ಹುಕ್ಕೇರಿ ವಿದ್ಯುತ್ ಸಂಘಕ್ಕೆ ತುರುಸಿನ ಮತದಾನ

| Published : Sep 29 2025, 03:02 AM IST

ಹುಕ್ಕೇರಿ ವಿದ್ಯುತ್ ಸಂಘಕ್ಕೆ ತುರುಸಿನ ಮತದಾನ
Share this Article
  • FB
  • TW
  • Linkdin
  • Email

ಸಾರಾಂಶ

ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆ ಸಣ್ಣ-ಪುಟ್ಟ ಗಲಾಟೆ ಹೊರತುಪಡಿಸಿದರೆ ಬಹುತೇಕ ಶಾಂತಿಯುತವಾಗಿ ನಡೆಯಿತು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ತೀವ್ರ ಕುತೂಹಲ ಕೆರಳಿಸಿದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆ ಸಣ್ಣ-ಪುಟ್ಟ ಗಲಾಟೆ ಹೊರತುಪಡಿಸಿದರೆ ಬಹುತೇಕ ಶಾಂತಿಯುತವಾಗಿ ನಡೆಯಿತು.

ಇಲ್ಲಿನ ಎಸ್.ಕೆ.ಹೈಸ್ಕೂಲ್ ಮೈದಾನ ಮತ್ತು ಬಾಪೂಜಿ ಶಿಕ್ಷಣ ಸಂಸ್ಥೆ ಮೈದಾನದಲ್ಲಿ ಬೆಳಗ್ಗೆಯಿಂದಲೇ ಬಿರುಸಿನಿಂದ ಸಾಗಿದ ಮತದಾನ ಸಂಜೆ 7ರವರೆಗೂ ನಡೆಯಿತು. ಮತದಾರರು ಸರದಿ ಸಾಲಿನಲ್ಲಿ ನಿಂತು ಹುಮ್ಮಸ್ಸಿನಿಂದಲೇ ಮತ ಚಲಾಯಿಸಿದರು. ಒಟ್ಟು 15 ನಿರ್ದೇಶಕರ ಸಂಖ್ಯಾಬಲದ ಈ ಸಂಘದ ಚುನಾವಣೆಯಲ್ಲಿ 32 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ. ಸಾಮಾನ್ಯ ಕ್ಷೇತ್ರದಿಂದ 9 ಜನ, ಮಹಿಳಾ ಕ್ಷೇತ್ರದಿಂದ 2, ಹಿಂದುಳಿದ ಅ ವರ್ಗದಿಂದ 1, ಹಿಂದುಳಿದ ಮತ್ತು ಬ ವರ್ಗದಿಂದ 1, ಪರಿಶಿಷ್ಟ ಜಾತಿಗೆ 1, ಪರಿಶಿಷ್ಟ ಪಂಗಡದ 1 ಸ್ಥಾನಕ್ಕೆ ಮೀಸಲಾತಿ ಕಲ್ಪಿಸಲಾಗಿದೆ.

ಒಟ್ಟು 122 ವರೆಗೆ ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಚುನಾವಣಾ ಕರ್ತವ್ಯಕ್ಕೆ ಒಟ್ಟು 812 ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಮತದಾರರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನೋಡಕೊಳ್ಳಲು ಪೊಲೀಸ್, ಸಹಾಯವಾಣಿ, ಕುಡಿಯುವ ನೀರು, ತಾತ್ಕಾಲಿಕ ಶೌಚಾಲಯ, ವಿದ್ಯುತ್, ಕ್ಯಾಮರಾ ಅಳವಡಿಕೆ, ವಿಕಲಚೇತನರಿಗೆ ಮತ್ತು ವೃದ್ದರಿಗೆ ವೀಲ್‌ಚೇರ್ ವ್ಯವಸ್ಥೆ ಮಾಡಲಾಗಿತ್ತು.

