ಸಾರಾಂಶ
ರಾಮನಗರ: ಜಿಲ್ಲಾ ಕಚೇರಿಗಳ ಸಂಕೀರ್ಣದ ಆವರಣದ ಸುತ್ತಲು 100 ಮೀಟರ್ ಪ್ರದೇಶದಲ್ಲಿ ಪ್ರತಿಭಟನೆ ನಡೆಸದಂತೆ ಹೇರಿರುವ ನಿಷೇಧಾಜ್ಞೆ ತೆರವಿಗೆ ಆಗ್ರಹಿಸಿ ರೈತಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಗರದಲ್ಲಿ ಶನಿವಾರ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು.
ನಗರದ ಐಜೂರು ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಹಳೆಯ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಮಾನವ ಸರಪಳಿ ರಚಿಸಿ ರಾಜ್ಯಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಈ ಪ್ರತಿಭಟನೆಯಿಂದಾಗಿ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಸುಮಾರು 40 ನಿಮಿಷಕ್ಕೂ ಹೆಚ್ಚು ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ದಸರಾ ಹಿನ್ನೆಲೆಯಲ್ಲಿ ಮೈಸೂರು ಕಡೆಗೆ ತೆರಳುತ್ತಿದ್ದ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘದ ವಿಭಾಗೀಯ ಉಪಾಧ್ಯಕ್ಷ ಕೆ.ಮಲ್ಲಯ್ಯ, ಕಳೆದ ತಿಂಗಳು ಪ್ರಮುಖವಾದ 28 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಿದೆವು. ಆನಂತರ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟನೆಗಳಿಗೆ ಜಿಲ್ಲಾಧಿಕಾರಿಗಳು ನಿಷೇಧಾಜ್ಞೆ ಹೇರಿದ್ದಾರೆ. ಅಲ್ಲದೆ, ಪೊಲೀಸರ ಬಲ ಪ್ರಯೋಗಿಸಿ ಚಳವಳಿ ಹತ್ತಿಕ್ಕುವ ಮೂಲಕ ಜಿಲ್ಲಾಧಿಕಾರಿಗಳು ಉದ್ಧಟತನ ಪ್ರದರ್ಶಿಸುತ್ತಿದ್ದಾರೆ ಎಂದು ಟೀಕಿಸಿದರು.ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ 28 ಬೇಡಿಕೆಗಳು ಈಡೇರಿಸಲು ಸಾಧ್ಯವಾಗದ ಬೇಡಿಕೆಗಳೇನು ಅಲ್ಲ. ಒಂದು ಗಂಟೆಯೊಳಗೆ ಬಗೆಹರಿಸುವ ಬೇಡಿಕೆಗಳು ಆಗಿವೆ. ಜಿಲ್ಲಾ ಉಸ್ತುವಾರಿ ಸಚಿವರು ನಿಷೇಧಾಜ್ಞೆ ಹಿಂಪಡೆಯುವ ಸಂಬಂಧ ಕಾಲಾವಕಾಶ ಪಡೆದಿದ್ದರು. ಸೌಜನ್ಯಕ್ಕಾದರು ಅವರು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸುವ ಕೆಲಸ ಮಾಡಿಲ್ಲ. ಅ.24ರಂದು ರಾಜ್ಯಸಮಿತಿ ಸಭೆ ನಡೆಯಲಿದ್ದು, ಅಲ್ಲಿ ರಾಜ್ಯಮಟ್ಟದ ಹೋರಾಟದ ರೂಪುರೇಷೆ ಸಿದ್ದಪಡಿಸಲಾಗುವುದು ಎಂದು ಎಚ್ಚರಿಸಿದರು.
ರೈತಸಂಘದ ಮಾಗಡಿ ತಾಲೂಕು ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಮಾತನಾಡಿ, ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ರೈತ ಮುಖಂಡರನ್ನು ಕರೆದು ಚರ್ಚಿಸುವ ಕನಿಷ್ಠ ಸೌಜನ್ಯ ಕೂಡ ಜಿಲ್ಲಾಧಿಕಾರಿಗಳಿಗೆ ಇಲ್ಲ. ನಾವೆಲ್ಲಿ ವಾಸಿಸುತ್ತಿದ್ದೇವೆ ಎಂಬ ಅನುಮಾನ ಕಾಡುತ್ತಿದೆ. ಉಪ ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿಯೇ ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ನೋವಿನ ಸಂಗತಿ. ಇನ್ನಾದರು ಜಿಲ್ಲಾಧಿಕಾರಿಗಳು ತಮ್ಮ ತಪ್ಪನ್ನು ತಿದ್ದಿಕೊಳ್ಳದಿದ್ದರೆ ಈ ಜಿಲ್ಲೆಯಿಂದ ವರ್ಗಾವಣೆ ಆಗುವವರೆಗೂ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಚನ್ನಪಟ್ಟಣ ತಾಲೂಕು ಅಧ್ಯಕ್ಷ ರಾಮೇಗೌಡ ಮಾತನಾಡಿ, ಜಿಲ್ಲಾಧಿಕಾರಿಗಳ ಧೋರಣೆ ರೈತ ವಿರೋಧಿಯಾಗಿದೆ. ಕಂದಾಯ ಇಲಾಖೆ ಕಳ್ಳಕಾಕರ ಗೂಡಿನಂತಾಗಿದೆ. ಆಹಾರ ಇಲಾಖೆಯಲ್ಲಿಯೂ ಸಾವಿರಾರು ಕ್ವಿಂಟಲ್ ಅಕ್ಕಿ ಗುಳುಂ ಆಗಿದೆ. ಕಡತಗಳೇ ಮಾಯ ಆಗುತ್ತಿವೆ. ಈಗಾಗಲೇ ಅನೇಕ ಅಧಿಕಾರಿಗಳ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಇದೆಲ್ಲ ಮಾಹಿತಿ ಜಿಲ್ಲಾಧಿಕಾರಿಗಳಿಗೆ ಗೊತ್ತಿದ್ದರು ಮೌನ ವಹಿಸಿದ್ದಾರೆ ಎಂದು ಟೀಕಿಸಿದರು.
ರೈತ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಟ್ಟಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಇಲ್ಲಿವರೆಗೆ ಜಿಲ್ಲಾಧಿಕಾರಿಗಳಾಗಿ ಬಂದವರೆಲ್ಲರು ಎಲ್ಲರೊಂದಿಗೆ ಬೆರೆತು ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು. ಆದರೆ, ಈಗಿನ ಜಿಲ್ಲಾಧಿಕಾರಿಗಳು ಜನಸಾಮಾನ್ಯರು ಮತ್ತು ರೈತರಿಂದ ದೂರ ಉಳಿದು ಆಡಳಿತ ನಡೆಸುತ್ತಿದ್ದಾರೆ. ರೈತರ ಅಹವಾಲು ಆಲಿಸಲು ಕನಿಷ್ಠ ಸಭೆ ನಡೆಸುವ ಯೋಗ್ಯತೆ ಇಲ್ಲದ ಜಿಲ್ಲಾಧಿಕಾರಿಗಳು ಕಚೇರಿ ಬಾಗಿಲು ಹಾಕಿಕೊಳ್ಳಲಿ. ಅ.24ರ ನಂತರ ಉಗ್ರ ಪ್ರತಿಭಟನೆ ನಡೆಸಿ ಅವರನ್ನು ವಾಪಸ್ ಕಳುಹಿಸುವ ಕೆಲಸ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ರೈತಸಂಘ ರಾಜ್ಯ ಸಂಚಾಲಕ ಚೀಲೂರು ಮುನಿರಾಜು, ಜಿಲ್ಲಾ ಕಾರ್ಯದರ್ಶಿ ಶಿಲ್ಪಾ, ರಮ್ಯಾ, ಎಚ್.ಸಿ.ಕೃಷ್ಣಪ್ಪ, ಪುಟ್ಟಸ್ವಾಮಿ , ನಾಗರಾಜು, ಭಾಸ್ಕರ್ ಶಿವಣ್ಣ ಯಲಿಯೂರು, ರವಿ, ಸಿದ್ದರಾಜು, ಶಿವಲಿಂಗಯ್ಯ ಮತ್ತಿತರರು ಭಾಗವಹಿಸಿದ್ದರು.
12ಕೆಆರ್ ಎಂಎನ್ 3.ಜೆಪಿಜಿರಾಮನಗರದ ಐಜೂರು ವೃತ್ತದಲ್ಲಿ ರೈತಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು.