ಸರ್ವಜ್ಞ ಸಮಾಜದ ಅಂಕು-ಡೊಂಕು ತಿದ್ದಿದ ನಾಯಕ

| Published : Feb 21 2025, 12:45 AM IST

ಸಾರಾಂಶ

ಸರಳ ಭಾಷೆಯಲ್ಲಿ ಜನಸಾಮಾನ್ಯರಿಗೆ ಅರ್ಥೈಸುವ ಶೈಲಿಯಲ್ಲಿ ತ್ರಿಪದಿ ರಚಿಸಿದ ಸರ್ವಜ್ಞ ನೀಡಿದ ಸಂದೇಶಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಸರಳ ಭಾಷೆಯಲ್ಲಿ ಜನಸಾಮಾನ್ಯರಿಗೆ ಅರ್ಥೈಸುವ ಶೈಲಿಯಲ್ಲಿ ತ್ರಿಪದಿ ರಚಿಸಿದ ಸರ್ವಜ್ಞ ನೀಡಿದ ಸಂದೇಶಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣಲ್ಲಿ ಗುರುವಾರ ಆಯೋಜಿಸಿದ್ದ ಸರ್ವಜ್ಞ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸಮಾಜದ ಅಂಕುಡೊಂಕುಗಳನ್ನು, ಮೌಢ್ಯಗಳನ್ನು ನಿರ್ಧಾಕ್ಷಿಣ್ಯವಾಗಿ, ಕಟುವಾಗಿ ಟೀಕಿಸಿ ತನ್ಮೂಲಕ ಸಮಾಜ ತಿದ್ದಲು ಸರ್ವಜ್ಞರು ಪ್ರಯತ್ನಿಸಿದ್ದಾರೆ ಎಂದರು. ಕರ್ನಾಟಕ ಕುಂಬಾರ ಮಹಿಳಾ ಮಹಾಸಭಾ ಅಧ್ಯಕ್ಷೆ ಎಸ್.ಬೈಲಮ್ಮ ಮಾತನಾಡಿ, ಪ್ರತ್ಯೇಕ ಕುಂಬಾರ ಅಭಿವೃದ್ಧಿ ನಿಗಮ ಸ್ಥಾಪಿಸಿ, 200 ಕೋಟಿ ರು. ಅನುದಾನ ನೀಡಬೇಕು. ಪ್ರತಿಯೊಂದು ಹಳ್ಳಿಯಲ್ಲಿ ಕುಂಬಾರಿಕೆ ಪ್ರೋತ್ಸಾಯಿಸಲು ಮಣ್ಣು ಪರಿಷ್ಕರಣಾ ಘಟಕ, ಪ್ರತಿ ತಾಲೂಕಿನಲ್ಲಿಯೂ ಕುಂಬಾರರ ಮಣ್ಣಿನ ಮಡಿಕೆ ಮಾರಾಟ ಮಾಡಲು ಮಾರುಕಟ್ಟೆ ವ್ಯವಸ್ಥೆ ಹಾಗೂ ಮಳಿಗೆಗಳನ್ನು ಸ್ಥಾಪಿಸಬೇಕು. ಪ್ರತಿಯೊಂದು ಸರ್ಕಾರಿ ಕಚೇರಿ ಹಾಗೂ ಶಾಲಾ-ಕಾಲೇಜು, ವಸತಿ ನಿಲಯಗಳಲ್ಲಿ ಕುಡಿಯುವ ನೀರಿಗೆ ಮಣ್ಣಿನ ಮಡಿಕೆಗಳನ್ನು ಬಳಸುವಂತೆ ಆದೇಶಿಸುವುದೂ ಸೇರಿದಂತೆ ಕುಂಬಾರ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿಗೆ ಮನವಿ ಪತ್ರ ಸಲ್ಲಿಸಿದರು. ಮನವಿ ಸಲ್ಲಿಕೆ ಪ್ರಕ್ರಿಯೆ ಮುಗಿದ ತರುವಾಯ ಸರ್ವಜ್ಞ ಜಯಂತಿ ಆಚರಣೆಗೆ ತೆರೆ ಬಿದ್ದಿತು. ಜಿಲ್ಲಾಡಳಿತದಿಂದ ಆಚರಿಸುವ ಪ್ರತಿ ಜಯಂತಿ ಆಚರಣೆಗಳೂ ಇದೇ ರೀತಿ ಇರುತ್ತವೆ. ಮಹನೀಯರ ಆದರ್ಶಗಳ ಬಗ್ಗೆ ಚರ್ಚೆಯಾಗದೆ ಅವರು ಸೇರಿರುವ ಜಾತಿಗಳ ಶ್ರೇಯೋಭಿವೃದ್ದಿಗೆ ಆಗಬೇಕಾಗಿರುವ ಪ್ರಸ್ತಾಪಗಳು ನಡೆಯುತ್ತವೆ. ಗಾಂಧಿ ಜಯಂತಿಯಲ್ಲಿ ಇಂತಹ ವಾತಾವರಣ ಇರುವುದಿಲ್ಲವೆಂಬುದೇ ಸಮಾಧಾನಕರ. ಗಾಂಧಿ ನಮ್ಮವನೆಂದು ಯಾರೂ ಕ್ಲೇಮು ಮಾಡುತ್ತಿಲ್ಲ.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ, ಆಹಾರ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ, ಜಿಲ್ಲಾ ಕುಂಬಾರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ಯರ್ರಿಸ್ವಾಮಿ, ಕುಂಬಾರ ಗುಂಡಯ್ಯ ಮಹಾಸಂಸ್ಥಾನದ ನಿರ್ದೇಶಕ ಕೆ.ಟಿ.ರಮೇಶ್, ಕರ್ನಾಟಕ ಕುಂಬಾರ ಮಹಿಳಾ ಮಹಾಸಭಾದ ಕಾರ್ಯದರ್ಶಿ ಹೇಮಾವತಿ, ಜಿಲ್ಲಾ ಕುಂಬಾರ ಸಮಾಜ ಉಪಾಧ್ಯಕ್ಷ ಸುನಿಲ್ ಸೇರಿದಂತೆ ಕುಂಬಾರ ಸಮಾಜದ ಮುಖಂಡರು ಹಾಗೂ ಗಣ್ಯರು ಇದ್ದರು.