ಅದೃಷ್ಟ ಪರೀಕ್ಷೆಗೆ ಇಳಿದ ಅಭ್ಯರ್ಥಿಗಳು:

ಸಾಮಾನ್ಯ ಕ್ಷೇತ್ರದಿಂದ ಅಮರ ಮಧುಕರ ನಲವಡೆ (ಸಂಕೇಶ್ವರ), ಅಶೋಕ ಬಸವಂತಪ್ಪ ಪಟ್ಟಣಶೆಟ್ಟಿ (ಹುಕ್ಕೇರಿ), ಲವ (ಪೃಥ್ವಿ) ರಮೇಶ ಕತ್ತಿ (ಬೆಲ್ಲದ ಬಾಗೇವಾಡಿ), ಕಿರಣ ಶಂಕರ ಕಲ್ಲಟ್ಟಿ (ನೊಗನಿಹಾಳ), ಗಜಾನನ ಉರ್ಫ ಘಟಗೆಪ್ಪಾ ಮಲ್ಲಪ್ಪಾ ಮಗದುಮ್ಮ (ಬೆಣಿವಾಡ), ಕಲಗೌಡಾ ಬಸನಗೌಡಾ ಪಾಟೀಲ (ಯಲ್ಲಾಪೂರ), ಪ್ರಭುದೇವ ಬಸಗೌಡಾ ಪಾಟೀಲ (ಅಮ್ಮಿನಭಾಂವಿ), ವಿನಯ ಅಪ್ಪಯ್ಯಗೌಡ ಪಾಟೀಲ (ಅಮ್ಮಿನಭಾಂವಿ), ಶಶಿರಾಜ ಪಾಟೀಲ ಬಾಪುಸಾಹೇಬ (ಸೊಲ್ಲಾಪೂರ), ಬಸಪ್ಪ ಲಗಮಾ ಮರಡಿ (ಕೊಟಬಾಗಿ), ಬಸಗೌಡಾ ಪರಪ್ಪಾ ಮಗನ್ನವರ (ಎಲಿಮುನ್ನೋಳಿ), ಶಿವಕುಮಾರ ಬಸವರಾಜ ಮಟಗಾರ (ಘೋಡಗೇರಿ), ಶಿವನಗೌಡಾ ಸತ್ತೆಪ್ಪಾ ಮದವಾಲ (ಸುಲ್ತಾನಪುರ), ಮಹಾವೀರ ವಸಂತ ನಿಲಜಗಿ (ಹುಕ್ಕೇರಿ), ಶಿವಾನಂದ ಉರ್ಫ ನಂದು ಶಿವಪುತ್ರ ಮುಡಸಿ (ಸಂಕೇಶ್ವರ), ವರ್ಧಮಾನ ಸರದಾರ ತಾತಪ್ಪಾ (ಯರನಾಳ), ಮುನ್ನೋಳಿ ಲಕ್ಷ್ಮಣ ಬಸವರಾಜ (ಹೆಬ್ಬಾಳ), ವಾಸೇದಾರ ಕೆಂಪಣ್ಣಾ ಸಾತಪ್ಪಾ (ಹಂಡ್ಯಾನಟ್ಟಿ), ಶಿರಕೊಳಿ ಶಂಕರಪ್ಪಾ ಶಿವಪುತ್ರಪ್ಪಾ (ಸಂಕೇಶ್ವರ), ಕ್ಷೀರಸಾಗರ ಮಹಾದೇವ ಬಾಬು (ಸೊಲ್ಲಾಪೂರ) ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಮಹಿಳಾ ಕ್ಷೇತ್ರದಿಂದ ನಾಯಿಕವಾಡಿ ಮಹಬೂಬಿ ಗೌಸಅಜಂ (ಹುಕ್ಕೇರಿ), ಪಾಟೀಲ ಭಾಗ್ಯಶ್ರೀ ಬಾಬಾಗೌಡ (ಹೆಬ್ಬಾಳ), ಮೂಡಲಗಿ ಮಂಗಲ ಗುರಸಿದ್ದಪ್ಪಾ (ಶಿಂದಿಹಟ್ಟಿ), ಸುಮಿತ್ರಾ ಲಕ್ಷ್ಮಣ ಶಿಡ್ಲಹಾಳ (ಪಾಶ್ಚಾಪುರ) ಸ್ಪರ್ಧೆಯಲ್ಲಿದ್ದಾರೆ. ಹಿಂದುಳಿದ ಅ ವರ್ಗ ಕ್ಷೇತ್ರದಿಂದ ಕಳ್ಳಿ ಗಜಾನನ ನಿಂಗಪ್ಪಾ (ಸಂಕೇಶ್ವರ), ಹೆಗಡೆ ಶಂಕರ ವಿಠೋಬಾ (ಸಂಕೇಶ್ವರ) ಕಣದಲ್ಲಿದ್ದರೆ, ಹಿಂದುಳಿದ ಬ ವರ್ಗ ಕ್ಷೇತ್ರದಿಂದ ದಯಾನಂದ ಮಾರುತಿ ಪಾಟೀಲ (ದಡ್ಡಿ), ಸತ್ತೆಪ್ಪಾ ಭರಮಣ್ಣಾ ನಾಯಿಕ (ಬೆಳವಿ) ಸ್ಪರ್ಧೆಯಲ್ಲಿದ್ದಾರೆ.

