ಕನ್ನಡಪ್ರಭ ವಾರ್ತೆ ಬೆಂಗಳೂರು:
ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ಬೆಂಗಳೂರಿನ ಬಸವನಗುಡಿಯ ವೈಸ್ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ನೇಮಕಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದಿಸಿದ್ದಾರೆ.ತಮ್ಮ ಎಕ್ಸ್ ಖಾತೆಯಲ್ಲಿ ಶುಭಾಶಯ ಸಂದೇಶ ಹಂಚಿಕೊಂಡಿರುವ ಮುಖ್ಯಮಂತ್ರಿಯವರು, ವೈಸ್ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ನಮ್ಮ ಬೆಂಗಳೂರಿನ ಹೆಮ್ಮೆಯ ಪುತ್ರ, ವಿಜಯಪುರದ ಸೈನಿಕ ಶಾಲೆಯ ವಿದ್ಯಾರ್ಥಿಯೊಬ್ಬರು ಅತ್ಯಂತ ಉನ್ನತ ಹುದ್ದೆಗೆ ತಲುಪಿರುವುದು ಐತಿಹಾಸಿಕ. ಕರ್ನಾಟಕದಿಂದ ಭಾರತೀಯ ನೌಕಾಪಡೆಯ ಅತ್ಯುನ್ನತ ಹುದ್ದೆಗೆ ಏರುವವರೆಗಿನ ಅವರ ಪಯಣವೂ ಯುವ ಸಮುದಾಯಕ್ಕೆ ಸ್ಪೂರ್ತಿ ನೀಡುವ ಜೊತೆಗೆ ರಾಜ್ಯಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಮೇ 31ರಂದು ಅಧಿಕಾರ ಸ್ವೀಕರಿಸುತ್ತಿರುವ ಅವರ ಹೊಸ ಜವಾಬ್ದಾರಿಯ ಪಯಣದಲ್ಲಿ ಯಶಸ್ಸು ಸಿಗಲಿ ಎಂದು ಶುಭ ಹಾರೈಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬಾಲ್ಯ ಬೆಂಗಳೂರು, ಓದು ವಿಜಯಪುರ:ಕೃಷ್ಣ ಸ್ವಾಮಿನಾಥನ್ ಅವರು ಬಸವನಗುಡಿಯ ಎನ್. ಆರ್ ಕಾಲೋನಿ ನಿವಾಸಿ. ಬಾಲ್ಯದ ದಿನಗಳನ್ನು ಬೆಂಗಳೂರಿನಲ್ಲಿಯೇ ಕಳೆದಿದ್ದಾರೆ. ನಗರದ ಬಿಷಪ್ ಕಾಟನ್ ಬಾಯ್ಸ್ ಸ್ಕೂಲ್‌ನಲ್ಲಿ 1981ರವರೆಗೆ ವ್ಯಾಸಂಗ ಮಾಡಿದರು. 8ನೇ ತರಗತಿಯಿಂದ ವಿಜಯಪುರದ ಸೈನಿಕ ಶಾಲೆಗೆ ಸೇರಿದರು. 12ನೇ ತರಗತಿ ಮುಗಿಯುತ್ತಿದ್ದಂತೆ ಮೊದಲ ಪ್ರಯತ್ನದಲ್ಲೇ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದರು. 1987ರಲ್ಲಿ ತಮ್ಮ 19ನೇ ವಯಸ್ಸಿಗೆ ನೌಕಾಪೌಡೆಯಲ್ಲಿ ಅಧಿಕಾರಿಯಾಗಿ ಸೇರ್ಪಡೆಗೊಂಡರು.
ನೌಕಾಪಡೆಯಲ್ಲಿ ಅನೇಕ ಮಹತ್ವದ ಹುದ್ದೆಗಳನ್ನು ಅಲಂಕರಿಸಿರುವ ಕೃಷ್ಣ ಸ್ವಾಮಿನಾಥನ್ ಅವರು ಪರಮ ವಿಶಿಷ್ಟ ಸೇವಾ ಪದಕ, 30 ವರ್ಷಗಳ ಸೇವಾ ಪದಕ ಸೇರಿದಂತೆ ನೌಕಾಪಡೆಯ ಅನೇಕ ಪದಕಗಳ ಗೌರವಕ್ಕೆ ಭಾಜನರಾಗಿದ್ದಾರೆ. ದೇಶ ಸೇವೆಯಲ್ಲಿ ಸುದೀರ್ಘ 39 ವರ್ಷಗಳ ಅನುಭವ ಹೊಂದಿದ್ದಾರೆ.