ಎ- ಬಿ ಖಾತಾ ಮಾಡಿಸಲು ನಿಗದಿತ ದಾಖಲೆ ಸಲ್ಲಿಸಿ

| Published : Jul 19 2025, 01:00 AM IST

ಸಾರಾಂಶ

ಬಿ ಖಾತಾ ಆಂದೋಲನ ಪ್ರಾರಂಭವಾದಾಗಿನಿಂದ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಇದುವರೆಗೂ 7692 ಎ-ಖಾತಾ ಮಾಡಲಾಗಿದೆ, 2025 ಬಿ ಖಾತಾ ಮಾಡಲಾಗಿದ್ದು ಒಟ್ಟು 9817 ಖಾತೆಗಳನ್ನು ನಗರಾಡಳಿತ ಮಾಡಿದೆ. ಈ ಪೈಕಿ 902 ಬಿಖಾತೆ, 774 ಎ ಖಾತೆ ವಿತರಣೆ ಮಾಡಲಾಗಿದೆ. ನಗರಸಭೆ ಪೌರಾಯುಕ್ತರು ಅನುಮೋದಿಸಿದ್ದರೆ ಖಾತೆ ಆಗಿದೆ ಎಂದರ್ಥ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ನಗರಸಭೆಗೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ದಿಢೀರ್ ಭೇಟಿ ನೀಡಿ, ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಬಿ.ಖಾತಾ ವಿಚಾರ, ನಗರಸಭೆಯಲ್ಲಿ ಕಡತಗಳ ನಾಪತ್ತೆ, ಸಾರ್ವಜನಿಕರಿಗೆ ಸ್ಪಂಧನೆಯಿಲ್ಲದಿರುವ ಕುರಿತು ಅಧ್ಯಕ್ಷ ಎ.ಗಜೇಂದ್ರ ಮತ್ತು ಪೌರಾಯುಕ್ತ ಮನ್ಸೂರ್ ಅಲಿ ಅವರಿಂದ ಮಾಹಿತಿ ಪಡೆದುಕೊಂಡರು.

ದೂರುಗಳ ಪರಿಶೀಲಿಸಿ ಡಿಸಿ

ಜಿಲ್ಲಾಧಿಕಾರಿ ನಗರಸಭೆಗೆ ದಿಢೀರ್ ಬೇಟಿ ಮಾಹಿತಿ ಅರಿತು ಸ್ಥಳಕ್ಕೆ ತೆರಳಿದ ಮಾಧ್ಯಮದವರು ಜೊತೆಗೆ ಮಾತನಾಡಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಇ.ಸಿ. ಹಳೆಯದು ಕೊಡಬೇಕಿತ್ತು. ಬಿ.ಖಾತಾ ಹಿಂಬರಹದ ಪ್ರತಿಯ ಸಮಸ್ಯೆ, ಅರ್ಜಿಗಳನ್ನು ಕೊಟ್ಟಂತಹವರಿಗೆ ನಮ್ಮ ಅರ್ಜಿಗಳು ದೊರೆಯುತ್ತಿಲ್ಲ, ಎಲ್ಲೆಂದರಲ್ಲಿ ಬಿಸಾಡಿದ್ದಾರೆ, ಹೀಗೆ ನಾನಾ ದೂರುಗಳು ಬಂದಿದ್ದವು. ಈ ಬಗ್ಗೆ ಪರಿಶೀಲನೆ ನಡೆಸಿ ಸರಿಪಡಿಸಿಕೊಳ್ಳಲು ನಗರಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದರು. ಬಿ ಖಾತಾ ಆಂದೋಲನ ಪ್ರಾರಂಭವಾದಾಗಿನಿಂದ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಇದುವರೆಗೂ 7692 ಎ-ಖಾತಾ ಮಾಡಲಾಗಿದೆ, 2025 ಬಿ ಖಾತಾ ಮಾಡಲಾಗಿದ್ದು ಒಟ್ಟು 9817 ಖಾತೆಗಳನ್ನು ನಗರಾಡಳಿತ ಮಾಡಿದೆ. ಈ ಪೈಕಿ 902 ಬಿಖಾತೆ, 774 ಎ ಖಾತೆ ವಿತರಣೆ ಮಾಡಲಾಗಿದೆ. ನಗರಸಭೆ ಪೌರಾಯುಕ್ತರು ಎಲ್ಲಾ ಸರಿಯಿದೆ ಎಂದು ಅನುಮೋದನೆ ಮಾಡಿದ್ದರೆ ಅಲ್ಲಿಗೆ ಅದು ಖಾತಾ ಆಗಿದೆ ಎಂದೇ ಅರ್ಥ. ಆ ನಂತರ ಅರ್ಜಿದಾರರು ಇ.ಆಸ್ತಿ ತಂತ್ರಾಂಶದ ವೆಬ್‌ಸೈಟ್‌ಗೆ ಹೋಗಿ ಅನುಮೋದನಾ ಪ್ರತಿಯನ್ನು ಅವರಿದ್ದಲ್ಲಿಯೇ ಆನ್‌ ಲೈನ್ ಮೂಲಕ ಪಡೆಯಬಹುದು ಎಂದರು.

ಎ ಮತ್ತು ಬಿ-ಖಾತೆ ದಾಖಲೆ ಸಲ್ಲಿಸಿ

ಬಿ ಖಾತಾ, ಅಥವಾ ಎ ಖಾತಾ ಮಾಡಲು ಬೇಕಾದ ದಾಖಲಾತಿಗಳ ಬಗ್ಗೆ ಸಾರ್ವಜನಿಕರಿಗೆ ಜಿಲ್ಲಾಡಳಿತ, ನಗರಾಡಳಿತ ಸಾಕಷ್ಟು ಪ್ರಚಾರ ಮಾಡಿತ್ತು. ಇದರ ಹೊರತಾಗಿಯೂ ನಗರವಾಸಿಗಳು ಇ.ಸಿ. ಸಲ್ಲಿಸುವಾಗ ಸೇಲ್ ಡೀಡ್ ಮಾಡಿಸಿರುವ ದಿನಾಂಕದಿಂದ ಹಿಂದಿನದನ್ನು ಕೊಡಬೇಕಿತ್ತು. ಆದರೆ ಬಹಳಷ್ಟು ಮಂದಿ ಸೇಲ್ ಡೀಡ್ ನೋಂದಣಿ ಆದ ನಂತರದ್ದು ಕೊಟ್ಟಿದ್ದಾರೆ. ಹೀಗಾಗಿ ಕಂದಾಯ ಮತ್ತು ಇಸಿಯನ್ನು ಯಾರು ನಗರಸಭೆ ಸೂಚಿಸಿದ ನಿಯಮಾವಳಿಯಂತೆ ಸಲ್ಲಿಸಿದ್ದಾರೋ ಅವರೆಲ್ಲರಿಗೂ ಎ ಮತ್ತು ಬಿ-ಖಾತೆ ಮಾಡಿಕೊಡಲಾಗಿದೆ ಎಂದರು. ಈ ವೇಳೆ ನಗಸಭೆ ಅಧ್ಯಕ್ಷ ಎ.ಗಜೇಂದ್ರ, ಪೌರಾಯುಕ್ತ ಮನ್ಸೂರ್ ಅಲಿ, ಕಚೇರಿ ಸಿಬ್ಬಂದಿ ಇದ್ದರು.