ಇನ್ನು ಪರಿಶಿಷ್ಟ ಜಾತಿ ಕ್ಷೇತ್ರದಿಂದ ಸನ್ನಾಯಿಕ ಶ್ರೀಮಂತ ಗಂಗಪ್ಪಾ (ಕಣಗಲಾ), ಹೂಲಿ ಲಕ್ಷ್ಮಣ ಸುರೇಶ (ಬೆಲ್ಲದ ಬಾಗೇವಾಡಿ) ಕಣದಲ್ಲಿದ್ದರೆ, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಬಸವರಾಜ ಲಗಮಣ್ಣಾ ನಾಯಿಕ (ಗುಟಗುದ್ದಿ), ಲಂಕೆಪ್ಪಗೋಳ ಬಸವಣ್ಣೆ ಸಣ್ಣಪ್ಪ (ಗುಟಗುದ್ದಿ) ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಕತ್ತಿ-ಜಾರಕಿಹೊಳಿ ಬಣಗಳ ನಡುವೆ ನೇರಾನೇರ ಸ್ಪರ್ಧೆ

ಸಹಕಾರಿ ತತ್ವದಡಿ ವಿದ್ಯುತ್ ಸರಬರಾಜು ಮಾಡುವ ದೇಶದ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಸ್ಥೆಯ ಚುನಾವಣೆಯು ಜಿಲ್ಲೆ ಅಷ್ಟೇ ಅಲ್ಲದೇ ರಾಜ್ಯದ ಗಮನ ಸೆಳೆದಿದೆ. ಕತ್ತಿ ಮತ್ತು ಜಾರಕಿಹೊಳಿ ಬಣಗಳ ನಡುವೆ ನೇರಾನೇರ ಸ್ಪರ್ಧೆ ಏರ್ಪಟ್ಟಿದೆ. ಉಭಯ ಬಣಗಳು ತಮ್ಮ ಗುಂಪಿನ ಗೆಲುವಿನ ಉಮೇದಿನಲ್ಲಿದ್ದಾರೆ.

ಜಾರಕಿಹೊಳಿ- ಜೊಲ್ಲೆ ಗುಂಪು ಅಪ್ಪಣಗೌಡ ಪಾಟೀಲ ಪೆನಲ್ ಮೂಲಕ ಮತದಾರರ ಮನವೊಲಿಸುವ ಪ್ರಯತ್ನ ನಡೆಸಿ ಸಂಸ್ಥೆಯ ಅಧಿಕಾರವನ್ನು ತಮ್ಮಲ್ಲೇ ಉಳಿಸಿಕೊಳ್ಳುವ ಕಸರತ್ತು ನಡೆಸಿದ್ದರೆ, ಕತ್ತಿ- ಎ.ಬಿ.ಪಾಟೀಲ ಗುಂಪು ಸ್ವಾಭಿಮಾನ ಪೆನಲ್ ಮೂಲಕ ಅಖಾಡಕ್ಕಿಳಿದಿದ್ದು ಕೈತಪ್ಪಿ ಹೋಗಿರುವ ಸಂಘದ ಚುಕ್ಕಾಣಿಯನ್ನು ಮರಳಿ ವಶ ಪಡೆಯುವ ವಿಶ್ವಾಸದಲ್ಲಿದೆ. ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮಾಜಿ ಸಂಸದ ರಮೇಶ ಕತ್ತಿ, ಶಾಸಕ ನಿಖಿಲ್ ಕತ್ತಿ ಸಹಿತ ಅನೇಕರು ಮತ ಚಲಾಯಿಸಿದರು. ಮತಗಟ್ಟೆ ಮುಂಭಾಗ ಕತ್ತಿ-ಜಾರಕಿಹೊಳಿ ಬೆಂಬಲಿಗರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ವಾಗ್ವಾದ ನಡೆಯಿತು. ಇದೇ ವೇಳೆ ಮತಕೇಂದ್ರ ಬಳಿ ಜಮಾಯಿಸಿದ ಸಹಸ್ರಾರು ಜನರನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದರು. ಇದರಿಂದ ಕೆರಳಿದ ಜನರು ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದರು.