ಸಾರಾಂಶ
ಬೆಂಗಳೂರು : ಬೆಂಗಳೂರು ನಂತರ ಇದೀಗ ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬಿ-ಖಾತಾ ಆಸ್ತಿಗಳಿಗೆ ಎ ಖಾತಾ ಅಥವಾ ಅದಕ್ಕೆ ಸಮನಾದ ಖಾತಾ ನೀಡುವ ಕುರಿತು ಸರ್ಕಾರ ಚಿಂತನೆ ನಡೆಸಿದೆ. ಮುಂದಿನ ಸಚಿವ ಸಂಪುಟದಲ್ಲಿ ಈ ಕುರಿತ ಪ್ರಸ್ತಾವನೆ ಚರ್ಚೆಗೆ ಬರುವ ಸಾಧ್ಯತೆಗಳಿವೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಬಿ-ಖಾತಾ ಗೊಂದಲಗಳಿಗೆ ತೆರೆ ಎಳೆಯಲು ರಾಜ್ಯ ಸರ್ಕಾರ 2024ರ ಸೆ. 30ರವರೆಗೆ ಬಿಬಿಎಂಪಿ ನೀಡಿರುವ ಎಲ್ಲ ಬಿ-ಖಾತಾ ಆಸ್ತಿಗಳಿಗೆ ಎ-ಖಾತಾ ಅಥವಾ ಅದಕ್ಕೆ ಸಮನಾದ ಖಾತಾ (ಕಾನೂನು ಬದ್ಧ) ನೀಡಲು ಕಳೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಅದೇ ಮಾದರಿಯನ್ನು ಇದೀಗ ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೂ ಅನ್ವಯಿಸಲು ಚರ್ಚೆ ನಡೆಸಲಾಗಿದೆ. ಸಚಿವ ಈಶ್ವರ್ ಖಂಡ್ರೆ ನೇತೃತ್ವದ ಸಚಿವ ಸಂಪುಟ ಉಪಸಮಿತಿಯಲ್ಲಿ ಈ ಕುರಿತು ಧೀರ್ಘ ಚರ್ಚೆ ನಡೆಸಲಾಗಿದ್ದು, ಶೀಘ್ರದಲ್ಲಿ ಈ ಕುರಿತು ಸರ್ಕಾರಕ್ಕೆ ಶಿಫಾರಸು ಮಾಡಲಾಗುತ್ತಿದೆ. ಅಲ್ಲದೆ, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರ ಚರ್ಚೆಗೆ ತೆಗೆದುಕೊಳ್ಳುವಂತೆಯೂ ಶಿಫಾರಸು ಮಾಡಲಾಗುತ್ತಿದೆ.
ಕ್ರಮಬದ್ಧವಲ್ಲದ ನಿವೇಶನ ಅಥವಾ ಆಸ್ತಿಗಳಿಗೆ ಕೆಎಂಸಿ ಕಾಯ್ದೆ ಅಡಿ ಆಯಾ ನಗರ ಸ್ಥಳೀಯ ಸಂಸ್ಥೆಗಳು ಬಿ-ಖಾತಾ ನೀಡುತ್ತದೆ. ಆದರೆ, 2024ರ ಸೆಪ್ಟೆಂಬರ್‌ನಿಂದ ಅದನ್ನು ಸ್ಥಗಿತಗೊಳಿಸಲಾಗಿದೆ. ಬಿ-ಖಾತಾ ನೀಡಿದ್ದರಿಂದ ಸ್ಥಳೀಯ ಸಂಸ್ಥೆಗಳು ನಕ್ಷೆ ಮಂಜೂರಾತಿ, ಒಸಿ, ಸಿಸಿ ನೀಡುವಂತಿಲ್ಲ. ಅದರ ಮೂಲಕ ವಿದ್ಯುತ್, ನೀರು, ಒಳಚರಂಡಿ ಸಂಪರ್ಕ ಪಡೆಯಲು ಸಮಸ್ಯೆಗಳಾಗುತ್ತಿದೆ. ಅವುಗಳಿಗೆ ಮುಕ್ತಿ ನೀಡುವ ಸಂಬಂಧ ಬಿ-ಖಾತಾ ಅಡಿ ನೋಂದಣಿಯಾದ ಆಸ್ತಿಗಳಿಗೆ ಎ-ಖಾತಾ ನೀಡಲು ಕ್ರಮವಹಿಸಲಾಗುತ್ತಿದೆ.
ಸರ್ಕಾರ ಈ ಕುರಿತು ನಿರ್ಧಾರ ತೆಗೆದುಕೊಂಡರೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಸೇರಿ ಮತ್ತಿತರ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯ ಬಿ-ಖಾತಾ ಅಡಿ ನೋಂದಣಿಯಾಗಿರುವ ಆಸ್ತಿಗಳು ಎ-ಖಾತಾ ಪಡೆಯಲು ಸಾಧ್ಯವಾಗಲಿವೆ. ಅಲ್ಲದೆ, ರಾಜ್ಯಾದ್ಯಂತ 30 ಲಕ್ಷಕ್ಕೂ ಹೆಚ್ಚಿನ ಆಸ್ತಿಗಳಿಗೆ ಅನುಕೂಲವಾಗಲಿದೆ. ಒಮ್ಮೆ ಎ-ಖಾತಾ ಪಡೆದರೆ ನಕ್ಷೆ ಮಂಜೂರಾತಿ, ಒಸಿ, ಸಿಸಿ ಪ್ರಮಾಣಪತ್ರ, ವಿದ್ಯುತ್, ನೀರು, ಒಳಚರಂಡಿ ಸಂಪರ್ಕ ಪಡೆಯಲು ಸುಲಭವಾಗಲಿದೆ.
- ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲೂ ಜಾರಿ ಮಾಡುವ ಉದ್ದೇಶ
- ಮುಂದಿನ ಸಂಪುಟ ಸಭೆಯಲ್ಲಿ ಚರ್ಚೆ । 30 ಲಕ್ಷ ಆಸ್ತಿಗೆ ಅನುಕೂಲ---
- ಖಾತಾ ಗೊಂದಲಕ್ಕೆ ತೆರೆಗೆ ಯತ್ನ
- ಕಳೆದ ವರ್ಷ ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಬಿ-ಖಾತಾಗೆ ಎ-ಖಾತಾ ಭಾಗ್ಯ ನೀಡುವ ಯೋಜನೆ ಜಾರಿ
- ಈಗ ಅದೇ ಮಾದರಿಯನ್ನು ಇದೀಗ ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೂ ಅನ್ವಯಿಸಲು ಚಿಂತನೆ
- ಸಚಿವ ಈಶ್ವರ್ ಖಂಡ್ರೆ ನೇತೃತ್ವದ ಸಚಿವ ಸಂಪುಟ ಉಪಸಮಿತಿಯಲ್ಲಿ ಈ ಕುರಿತು ಧೀರ್ಘ ಚರ್ಚೆ
- ಶೀಘ್ರದಲ್ಲಿ ಈ ಕುರಿತು ಸರ್ಕಾರಕ್ಕೆ ಶಿಫಾರಸು. ಮಂದಿನ ಸಚಿವ ಸಂಪುಟ ಸಭೆಯಲ್ಲಿ ಇದರ ಸಮಾಲೋಚನೆ