯಾತ್ರೆಯುದ್ದಕ್ಕೂ ಭಾಗವಹಿಸಿ, ಯಶಸ್ವಿಗೊಳಿಸಿದರು. ಪೊಲೀಸ್ ಇಲಾಖೆಯೂ ನಂತರ ಬಂದೋಬಸ್ತ್ ನೀಡುವ ಮೂಲಕ ಶಾಂತಿಯುತವಾಗಿ ಯಾತ್ರೆ ಸಂಪನ್ನವಾಗುವಂತೆ ಮಾಡುವಲ್ಲಿ ಯಶಸ್ವಿಯಾದರು.ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಡಾ. ಕೆ.ಜಿ. ಕುಲಕರ್ಣಿ, ಮಲ್ಲಾರಭಟ್ ಜೋಷಿ, ಗೋಪಾಲರಾವ್, ಎಚ್.ಬಿ. ದೇಶಪಾಂಡೆ, ರಾಘವೇಂದ್ರ ನರಗುಂದ, ಮಧುರಾ ಕರಣಂ ಸೇರಿದಂತೆ ಅನೇಕರು ನೇತೃತ್ವ ವಹಿಸಿದ್ದರು.