ಹಿಂದೂ ಮಹಾಗಣಪತಿಯ ಬೃಹತ್ ಶೋಭಾಯಾತ್ರೆ

| Published : Sep 18 2024, 01:46 AM IST

ಸಾರಾಂಶ

ಡಿಜೆ ಹಾಡಿಗೆ ಯುವಕರ ನೃತ್ಯ, ಕೇಸರಿ ಧ್ವಜಗಳೊಂದಿಗೆ ಬೈಕ್‌ಗಳ ಸುತ್ತಾಟ, ಆಟೋದಲ್ಲಿ ಜಗಜ್ಯೋತಿ ಬಸವೇಶ್ವರ, ಸ್ಥಳೀಯ ರಾಜ ಸೋಮಶೇಖರನಾಯಕ, ಕನಕದಾಸರ ಭಾವಚಿತ್ರಗಳನ್ನಿಟ್ಟು ಗಣೇಶನ ಮೆರವಣಿಗೆಗೆ ಮೆರಗು ನೀಡಿದ್ದವು.

ಹರಪನಹಳ್ಳಿ: ಕೇಸರಿ ಧ್ವಜಗಳ ಸಾಲು.. ಎಲ್ಲೆಲ್ಲೂ ಕೇಸರಿ ಶಾಲುಗಳ ಹಾರಾಟ.. ಉಚಿತ ಕುಡಿಯುವ ನೀರಿನ ವಿತರಣೆ.. ಅಲ್ಲಲ್ಲಿ ಹಾರ ಸಮರ್ಪಣೆ.. ಜಿರೋ ಟ್ರಾಫಿಕ್ .. ಒಟ್ಟಿನಲ್ಲಿ ಹಬ್ಬದ ವಾತಾವರಣ..

ಇದು ಪಟ್ಟಣದಲ್ಲಿ ವಿಎಚ್‌ಪಿ, ಭಜರಂಗದಳ, ಕೋಟೆ ಆಂಜನೇಯ ದೇವಸ್ಥಾನ ಸಮಿತಿಯವರ ಸಂಯುಕ್ತಾಶ್ರಯದಲ್ಲಿ ಕಳೆದ 11 ದಿನಗಳ ಕಾಲ ಸ್ಥಾಪನೆಯಾಗಿದ್ದ ಹಿಂದೂ ಮಹಾ ಗಣಪತಿಯ ವಿಸರ್ಜನೆಯ ದಿನ ಮಂಗಳವಾರ ಪಟ್ಟಣದಲ್ಲಿ ಕಂಡು ಬಂದ ಶೋಭಾ ಯಾತ್ರೆಯ ದೃಶ್ಯ.ಕೋಟೆ ಆಂಜನೇಯ ದೇವಸ್ಥಾನದಿಂದ ಆರಂಭವಾದ ಗಣಪತಿ ವಿಸರ್ಜನೆಯ ಶೋಭಾ ಯಾತ್ರೆಗೆ ಪಟ್ಟಣದ ಹಾಲಸ್ವಾಮಿ ಮಠದ ಹಾಲಸ್ವಾಮೀಜಿ ಚಾಲನೆ ನೀಡಿದರು.

ಶೋಭಾಯಾತ್ರೆಗೂ ಮುನ್ನ ಗಣಪತಿಯ ಹಾರ ಮತ್ತು ಧ್ವಜಗಳನ್ನು ಹರಾಜು ಮಾಡಲಾಯಿತು. ಹರಿಹರ ವೃತ್ತಕ್ಕೆ ಆಗಮಿಸಿ ಅಲ್ಲಿಂದ ಹೊಸಪೇಟೆ ರಸ್ತೆ ಮೂಲಕ ಭಕ್ತ ಸಾಗರದ ಮಧ್ಯೆ ಪ್ರವಾಸಿ ಮಂದಿರ ವೃತ್ತಕ್ಕೆ ಸಂಚರಿಸಿತು. ವಿವಿಧ ಸಂಘ ಸಂಸ್ಥೆಗಳು ತಂಪು ಪಾನೀಯ ನೀಡಿ ಭಕ್ತ ಸಮೂಹವನ್ನು ವಿಶೇಷವಾಗಿ ಸ್ವಾಗತಿಸಲಾಯಿತು.

ಡಿಜಿ ಹಾಡಿಗೆ ಯುವಕರ ನೃತ್ಯ, ಕೇಸರಿ ಧ್ವಜಗಳೊಂದಿಗೆ ಬೈಕ್‌ಗಳ ಸುತ್ತಾಟ, ಆಟೋದಲ್ಲಿ ಜಗಜ್ಯೋತಿ ಬಸವೇಶ್ವರ, ಸ್ಥಳೀಯ ರಾಜ ಸೋಮಶೇಖರನಾಯಕ, ಕನಕದಾಸರ ಭಾವಚಿತ್ರಗಳನ್ನಿಟ್ಟು ಗಣೇಶನ ಮೆರವಣಿಗೆಗೆ ಮೆರಗು ನೀಡಿದ್ದವು.

ಹೊಸಬಸ್‌ ನಿಲ್ದಾಣ ವೃತ್ತದಲ್ಲಿ ಕ್ರೇನ್‌ನಿಂದ ಗಣೇಶ ಮೂರ್ತಿಗೆ ಹಾಲಸ್ವಾಮಿ ನೇತೃತ್ವದಲ್ಲಿ ವಾಲ್ಮೀಕಿ ನಗರದ ಯುವ ಜನತೆ ಪುಷ್ಪಾರ್ಚನೆಗೈದರು.

ವಿಜಯನಗರ ಎಸ್ಪಿ ಶ್ರೀಹರಿಬಾಬು ಪಟ್ಟಣದಲ್ಲಿ ಹಾಜರಿದ್ದರು. ವಿವಿಧೆಡೆ ಇರುವ ಸಿಸಿ ಕ್ಯಾಮೆರಾ ಗಳ ಕಣ್ಗಾವಲಿನಲ್ಲಿ ಡಿವೈಎಸ್ಪಿ ವೆಂಕಟಪ್ಪ ನಾಯಕ ನೇತೃತ್ವದಲ್ಲಿ ಸಿಪಿಐ ನಾಗರಾಜ ಎಂ. ಕಮ್ಮಾರ ಮಾರ್ಗದರ್ಶನದಲ್ಲಿ 20 ಪಿಎಸ್ಐಗಳು, ಐದು ವೃತ್ತ ನಿರೀಕ್ಷಕರು, 150 ಪೋಲೀಸರು ಬಂದೋಬಸ್ತ್‌ ಕೈಗೊಂಡಿದ್ಜರು. ಅಂತಿಮವಾಗಿ ಪುರಸಭೆಯವರು ಕಾಯಕದಹಳ್ಳಿ ರಸ್ತೆಯ ನಾಯಕನ ಕೆರೆ ಬಳಿ ನಿರ್ಮಿಸಿರುವ ಹೊಂಡದಲ್ಲಿ ಗಣೇಶ ವಿಸರ್ಜನೆ ಮಾಡಲಾಯಿತು.

ಬಿಜೆಪಿ ಮುಖಂಡ ಜಿ. ನಂಜನಗೌಡ, ಆರ್. ಲೋಕೇಶ, ಪುರಸಭಾ ಸದಸ್ಯ ರೊಕ್ಕಪ್ಪ, ಕಾಂಗ್ರೆಸ್‌ ಮುಖಂಡ ಕೋಡಿಹಳ್ಳಿ ಭೀಮಪ್ಪ ಸೇರಿದಂತೆ ಇತರರು ಪಾಲ್ಗೊಂಡಿದ್ದರು.