ಮನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿ ಹೆಸರನ್ನು ಬದಲಾಯಿಸುತ್ತಿರುವುದು ನರೇಂದ್ರ ಮೋದಿ, ಅಮಿತ ಶಾ ಅವರ ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತದೆ. ಈ ಬಗ್ಗೆ ದೇಶಾದ್ಯಂತ ಜ.5ರಿಂದ ನರೇಗಾ ಬಚಾವ್ ಎಂದು ಬಿಜೆಪಿ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ ಹೇಳಿದರು.
ಹಾವೇರಿ: ಮನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿ ಹೆಸರನ್ನು ಬದಲಾಯಿಸುತ್ತಿರುವುದು ನರೇಂದ್ರ ಮೋದಿ, ಅಮಿತ ಶಾ ಅವರ ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತದೆ. ಈ ಬಗ್ಗೆ ದೇಶಾದ್ಯಂತ ಜ.5ರಿಂದ ನರೇಗಾ ಬಚಾವ್ ಎಂದು ಬಿಜೆಪಿ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಮಹಾತ್ಮಾ ಗಾಂಧಿ ದೇಶಕ್ಕಾಗಿ ಹೋರಾಟ ಮಾಡಿದ್ದರೋ ಅಂತಹವರನ್ನು ಬಿಜೆಪಿ ದೂರ ಮಾಡುತ್ತಿದೆ. ಬಿಜೆಪಿಯವರಿಗೆ ಅವರ ತತ್ವ ಸಿದ್ಧಾಂತದಲ್ಲಿ ಬದ್ಧತೆ ಇಲ್ಲ. ಮನರೇಗಾ ಯೋಜನೆಯಡಿ ಇದ್ದ ಗಾಂಧೀಜಿ ಹೆಸರನ್ನು ತೆಗೆದಿದ್ದಾರೆ. ಪಂ. ಜವಾಹರಲಾಲ ನೆಹರೂ, ಇಂದಿರಾ ಗಾಂಧಿ, ರಾಜೀವಗಾಂಧಿ ಅವರ ಹೆಸರನ್ನು ತೆಗೆದರು. ಕೊನೆಗೆ ಗಾಂಧೀಜಿಯವರನ್ನು ದೂರ ಮಾಡುತ್ತಿದ್ದಾರೆ. ಯಾಕೆ ಗಾಂಧೀಜಿ ಅವರ ಸಿದ್ಧಾಂತಗಳನ್ನು ಒಪ್ಪುತ್ತಿಲ್ಲ. ಈ ಬಗ್ಗೆ ಬಿಜೆಪಿ ಶಾಸಕರನ್ನು ಕೇಳಿದರೆ ನಮಗೆ ಗೊತ್ತಿಲ್ಲ ಎಂಬ ಉತ್ತರ ಕೊಡುತ್ತಾರೆ ಎಂದರು.ಸಿದ್ದರಾಮಯ್ಯ ಸರ್ಕಾರ ಕೇರಳ ನಿರಾಶ್ರಿತರಿಗೆ ಮನೆ ಕಟ್ಟಿಕೊಡುವ ಕೆಲಸ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಸರ್ಕಾರ ಮಾನವೀಯತೆ ದೃಷ್ಟಿಯಿಂದ ಕಷ್ಟದಲ್ಲಿರುವವರಿಗೆ ನೆರವಿನ ಹಸ್ತ ತೋರುತ್ತದೆ. ರಾಜ್ಯದಲ್ಲಿ ಎಲ್ಲಿಯೇ ಆಗಲಿ ಇಂತಹ ಘಟನೆಗಳು ನಡೆದರೆ ಅವರ ರಕ್ಷಣೆಗೆ ನಮ್ಮ ಸರ್ಕಾರ ಇರುತ್ತದೆ. ಕೆಲವು ರಾಜಕಾರಣಿಗಳು ಇದನ್ನು ಅಸ್ತ್ರವಾಗಿ ನೋಡುತ್ತಿದ್ದು, ಕೇರಳ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಹೀಗೆ ಹೇಳಿಕೆ ನೀಡುತ್ತಿದ್ದಾರೆ. ಯಾರು ಸ್ಥಳೀಯರು ಇದ್ದಾರೆ, ಯಾರಿಗೆ ಅನ್ಯಾಯ ಆಗಿದೆ, ಯಾರು ರೇಷನ್ ಕಾರ್ಡ್ ಹೊಂದಿರುವ ಬಡವರು ಇದ್ದಾರೆ ಅಂತಹವರ ನೆರವಿಗೆ ಧಾವಿಸುತ್ತದೆ ಎಂದರು.ಸಂಕ್ರಾಂತಿಗೆ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿದ ಅವರು, ಜ.15ಕ್ಕೆ ಸಂಕ್ರಾಂತಿ ಇದೆ. ಹಬ್ಬ ಮುಗಿದ ಬಳಿಕ ಚರ್ಚೆಯಾಗಬಹುದು. ಅಂತಿಮವಾಗಿ ಪಕ್ಷದ ವರಿಷ್ಠರು, ಮುಖ್ಯಮಂತ್ರಿಗಳು ತೀರ್ಮಾನ ತೆಗೆದುಕೊಳ್ಳುತ್ತಾರೆ. ಎರಡು ವರ್ಷ ಪ್ರಾಮಾಣಿಕವಾಗಿ ದುಡಿದಿದ್ದೇವೆ. ನುಡಿದಂತೆ ನಡೆದಿದ್ದೇವೆ. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬಂತೆ ಕೆಲಸ ಮಾಡುತ್ತಿದ್ದೇವೆ. ಕಳೆದ ಬಾರಿ ನನ್ನನ್ನು ಬಿಟ್ಟು ಉಳಿದವರಿಗೆ ಮಂತ್ರಿ ಮಾಡಿದರು, ಅವಕಾಶ ಸಿಗಲಿಲ್ಲ. ಬರುವ ದಿನಗಳಲ್ಲಿ ಸಂಪುಟ ವಿಸ್ತರಣೆಯಲ್ಲಿ ಅವಕಾಶ ಸಿಗುವ ವಿಶ್ವಾಸವಿದೆ ಎಂದು ಹೇಳಿದರು.
ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಮೊನ್ನೆ ತಾನೆ ಬೆಳಗಾವಿಯಲ್ಲಿ ಅಧಿವೇಶನ ನಡೆಯಿತು. ಅದರ ಬಗ್ಗೆ ಯಾವುದೇ ಚರ್ಚೆ ಮಾಡಲಿಲ್ಲ. ಈಗ ಬಂದು ಹಾದಿ ಬೀದಿಯಲ್ಲಿ ನಿಂತು ಮಾತಾಡುತ್ತಾರೆ. ಬದ್ಧತೆ ಇದ್ದಿದ್ದರೆ ಅಧಿವೇಶನದಲ್ಲಿ ಚರ್ಚೆ ಮಾಡಬೇಕಿತ್ತು. ಅದನ್ನು ಬಿಟ್ಟು ಊಟ ಉಪಾಹಾರದ ಬಗ್ಗೆ ಚರ್ಚೆ ಮಾಡಿ ಸಮಯ ವ್ಯರ್ಥ ಮಾಡಿದರು. ಬಿಜೆಪಿಗೆ ಆರೋಪ ಮಾಡುವ ಬದ್ಧತೆ ಇಲ್ಲ, ಬಿಜೆಪಿಯಿಂದ ಜನ ಭ್ರಮನಿರಸನರಾಗಿದ್ದಾರೆ. ಜನರಿಗೆ ಬಿಜೆಪಿ ಬಗ್ಗೆ ಅರಿವಾಗಿದೆ, 2028ರ ಚುನಾವಣೆಯಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದರು.