ರಾಮನಗರ: ನಗರದ ಹೋಲಿ ಕ್ರೆಸೆಂಟ್ ಸಮೂಹ ಶಿಕ್ಷಣ ಸಂಸ್ಥೆ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ಕರುನಾಡ ನಿತ್ಯೋತ್ಸವ ಕಾರ್ಯಕ್ರಮದ ಭಾಗವಾಗಿ ನಡೆದ ರಥಯಾತ್ರೆಯಲ್ಲಿ ಶಾಲಾ ಮಕ್ಕಳು ನೂರಡಿ ಉದ್ದದ ಕನ್ನಡ ಬಾವುಟದೊಂದಿಗೆ ಮೆರವಣಿಗೆ ನಡೆಸಿದರು

ರಾಮನಗರ: ನಗರದ ಹೋಲಿ ಕ್ರೆಸೆಂಟ್ ಸಮೂಹ ಶಿಕ್ಷಣ ಸಂಸ್ಥೆ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ಕರುನಾಡ ನಿತ್ಯೋತ್ಸವ ಕಾರ್ಯಕ್ರಮದ ಭಾಗವಾಗಿ ನಡೆದ ರಥಯಾತ್ರೆಯಲ್ಲಿ ಶಾಲಾ ಮಕ್ಕಳು ನೂರಡಿ ಉದ್ದದ ಕನ್ನಡ ಬಾವುಟದೊಂದಿಗೆ ಮೆರವಣಿಗೆ ನಡೆಸಿದರು.

ಕನ್ನಡ ನಾಡಿನ ಭವ್ಯತೆಯನ್ನು ಸಾರುವ ಉದ್ದೇಶದಿಂದ ಗಣ್ಯರು ಕೈಗೊಂಡ ರಥಯಾತ್ರೆ, ಸಾರ್ವಜನಿಕರ ಗಮನ ಸೆಳೆಯಿತು. ಜಗಜ್ಯೋತಿ ಬಸವೇಶ್ವರ, ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ, ಟಿಪ್ಪು ಸುಲ್ತಾನ್, ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ, ಭುವನೇಶ್ವರಿ ತಾಯಿಯನ್ನು ಒಳಗೊಂಡಂತೆ ವೇಷ ಭೂಷಣಗಳೊಂದಿಗೆ ಮಕ್ಕಳು ರಥಯಾತ್ರೆಯಲ್ಲಿ ಹೆಜ್ಜೆ ಹಾಕಿದರು.

ಶಾಲೆ ಆವರಣದಿಂದ ಪ್ರಾರಂಭಗೊಂಡ ರಥಯಾತ್ರೆ ನಗರದ ರೇಷ್ಮೆ ಮಾರುಕಟ್ಟೆ ಮಾರ್ಗವಾಗಿ ಬಸ್ ನಿಲ್ದಾಣದಿಂದ ಕೆಂಪೇಗೌಡ ವೃತ್ತದ ಮೂಲಕ ಸಂಚರಿಸಿ ಶಾಲೆಯ ಬಳಿ ಮುಕ್ತಾಯಗೊಂಡಿತು. ರಥಯಾತ್ರೆಯನ್ನು ಅನುಸರಿಸಿದ ಜಾನಪದ ಕಲಾ ತಂಡಗಳು ಪ್ರದರ್ಶನ ಹಾಗೂ ಶಾಲಾ ಮಕ್ಕಳು ನೂರು ಅಡಿ ಉದ್ದದ ಕನ್ನಡ ಬಾವುಟದೊಂದಿಗೆ ನಡೆಸಿದ ಮೆರವಣಿಗೆ ಗಮನ ಸೆಳೆಯಿತು.

ಮತ್ತೊಂದೆಡೆ ಕರುನಾಡ ನಿತ್ಯೋತ್ಸವ ವಸ್ತು ಪ್ರದರ್ಶನ ಕಾರ್ಯಕ್ರಮಕ್ಕೆ ನಗರದ ಸುತ್ತಲಿನ ಶಾಲೆಗಳ ಸುಮಾರು 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭೇಟಿ ನೀಡಿ ಮಕ್ಕಳು ಮಾಡಿರುವಂತಹ ಅಮೋಘ ಮಾದರಿಗಳನ್ನು ವೀಕ್ಷಿಸಿದರು. ಈ ಕಾರ್ಯಕ್ರಮದಲ್ಲಿ ಮಲ್ಲಕಂಬ ಪ್ರದರ್ಶನ ಸಾರ್ವಜನಿಕರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು.

ರಥಯಾತ್ರೆಯಲ್ಲಿ ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಅಲ್ತಾಫ್ ಅಹಮದ್, ಶಾಲಾಧ್ಯಕ್ಷೆ ಡಾ.ಶಾಜಿಯಾ, ಪಿಯು ವಿಭಾಗದ ಡೀನ್ ಡಾ. ಫಕ್ರುದ್ದೀನ್, ಪ್ರಾಂಶುಪಾಲರಾದ ಸ್ಪ್ಯಾನ್ಸಿ ಪಾಲ್, ಶಾಲಾ ಪ್ರಾಂಶುಪಾಲರಾದ ಯೇಸುದಾಸ್, ಉಪಪ್ರಾಂಶುಪಾಲರಾದ ಲತಾ ಆನಂದ್ ಮತ್ತಿತರರು ಪಾಲ್ಗೊಂಡಿದ್ದರು.

8ಕೆಆರ್ ಎಂಎನ್ 1.ಜೆಪಿಜಿ

ರಾಮನಗರದ ಹೋಲಿ ಕ್ರೆಸೆಂಟ್ ಸಮೂಹ ಶಿಕ್ಷಣ ಸಂಸ್ಥೆಯು ಕನ್ನಡ ರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ಕರುನಾಡ ನಿತ್ಯೋತ್ಸವ ಕಾರ್ಯಕ್ರಮದ ಭಾಗವಾಗಿ ನಡೆದ ರಥಯಾತ್ರೆಯಲ್ಲಿ ಶಾಲಾ ಮಕ್ಕಳು ಸುಮಾರು ನೂರು ಅಡಿ ಉದ್ದದ ಕನ್ನಡ ಬಾವುಟದೊಂದಿಗೆ ಮೆರವಣಿಗೆ ನಡೆಸಿದರು.