ಹೆಗಡೆಯಲ್ಲಿ ಬೋನಿಗೆ ಬಿದ್ದ ಚಿರತೆ

| Published : Nov 10 2023, 01:00 AM IST / Updated: Nov 10 2023, 01:01 AM IST

ಸಾರಾಂಶ

ಚಿರತೆಯಿಂದ ಅಪಾಯ ಘಟಿಸುವ ಮುನ್ನವೇ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದ್ದು ಬುಧವಾರ ರಾತ್ರಿ ಚಿರತೆ ಹಿಡಿಯಲು ಬೋನು ಇಟ್ಟಿದ್ದರು.

ಕುಮಟಾ:

ತಾಲೂಕಿನ ಹೆಗಡೆ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಕಾಣಿಸಿಕೊಂಡು ಜನರಲ್ಲಿ ಭೀತಿ ಮೂಡಿಸಿದ್ದ ಚಿರತೆಯೊಂದನ್ನು ಅರಣ್ಯಾಧಿಕಾರಿಗಳು ಗುರುವಾರ ಬೆಳಗಿನ ಜಾವ ಬೋನಿನಲ್ಲಿ ಬಂದಿಯಾಗಿಸಿದ್ದಾರೆ.

ಮೂರು ದಿನದ ಹಿಂದೆ ಹೆಗಡೆಯ ಒಳರಸ್ತೆಯೊಂದರಲ್ಲಿ ಸಾಗುತ್ತಿದ್ದ ಮಹಿಳೆಗೆ ಕಾಣಿಸಿಕೊಂಡಿದ್ದ ಚಿರತೆ ಕೆಲವರ ಜಾನುವಾರು, ನಾಯಿಗಳನ್ನು ಹಿಡಿದ ಬಗ್ಗೆಯೂ ಅರಣ್ಯ ಇಲಾಖೆಗೆ ಮಾಹಿತಿ ದೊರಕಿತ್ತು. ಹೀಗಾಗಿ ಅತಿಹೆಚ್ಚು ಜನ-ಜಾನುವಾರು ಬಾಹುಳ್ಯವಿರುವ ಹೆಗಡೆ ಸುತ್ತಮುತ್ತಲ ಪ್ರದೇಶದಲ್ಲಿ ಚಿರತೆಯಿಂದ ಅಪಾಯ ಘಟಿಸುವ ಮುನ್ನವೇ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದ್ದು ಬುಧವಾರ ರಾತ್ರಿ ಚಿರತೆ ಹಿಡಿಯಲು ಬೋನು ಇಟ್ಟಿದ್ದರು.ಡಿಎಫ್‌ಒ ರವಿಶಂಕರ ಸಿ., ಎಸಿಎಫ್ ಜಿ. ಲೋಹಿತ ಮಾರ್ಗದರ್ಶನದಲ್ಲಿ ಆರ್‌ಎಫ್‌ಒ ಎಸ್.ಟಿ. ಪಟಗಾರ, ಡಿಆರ್‌ಎಫ್‌ಒ ರಾಘವೇಂದ್ರ ಹೂವಣ್ಣ ಗೌಡ, ಅರಣ್ಯ ರಕ್ಷಕ ರಾಘವೇಂದ್ರ ನಾಯ್ಕ, ಸಂಗಮೇಶ, ಚಾಲಕ ಮಂಜು ಸುರೇಶ ನಾಯ್ಕ, ಉರಗ ರಕ್ಷಕ ಪವನ ನಾಯ್ಕ ಇನ್ನಿತರರೊಂದಿಗೆ ಊರಿನ ಜನರ ಸಹಕಾರದೊಂದಿಗೆ ಜನರಲ್ಲಿ ಭೀತಿಗೆ ಕಾರಣವಾಗಿದ್ದ ಅಜಮಾಸು ೪ ವರ್ಷದ ಗಂಡು ಚಿರತೆಯನ್ನು ಬೋನಿಗೆ ಬೀಳಿಸುವಲ್ಲಿ ಯಶಸ್ಷಿಯಾಗಿದ್ದಾರೆ. ಇದರಿಂದಾಗಿ ಹೆಗಡೆ ಭಾಗದ ಜನರಲ್ಲಿ ಮೂಡಿದ್ದ ಚಿರತೆ ಭಯ ದೂರವಾದಂತಾಗಿದೆ.